7/3, 65/5, 211/9: ಹೊಸ ಇತಿಹಾಸ ಬರೆದ ಡೆಲ್ಲಿ ಕ್ಯಾಪಿಟಲ್ಸ್
IPL 2205 DC vs LSG: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೃಹತ್ ಮೊತ್ತ ಚೇಸ್ ಮಾಡಿ ಗೆದ್ದಿರುವುದು ಅಪರೂಪ. ಆದರೆ ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲೇ ಡಿಸಿ ಪಡೆ ಪರಾಕ್ರಮ ಮೆರೆದಿದೆ. ಅದು ಸಹ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬಗ್ಗು ಬಡಿಯುವ ಮೂಲಕ. ಈ ಗೆಲುವಿನ ರೂವಾರಿ ಅಶುತೋಷ್ ಶರ್ಮಾ.

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 4ನೇ ಪಂದ್ಯದಲ್ಲಿ ರಣರೋಚಕ ಹೋರಾಟ ಕಂಡು ಬಂದಿದೆ. ಈ ರೋಚಕ ಹೋರಾಟದಲ್ಲಿ ಗೆದ್ದು ಬೀಗಿದ್ದು ಡೆಲ್ಲಿ ಕ್ಯಾಪಿಟಲ್ಸ್ (Delhi Capitals). ಅದು ಸಹ ಕೊನೆಯ ವಿಕೆಟ್ ಇರುವಾಗ ಸಿಕ್ಸ್ ಸಿಡಿಸುವ ಮೂಲಕ ಎಂಬುದೇ ವಿಶೇಷ. ವಿಶಾಖಪಟ್ಟಣದ ವೈಎಸ್ಆರ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ಮಿಚೆಲ್ ಮಾರ್ಷ್ (72) ಹಾಗೂ ನಿಕೋಲಸ್ ಪೂರನ್ (75) ಸ್ಪೋಟಕ ಇನಿಂಗ್ಸ್ ಆಡಿದರು. ಈ ಇನಿಂಗ್ಸ್ನ ನೆರವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿತು.
210 ರನ್ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ರನ್ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಈ ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ಮತ್ತೆರಡು ವಿಕೆಟ್ ಪತನವಾಯಿತು.
ಪರಿಣಾಮ ಕೇವಲ 65 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಡೆಲ್ಲಿ ಕ್ಯಾಪಿಟಲ್ಸ್ ಸೋಲಿನತ್ತ ಮುಖ ಮಾಡಿದ್ದರು. ಆದರೆ ಈ ಹಂತದಲ್ಲಿ ಕಣಕ್ಕಿಳಿದ ಅಶುತೋಷ್ ಶರ್ಮಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಟ್ರಿಸ್ಟನ್ ಸ್ಟಬ್ಸ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಅಶುತೋಷ್ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.
ಈ ಹಂತದಲ್ಲಿ ಸ್ಟಬ್ಸ್ (34) ಔಟಾದರು. ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಪ್ರಾಜ್ ನಿಗಮ್ ಸ್ಪೋಟಕ ಇನಿಂಗ್ಸ್ನೊಂದಿಗೆ ಅಶುತೋಷ್ಗೆ ಸಾಥ್ ನೀಡಿದರು. ಪರಿಣಾಮ 16 ಓವರ್ ಆಗುವಷ್ಟರಲ್ಲಿ ಡೆಲ್ಲಿ ಪಡೆಯ ಸ್ಕೋರ್ 160 ರ ಗಡಿದಾಟಿತು.
ಇದರ ನಡುವೆ ವಿಪ್ರಾಜ್ ನಿಗಮ್ 15 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 39 ರನ್ ಬಾರಿಸಿ ಔಟಾದರು. ಇದಾಗ್ಯೂ ಸೋಲು ಒಪ್ಪಿಕೊಳ್ಳಲು ಅಶುತೋಷ್ ಶರ್ಮಾ ಸಿದ್ಧರಿರಲಿಲ್ಲ. ಅಲ್ಲದೆ ಏಕಾಂಗಿ ಹೋರಾಟವನ್ನು ಮುಂದುವರೆಸಿದರು.
