DC vs RR: ರಾಜಸ್ಥಾನ್ ವಿರುದ್ಧ ಕೊನೆಯ ಓವರ್​ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

DC vs RR Match 62: ಐಪಿಎಲ್ 2026ರ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ 7ನೇ ಸ್ಥಾನಕ್ಕೇರಿದೆ. ರಾಜಸ್ಥಾನ್ ನೀಡಿದ 194 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ, ಆರಂಭಿಕರಾದ ಅಭಿಷೇಕ್, ರಾಹುಲ್ ಮತ್ತು ನಾಯಕ ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ನೆರವಿನಿಂದ ಸುಲಭವಾಗಿ ಗೆದ್ದು, ರಾಜಸ್ಥಾನ್‌ನ ಪ್ಲೇಆಫ್‌ ಹಾದಿಯನ್ನು ಕಠಿಣಗೊಳಿಸಿತು.

DC vs RR: ರಾಜಸ್ಥಾನ್ ವಿರುದ್ಧ ಕೊನೆಯ ಓವರ್​ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್
Dc Vs Rr

Updated on: May 17, 2026 | 11:39 PM

ಐಪಿಎಲ್ 2026 (IPL 2026) ರ 62 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ (RR vs DC) ಲೀಗ್​ನಲ್ಲಿ ತನ್ನ 6ನೇ ಗೆಲುವು ದಾಖಲಿಸುವುದರ ಜೊತೆಗೆ 7ನೇ ಸ್ಥಾನಕ್ಕೇರಿದೆ. ಇತ್ತ ಡೆಲ್ಲಿ ವಿರುದ್ಧ ಸೋತ ರಾಜಸ್ಥಾನ್ ತನ್ನ ಪ್ಲೇಆಫ್‌ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ಟಾಪ್ ಆರ್ಡರ್​ನ ಅಬ್ಬರದ ಬ್ಯಾಟಿಂಗ್‌ ನೆರವಿನಿಂದಾಗಿ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರಿಬ್ಬರ ಅರ್ಧಶತಕದ ನೆರವಿನಿಂದ ಈ ಪಂದ್ಯವನ್ನು ಗೆದ್ದುಕೊಂಡಿತು.

ರಾಜಸ್ಥಾನ್​ಗೆ ಸ್ಫೋಟಕ ಆರಂಭ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಪರ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಮತ್ತು ನಾಯಕ ರಿಯಾನ್ ಪರಾಗ್ ಅಬ್ಬರದ ಇನ್ನಿಂಗ್ಸ್ ಆಡಿದರು. ವೈಭವ್ ಸೂರ್ಯವಂಶಿ ರಾಜಸ್ಥಾನಕ್ಕೆ ಭರ್ಜರಿ ಆರಂಭ ನೀಡಿದರು. ಆದರೆ ಅದರ ನಂತರವೂ ರಾಜಸ್ಥಾನ 200 ರನ್​ಗಳ ಗಡಿ ತಲುಪಲು ಸಾಧ್ಯವಾಗಲಿಲ್ಲ. ಯಶಸ್ವಿ ಜೈಸ್ವಾಲ್ 19 ರನ್‌ಗಳಿಗೆ ಔಟಾದರೆ, ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಎರಡನೇ ವಿಕೆಟ್‌ಗೆ ಕೇವಲ 34 ಎಸೆತಗಳಲ್ಲಿ 70 ರನ್‌ಗಳ ಪಾಲುದಾರಿಕೆಯನ್ನು ನೀಡಿದರು.

ಎಡವಿದ ಮಧ್ಯಮ ಕ್ರಮಾಂಕ

ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ 46 ರನ್ ಗಳಿಸಿ ಔಟಾದರು. ವೈಭವ್ ಔಟಾದ ನಂತರ, ಧ್ರುವ್ ಮತ್ತು ನಾಯಕ ರಿಯಾನ್ ಮೂರನೇ ವಿಕೆಟ್‌ಗೆ 41 ಎಸೆತಗಳಲ್ಲಿ 72 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ರಯಾನ್ ಪರಾಗ್ 40 ಎಸೆತಗಳಲ್ಲಿ 53 ರನ್‌ಗಳಿಗೆ ಔಟಾದರು. ಇಲ್ಲಿಂದ ರಾಜಸ್ಥಾನದ ಪತನ ಶುರುವಾಯಿತು. 30 ರನ್​ಗಳ ಅಂತರದಿಂದ ರಾಜಸ್ಥಾನ್ ತಂಡದ 6 ವಿಕೆಟ್​ಗಳು ಪತನಗೊಂಡವು. ದೆಹಲಿ ಪರ ಮಿಚೆಲ್ ಸ್ಟಾರ್ಕ್ 4 ವಿಕೆಟ್‌ ಪಡೆದರೆ, ಲುಂಗಿ ಎನ್‌ಗಿಡಿ ಮತ್ತು ಮಾಧವ್ ತಿವಾರಿ ತಲಾ 2 ವಿಕೆಟ್ ಪಡೆದರು.

PBKS vs RCB: ‘49/ 3, ಮತ್ತೆ ಹೀಗ್ ಮಾಡ್ಬೇಡಿ’.. ಗೇಲಿ ಮಾಡಿದ್ದ ಪಂಜಾಬ್​ ಕಿವಿ ಹಿಂಡಿದ ಆರ್​ಸಿಬಿ

ಆರಂಭಿಕರಿಬ್ಬರ ಅರ್ಧಶತಕ

ಈ ಗುರಿ ಬೆನ್ನಟ್ಟಿದ ಡೆಲ್ಲಿ ಪರ ಆರಂಭಿಕರಾದ ಅಭಿಷೇಕ್ ಹಾಗೂ ರಾಹುಲ್ ಮೊದಲ ವಿಕೆಟ್​ಗೆ 105 ರನ್​ಗಳ ಜೊತೆಯಾಟ ನೀಡಿದರು. ಅಭಿಷೇಕ್ 31 ಎಸೆತಗಳಲ್ಲಿ 51 ರನ್ ಬಾರಿಸಿ ಔಟಾದರೆ, ಅನುಭವಿ ಕೆಎಲ್ ರಾಹುಲ್ 42 ಎಸೆತಗಳಲ್ಲಿ 56 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ಅಕ್ಷರ್ ಪಟೇಲ್ ಅಜೇಯ 34 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಕ್ಷರ್ ಜೊತೆಗೆ ಅಶುತೋಷ್ ಶರ್ಮಾ ಕೂಡ 18 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿ ಗೆಲುವಿನ ರೂವಾರಿ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 pm, Sun, 17 May 26

Follow Us