IPL 2026: ಈ ಸೀಸನ್​ನಲ್ಲಿ ವೈಭವ್ ಖಜಾನೆ ತುಂಬಿದ ಒಟ್ಟು ಹಣವೆಷ್ಟು?

Vaibhav Sooryavanshi IPL 2026 Earnings: 2026ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿ ಆರೆಂಜ್ ಕ್ಯಾಪ್‌ಗೆ ಭಾಜನರಾಗಿದ್ದಾರೆ. 1.10 ಕೋಟಿಗೆ ಹರಾಜಾದ 15 ವರ್ಷದ ವೈಭವ್, ಎಂವಿಪಿ, ಸೂಪರ್ ಸ್ಟ್ರೈಕರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡರು. ಪಂದ್ಯ ಶುಲ್ಕ ಹಾಗೂ ವಿವಿಧ ಬಹುಮಾನಗಳಿಂದ ಈ ಆವೃತ್ತಿಯಲ್ಲಿ 3 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿ ಗಮನ ಸೆಳೆದಿದ್ದಾರೆ.

IPL 2026: ಈ ಸೀಸನ್​ನಲ್ಲಿ ವೈಭವ್ ಖಜಾನೆ ತುಂಬಿದ ಒಟ್ಟು ಹಣವೆಷ್ಟು?
Vaibhav Sooryavanshi

Updated on: Jun 01, 2026 | 4:15 PM

2026 ರ ಐಪಿಎಲ್​ಗೆ (IPL 2026) ಅದ್ಧೂರಿ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದ ಆರ್​ಸಿಬಿಗೆ ಟ್ರೋಫಿ ಜೊತೆಗೆ 20 ಕೋಟಿ ರೂ. ಬಹುಮಾನವೂ ಸಿಕ್ಕಿದೆ. ಇನ್ನು ರನ್ನರ್ ಅಪ್ ಆದ ಗುಜರಾತ್ ತಂಡಕ್ಕೂ 13 ಕೋಟಿ ರೂ. ಬಹುಮಾನ ದೊರೆತಿದೆ. ಇದು ತಂಡಗಳಿಗೆ ಸಿಕ್ಕ ಬಹುಮಾನದ ವಿವರವಾದರೆ.. ಇಡೀ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಸ್ವೀಕರಿಸಿದ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಒಂದೊಂದು ಪ್ರಶಸ್ತಿಗೆ ಎಷ್ಟು ಹಣವನ್ನು ಬಹುಮಾನವಾಗಿ ಪಡೆದರು. ಇದರ ಜೊತೆಗೆ ಪ್ರತಿ ಪಂದ್ಯವನ್ನು ಆಡಿದಕ್ಕೆ ವೈಭವ್​ಗೆ ಸಿಕ್ಕ ಸಂಭಾವನೆ ಎಷ್ಟು ಹಾಗೆಯೇ ಐಪಿಎಲ್ ಹರಾಜಿನಲ್ಲಿ ವೈಭವ್​ಗೆ ಸಿಕ್ಕ ಮೊತ್ತವೆಷ್ಟು ಎಂಬುದನ್ನು ನೋಡೋಣ..

ಹರಾಜಿನಲ್ಲಿ ಕಡಿಮೆ ಬೆಲೆ ಪಡೆದ ವೈಭವ್

2025 ರ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ವೈಭವ್ ಸೂರ್ಯವಂಶಿಯನ್ನು ಕೇವಲ 1.10 ಕೋಟಿ ರೂ.ಗಳಿಗೆ ಖರೀದಿಸಿತು. ಆ ಸಮಯದಲ್ಲಿ ಈ ಮೊತ್ತ ಕೊಂಚ ದುಬಾರಿಯಾಯಿತ್ತೆನಿಸಿದರೂ, ಈ ಸೀಸನ್ ಅಂತ್ಯದ ವೇಳೆಗೆ, ವೈಭವ್ ಸೂರ್ಯವಂಶಿ ಫ್ರಾಂಚೈಸಿಯು ಹೂಡಿಕೆ ಮಾಡಿದ ಪ್ರತಿ ಪೈಸೆಗೂ ನ್ಯಾಯ ಒದಗಿಸಿಕೊಟ್ಟರು. ಇನ್ನು ಈ ವರ್ಷದ ಟೂರ್ನಮೆಂಟ್‌ನಲ್ಲಿ ಆಡಿದ 16 ಪಂದ್ಯಗಳಲ್ಲಿ ಬರೋಬ್ಬರಿ 776 ರನ್ ಬಾರಿಸಿದ ವೈಭವ್, ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಪ್ರತಿಷ್ಠಿತ ‘ಆರೆಂಜ್ ಕ್ಯಾಪ್’ ಅನ್ನು ಗೆದ್ದರು. ಇದರ ಜೊತೆಗೆ ಇನ್ನು ಹಲವು ಪ್ರಶಸ್ತಿಗಳು ವೈಭವ್ ಪಾಲಾದವು. ಅವುಗಳ ಪೂರ್ಣ ವಿವರ ಇಂತಿದೆ.