ಅಂತಿಮ 2 ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 22 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕುಲ್ದೀಪ್ ಯಾದವ್ ರನೌಟ್ ಆದರು. ಆದರೆ ಕೊನೆಯ ವಿಕೆಟ್ನೊಂದಿಗೆ ಹೋರಾಟ ಮುಂದುವರೆಸಿದ ಅಶುತೋಷ್ ಶರ್ಮಾ 19ನೇ ಓವರ್ನ ಕೊನೆಯ ಮೂರು ಎಸೆತಗಳಲ್ಲಿ 12 ರನ್ ಕಲೆಹಾಕಿದರು.
ಪರಿಣಾಮ ಅಂತಿಮ ಓವರ್ನಲ್ಲಿ ಆರು ರನ್ ಬೇಕಿತ್ತು. ಅತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 1 ವಿಕೆಟ್ನ ಅವಶ್ಯಕತೆ. ಆದರೆ ಸ್ಟ್ರೈಕ್ನಲ್ಲಿದ್ದ ಮೋಹಿತ್ ಶರ್ಮಾ, ಶಹಬಾಝ್ ಅಹ್ಮದ್ ಎಸೆದ ಕೊನೆಯ ಓವರ್ನ ಮೊದಲ ಎಸೆತವನ್ನು ಡಾಟ್ ಮಾಡಿದರು. ಅಲ್ಲದೆ 2ನೇ ಎಸೆತದಲ್ಲಿ ಸಿಂಗಲ್ ತೆಗೆದರು. ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಅಶುತೋಷ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 1 ವಿಕೆಟ್ನ ರೋಚಕ ಜಯ ತಂದುಕೊಟ್ಟರು.
ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಪಂದ್ಯದಲ್ಲಿ ಅಶುತೋಷ್ ಶರ್ಮಾ ಎದುರಿಸಿದ ಮೊದಲ 20 ಎಸೆತಗಳಲ್ಲಿ ಕಲೆಹಾಕಿದ್ದು 20 ರನ್ಗಳು ಮಾತ್ರ. ಆ ಬಳಿಕ ಎದುರಿಸಿದ 11 ಎಸೆತಗಳಲ್ಲಿ 46 ರನ್ ಚಚ್ಚಿದರು. ಈ ಮೂಲಕ 31 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 66 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
ಡೆಲ್ಲಿ ಕ್ಯಾಪಿಟಲ್ಸ್ ಜಯಭೇರಿ:
Never gave up hope 💪 Never stopped believing 👊
A special knock and match to remember for the ages 🥳#DC fans, how’s the mood? 😉
Scorecard ▶ https://t.co/aHUCFODDQL#TATAIPL | #DCvLSG | @DelhiCapitals pic.twitter.com/HYeLTrEjTn
— IndianPremierLeague (@IPL) March 24, 2025
ಡೆಲ್ಲಿ ಪಡೆಗೆ ಐತಿಹಾಸಿಕ ಜಯ:
2008 ರಿಂದ ಐಪಿಎಲ್ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ (ಡೆಲ್ಲಿ ಡೇರ್ ಡೆವಿಲ್ಸ್) ತಂಡವು 200+ ರನ್ ಚೇಸ್ ಮಾಡಿ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಇದಕ್ಕೂ ಮುನ್ನ ಭರ್ಜರಿ ಗೆಲುವು ದಾಖಲಿಸಿದ್ದು 2017 ರಲ್ಲಿ.
ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ
ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 209 ರನ್ಗಳನ್ನು ಬೆನ್ನತ್ತುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಶ್ರೇಷ್ಠ ಗೆಲುವು ದಾಖಲಿಸಿತ್ತು. ಇದಾದ ಬಳಿಕ ಡಿಸಿ ಪಡೆ ಅಮೋಘ ಗೆಲುವು ದಾಖಲಿಸಿರಲಿಲ್ಲ. ಆದರೆ ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ 210 ರನ್ಗಳನ್ನು ಬೆನ್ನತ್ತಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.