
ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs GT Qualifier 1) ತಂಡದ ನಾಯಕ ರಜತ್ ಪಾಟಿದರ್ (Rajat Patidar) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ನಿರ್ಣಾಯಕ ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ರಜತ್ ಬಲಿಷ್ಠ ಗುಜರಾತ್ ಬೌಲಿಂಗ್ ವಿಭಾಗವನ್ನು ಹೈರಾಣಾಗಿಸಿದರು. ತಂಡ ಆರಂಭಿಕ ಆಘಾತಕ್ಕೆ ಸಿಲುಕಿಕೊಂಡಿದ್ದರೂ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ರಜತ್ ಆ ಬಳಿಕ ರೌದ್ರಾವತಾರ ತಾಳಿದರು ಇದರ ಪರಿಣಾಮವಾಗಿ ರಜತ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಮತ್ತಷ್ಟು ಉಗ್ರರೂಪ ತಾಳಿದ ರಜತ್ 20ನೇ ಓವರ್ವರೆಗೂ ಅಜೇಯರಾಗಿ ಉಳಿದ ರಜತ್ ಕೇವಲ 32 ಎಸೆತಗಳಲ್ಲಿ 93 ರನ್ ಬಾರಿಸಿದರು. ರಜತ್ ಅವರ ಈ ಅಬ್ಬರದ ಬ್ಯಾಟಿಂಗ್ನಿಂದಾಗಿ ಆರ್‌ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ ಕಲೆಹಾಕಿತು.
ಈ ಪಂದ್ಯದಲ್ಲಿ ಆರ್ಸಿಬಿಗೆ ಸಾಧಾರಣ ಆರಂಭ ಸಿಕ್ಕಿತು. ವೆಂಕಟೇಶ್ ಅಯ್ಯರ್ 19 ರನ್‌ಗಳ ಇನ್ನಿಂಗ್ಸ್ ಆಡಿ ಔಟಾದರು. ಆದರೆ ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ತಂಡವನ್ನು ಪವರ್ಪ್ಲೇನಲ್ಲಿಯೇ 70 ರನ್‌ಗಳ ಗಡಿ ದಾಟಿಸಿದರು. ಜೊತೆಗೆ ಇವರಿಬ್ಬರು ಅರ್ಧಶತಕದತ್ತ ದಾಪುಗಾಲಿಟ್ಟಿದ್ದರು. ಆದರೆ ಈ ವೇಳೆ ದಾಳಿಗಿಳಿದ ಜೇಸನ್ ಹೊಲ್ಡರ್ ಒಂದೇ ಓವರ್ನಲ್ಲಿ ಇವರಿಬ್ಬರನ್ನು ಔಟ್ ಮಾಡಿದರು.
ಹೀಗಾಗಿ ಬ್ಯಾಕ್ ಟು ಬ್ಯಾಕ್ ಆಘಾತದ ನಡುವೆ ಬ್ಯಾಟಿಂಗ್ಗೆ ಬಂದ ನಾಯಕ ರಜತ್ ಪಾಟಿದರ್, ಆಲ್‌ರೌಂಡರ್ ಕೃನಾಲ್ ಪಾಂಡ್ಯ ಜೊತೆಗೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಆರಂಭದಲ್ಲಿ ಇವರಿಬ್ಬರಿಗೆ ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ರಜತ್ ಒಂದೇ ಓವರ್ನಲ್ಲಿ ಎರಡು ಕ್ಯಾಚ್ಗಳನ್ನು ನೀಡಿದರು. ಆದರೆ ಗುಜರಾತ್ ಫೀಲ್ಡರ್ಗಳು ಆ ಕ್ಯಾಚ್ಗಳನ್ನು ಕೈಬಿಟ್ಟರು. ಈ ಎರಡು ಜೀವದಾನಗಳ ಲಾಭ ಪಡೆದ ರಜತ್ ಬೌಂಡರಿಗಳ ಮಳೆ ಸುರಿಸಿದರು.
ವಾಸ್ತವವಾಗಿ 10 ಎಸೆತಗಳಲ್ಲಿ 14 ರನ್ ಗಳಿಸಿದ್ದಾಗ ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ 14 ನೇ ಓವರ್ನ ಮೊದಲ ಎಸೆತದಲ್ಲಿ ಕ್ಯಾಚ್ ನೀಡಿದ್ದರು. ಆದರೆ ಸ್ವಲ್ಪ ಕಷ್ಟಕರವಾದ ಕ್ಯಾಚ್ ಅನ್ನು ಹಿಡಿಯಲು ಸಾಧ್ಯವಾಗಲಿಲ್ಲ. ನಂತರ ಪಾಟಿದಾರ್ ಎರಡನೇ ಎಸೆತದಲ್ಲಿ ಬೌಂಡರಿ ಹೊಡೆದರು. ಮುಂದಿನ ಎಸೆತದಲ್ಲಿ ರಜತ್ ಕಗಿಸೊ ರಬಾಡಗೆ ಕ್ಯಾಚ್ ನೀಡಿದರು. ಆದರೆ ರಬಾಡ ಕೂಡ ಅ ಸುಲಭವಾದ ಕ್ಯಾಚ್ ಬಿಟ್ಟರು. ಇದಾದ ಬಳಿಕ ರಜತ್ ಯಾವುದೇ ಅವಕಾಶಗಳನ್ನು ನೀಡದೆ ಕೃನಾಲ್ ಅವರೊಂದಿಗೆ ಅರ್ಧಶತಕದ ಜೊತೆಯಾಟ ನಡೆಸಿದರು. ಇವರಿಬ್ಬರ ಜೊತೆಯಾಟದಿಂದಾಗಿ ತಂಡ 180 ರನ್‌ಗಳ ಗಡಿ ದಾಟಿತು. ಇದೇ ಹಂತದಲ್ಲಿ ಕೃನಾಲ್ 43 ರನ್ ಬಾರಿಸಿ ಔಟಾದರು.
IPL 2026 Qualifier-1 RCB vs GT Live Score: ರಜತ್ ಅಬ್ಬರ; ಗುಜರಾತ್ಗೆ 255 ರನ್ ಗುರಿ
ಆ ಬಳಿಕವೂ ತಮ್ಮ ಆಟವನ್ನು ಮುಂದುವರೆಸಿದ ರಜತ್ 33 ಎಸೆತಗಳಲ್ಲಿ 283.82 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 9 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ ಅಜೇಯ 93 ರನ್ ಗಳಿಸಿದರು. ರಜತ್ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರೂ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಇದು ರಜತ್ ಅವರ ಐಪಿಎಲ್ ವೃತ್ತಿಜೀವನದ ಐದನೇ ಅರ್ಧಶತಕವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 pm, Tue, 26 May 26