  • ಟೂರ್ನಮೆಂಟ್‌ನ ಅತ್ಯಂತ ಮೌಲ್ಯಯುತ ಆಟಗಾರ (MVP): 15 ಲಕ್ಷ ರೂ.
  • ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್‌ಗಳು): 10 ಲಕ್ಷ ರೂ.
  • ಸೀಸನ್ ಸೂಪರ್ ಸ್ಟ್ರೈಕರ್: ರೂ. 10 ಲಕ್ಷ ಜೊತೆಗೆ ಹೊಚ್ಚ ಹೊಸ ಟಾಟಾ ಸಿಯೆರಾ ಕಾರು
  • ಸೀಸನ್ ಸೂಪರ್ ಸಿಕ್ಸ್‌ಗಳು: 10 ಲಕ್ಷ ರೂ.
  • ಈ ಸೀಸನ್​ನ ಉದಯೋನ್ಮುಖ ಆಟಗಾರ: 10 ಲಕ್ಷ ರೂ.

    ಪಂದ್ಯ ಶುಲ್ಕದಿಂದ ಬಂದಿದೆಷ್ಟು?

ಈ ಪ್ರಶಸ್ತಿಗಳ ಜೊತೆಗೆ ವೈಭವ್ ಐಪಿಎಲ್ ನಿಯಮಗಳ ಪ್ರಕಾರ ಆಡಿದ ಪ್ರತಿ ಪಂದ್ಯಕ್ಕೂ ರೂ. 7.5 ಲಕ್ಷ ಪಂದ್ಯ ಶುಲ್ಕವನ್ನು ಪಡೆದರು. ಈ ಆವೃತ್ತಿಯಲ್ಲಿ ವೈಭವ್ ರಾಜಸ್ಥಾನ ರಾಯಲ್ಸ್ ಆಡಿದ ಎಲ್ಲಾ 16 ಪಂದ್ಯಗಳಲ್ಲಿ ಆಡಿದರು. ಈ ಮೂಲಕ, ವೈಭವ್ ಪಂದ್ಯ ಶುಲ್ಕದ ರೂಪದಲ್ಲಿಯೇ 1.20 ಕೋಟಿ ರೂ. ಆದಾಯ ಗಳಿಸಿದ್ದಾರೆ.

IPL 2026 Orange Cap: ಆರೆಂಜ್ ಕ್ಯಾಪ್ ಗೆದ್ದ 15 ವರ್ಷದ ವೈಭವ್ ಸೂರ್ಯವಂಶಿ

ಇದರ ಜೊತೆಗೆ, ಅವರು ಲೀಗ್ ಪಂದ್ಯಗಳಲ್ಲಿ ‘ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಮ್ಯಾಚ್’ ಮತ್ತು ‘ಮೋಸ್ಟ್ ಸಿಕ್ಸ್ ಆಫ್ ದಿ ಮ್ಯಾಚ್’ ನಂತಹ ಪ್ರಶಸ್ತಿಗಳನ್ನು ಹಲವಾರು ಬಾರಿ ಗೆದ್ದಿದ್ದಾರೆ. ಪ್ರತಿ ಪ್ರಶಸ್ತಿಗೆ ಹೆಚ್ಚುವರಿಯಾಗಿ 1 ಲಕ್ಷ ರೂ. ಬಹುಮಾನ ನೀಡಲಾಗಿದೆ. ಒಟ್ಟಾರೆಯಾಗಿ, ಈ ಆವೃತ್ತಿಯಲ್ಲಿ ವೈಭವ್ 3 ಕೋಟಿ ರೂ.ಗೂ ಅಧಿಕ ಹಣವನ್ನು ಸಂಪಾಧನೆ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us