
ಐಪಿಎಲ್ 2026 (IPL 2026) ರ 43 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RR vs DC) ಪರಸ್ಪರ ಮುಖಾಮುಖಿಯಾಗಿದ್ದವು. ಇದು ರಾಜಸ್ಥಾನಕ್ಕೆ ಹತ್ತನೇ ಪಂದ್ಯ ಮತ್ತು ದೆಹಲಿಗೆ ಒಂಬತ್ತನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಈ ಆವೃತ್ತಿಯಲ್ಲಿ 4ನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಸಿಎಸ್ಕೆ ತಂಡವನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ. ಇತ್ತ 4ನೇ ಸೋಲಿಗೆ ಕೊರಳೊಡ್ಡಿದ ರಾಜಸ್ಥಾನ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬ್ಯಾಟಿಂಗ್ ಮಾಡಿ ದಾಖಲೆಯ 225 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 20ನೇ ಓವರ್‌ನಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ಗೆ ಉತ್ತಮ ಆರಂಭ ಸಿಗಲಿಲ್ಲ. ಮಿಚೆಲ್ ಸ್ಟಾರ್ಕ್ ಬೌಲ್ ಮಾಡಿದ ಮೊದಲ ಓವರ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಯಶಸ್ವಿ ಜೈಸ್ವಾಲ್, ಅದೇ ಓವರ್ನ ಮೂರನೇ ಎಸೆತದಲ್ಲಿ ಔಟಾದರು. ವೈಭವ್ ಸೂರ್ಯವಂಶಿ (4) ಕೂಡ ಎರಡನೇ ಓವರ್‌ನಲ್ಲಿ ಔಟಾದರು. ನಂತರ ನಾಯಕ ರಿಯಾನ್ ಪರಾಗ್, ಧ್ರುವ್ ಜುರೆಲ್ (42) ಅವರೊಂದಿಗೆ 102 ರನ್‌ಗಳ ಜೊತೆಯಾಟ ಕಟ್ಟುವುದರ ಜೊತೆಗೆ ಈ ಆವೃತ್ತಿಯ ಮೊದಲ ಅರ್ಧಶತಕವನ್ನು ಬಾರಿಸಿದರು.
ಆದಾಗ್ಯೂ ಶತಕದಂಚಿನಲ್ಲಿ ಎಡವಿದ ರಿಯಾನ್ ಪರಾಗ್ 90 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಡೊನೊವನ್ ಫೆರೇರಾ ಕೇವಲ 14 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿ ತಂಡವನ್ನು 225 ರನ್‌ಗಳಿಗೆ ಕೊಂಡೊಯ್ದರು. ದೆಹಲಿ ಪರ ಬೌಲಿಂಗ್‌ನಲ್ಲಿ ಮಿಂಚಿದ ಸ್ಟಾರ್ಕ್ 40 ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿದರು.
ಈ ಗುರಿ ಬೆನ್ನಟ್ಟಿದ ದೆಹಲಿಗೆ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಅದ್ಭುತ ಆರಂಭಿಕ ಜೊತೆಯಾಟ ಸಿಕ್ಕಿತು. ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಪಾತುಮ್ ನಿಸ್ಸಂಕಾ (62) ಈ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಫಾರ್ಮ್‌ನಲ್ಲಿರುವ ರಾಹುಲ್ ಜೊತೆಗೆ ನಿಸ್ಸಂಕಾ 9.3 ಓವರ್‌ಗಳಲ್ಲಿ 110 ರನ್‌ಗಳನ್ನು ಸೇರಿಸಿದರು. ರಾಹುಲ್ (75) ಕೂಡ 27 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು ಮತ್ತು ನಿತೀಶ್ ರಾಣಾ (33) ಅವರೊಂದಿಗೆ ತಂಡವನ್ನು 171 ರನ್‌ಗಳ ಗಡಿ ದಾಟಿಸಿದರು.
RR vs DC IPL 2026 Highlights: ಪರಾಗ್ ಹೋರಾಟ ವ್ಯರ್ಥ; ಡೆಲ್ಲಿಗೆ ಸುಲಭ ಜಯ
ತಂಡದ ಮೊತ್ತ 177 ರನ್ಗಳಿದ್ದಾಗ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಔಟಾದರು. ಆದಾಗ್ಯೂ, ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 18) ಮತ್ತು ಅಶುತೋಷ್ ಶರ್ಮಾ (ಅಜೇಯ 25) ಆ ನಂತರ ಅರ್ಧಶತಕದ ಜೊತೆಯಾಟವನ್ನಾಡಿ ತಂಡವನ್ನು ದೊಡ್ಡ ಗೆಲುವಿನತ್ತ ಮುನ್ನಡೆಸಿದರು. ಡೆಲ್ಲಿ 19.1 ಓವರ್‌ಗಳಲ್ಲಿ ಗುರಿಯನ್ನು ತಲುಪಿ, ಐಪಿಎಲ್ ಇತಿಹಾಸದಲ್ಲಿ ಅತಿದೊಡ್ಡ ರನ್ ಬೆನ್ನಟ್ಟಿದ ದಾಖಲೆಯನ್ನು ಮಾಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 pm, Fri, 1 May 26