
ಗುವಾಹಟಿಯಲ್ಲಿ ನಡೆದ ಐಪಿಎಲ್ 2026 (IPL 2026) ರ 3ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್ (CSK vs RR) ಈ ಆವೃತ್ತಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಈ ಮೂಲಕ ಸಿಎಸ್‌ಕೆ ವಿರುದ್ಧ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ಧ ಆಡಿದ್ದ ಎರಡೂ ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ್, ಈ ಆವೃತ್ತಿಯಲ್ಲೂ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಕೇವಲ 127 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್, 15 ವರ್ಷದ ವೈಭವ್ ಸೂರ್ಯವಂಶಿಯ ಸಿಡಿಲಬ್ಬರದ ಅರ್ಧಶತಕದಿಂದಾಗಿ ಇನ್ನು 47 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.
ಸಿಎಸ್‌ಕೆ ವಿರುದ್ಧದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಿಂದಲೇ ಪಂದ್ಯದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡದ ಅಗ್ರ ಕ್ರಮಾಂಕವನ್ನು ನಾಂಡ್ರೆ ಬರ್ಗರ್ ಮತ್ತು ಜೋಫ್ರಾ ಆರ್ಚರ್ ಒಟ್ಟಾಗಿ ಕೆಡವಿದರು. ಟಿ20 ವಿಶ್ವಕಪ್‌ನಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್, ಚೆನ್ನೈ ಪರ ತಮ್ಮ ಚೊಚ್ಚಲ ಪಂದ್ಯದಲ್ಲಿ ಕೇವಲ 6 ರನ್ ಗಳಿಸುವ ಮೂಲಕ ತಮ್ಮ ಹಿಂದಿನ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಲು ವಿಫಲರಾದರು.
ನಾಯಕ ರುತುರಾಜ್ ಕೂಡ 6 ರನ್‌ಗಳಿಗೆ ಔಟಾದರು. ಆಲ್ರೌಂಡರ್ ಶಿವಂ ದುಬೆ ಇನ್ನಿಂಗ್ಸ್ ಕೂಡ ಬೇಗನೇ ಮುಗಿಯಿತು. ಇದರ ಪರಿಣಾಮವಾಗಿ ಸಿಎಸ್‌ಕೆ ಕೇವಲ 51 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಮತ್ತು 94 ರನ್‌ಗಳಿಗೆ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದ ತಂಡ 100 ರನ್ ಗಳಿಸುವುದು ಕೂಡ ಅಸಂಭವವೆಂದು ತೋರುತ್ತಿತ್ತು. ಆದರೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೇಮೀ ಓವರ್ಟನ್ ನಿರ್ಣಾಯಕ 43 ರನ್‌ಗಳ ಇನ್ನಿಂಗ್ಸ್ ಆಡಿ ತಂಡವನ್ನು ಮುಜುಗರದಿಂದ ಪಾರು ಮಾಡಿದರು.
CSK vs RR: ಒಂದಂಕಿ ದಾಟದ 8 ಬ್ಯಾಟರ್ಸ್; ಕಷ್ಟಪಟ್ಟು 100 ರನ್ ಗಡಿ ದಾಟಿದ ಸಿಎಸ್‌ಕೆ
ಸಿಎಸ್‌ಕೆ ತಂಡವನ್ನು 127 ರನ್‌ಗಳಿಗೆ ಆಲೌಟ್ ಮಾಡಿದ್ದ ರಾಜಸ್ಥಾನ, ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ ಗುರಿ ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಕಾಯುವುದಷ್ಟೇ ಬಾಕಿ ಇತ್ತು. ಆದಾಗ್ಯೂ, ಕಾರ್ತಿಕ್ ಶರ್ಮಾ, ಮೊದಲ ಓವರ್ನಲ್ಲೇ ವೈಭವ್ ನೀಡಿದ್ದ ಕ್ಯಾಚ್ ಹಿಡಿದಿದ್ದರೆ ಮೊದಲ ಓವರ್‌ನಲ್ಲಿಯೇ ಈ ಎಲ್ಲಾ ಭರವಸೆಗಳು ಭಗ್ನವಾಗುತ್ತಿದ್ದವು. ತಮ್ಮ ಮೊದಲ ಎಸೆತವನ್ನು ಎದುರಿಸಿದ ವೈಭವ್ ಹೈ ಶಾಟ್ ಬಾರಿಸಿದರು, ಆದರೆ ಕಾರ್ತಿಕ್ಗೆ ಅದನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಇದರ ಲಾಭ ಪಡೆದ ವೈಭವ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ವೈಭವ್ ಜೊತೆಗೆ, ಸ್ಟಾರ್ ಓಪನರ್ ಯಶಸ್ವಿ ಜೈಸ್ವಾಲ್ ಸಂಯೋಜಿತ ಇನ್ನಿಂಗ್ಸ್ ಆಡಿ, ಕೇವಲ 12.1 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 pm, Mon, 30 March 26