
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ದೊಡ್ಡ ಸ್ವಾಪ್ ಡೀಲ್ಗೆ ವೇದಿಕೆ ಸಿದ್ಧವಾಗುತ್ತಿದೆ. ಈ ಮೆಗಾ ಒಪ್ಪಂದದ ಭಾಗವಾಗಿ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ವೇಗಿ ಅರ್ಶ್‌ದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಲಿದ್ದಾರೆ. ಪ್ರತಿಯಾಗಿ, ಮುಂಬೈ ಇಂಡಿಯನ್ಸ್ ತಂಡದ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ ಎಂದು ವರದಿಯಾಗಿದೆ.
ಐಪಿಎಲ್ ಟ್ರೇಡಿಂಗ್ ಆಯ್ಕೆಯ ಮೂಲಕ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಆಟಗಾರರನ್ನು ಅದಲು-ಬದಲು ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿದ್ದು, ಈ ಮಾತುಕತೆ ಕೊನೆಯ ಹಂತಕ್ಕೆ ಬಂದು ನಿಂತಿದೆ ಎಂದು ತಿಳಿದು ಬಂದಿದೆ. ಅಲ್ಲದೆ ನವೆಂಬರ್ 17 ರಂದು ನಡೆಯಲಿರುವ ಐಪಿಎಲ್ ರಿಟೆನ್ಷನ್ ಡೆಡ್‌ಲೈನ್‌ಗೂ ಮುನ್ನ ಈ ಬಿಗ್ ಟ್ರೇಡ್ ಅಧಿಕೃತಗೊಳ್ಳುವ ಸಾಧ್ಯತೆಯಿದೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ತೀವ್ರ ಆಸಕ್ತಿ ತೋರಿದೆ. ಇದಕ್ಕೆ ಪ್ರತಿಯಾಗಿ ಮುಂಬೈ ಇಂಡಿಯನ್ಸ್ ಇಬ್ಬರು ಪ್ರಮುಖ ಆಟಗಾರರಿಗಾಗಿ ಬೇಡಿಕೆಯಿಟ್ಟಿತ್ತು.
ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಸ್ಟಾರ್ ವೇಗಿ ಅರ್ಷದೀಪ್ ಸಿಂಗ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ವಿನೋದ್ ಇವರಿಬ್ಬರನ್ನೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಟ್ಟುಕೊಡಲು ಸಿದ್ಧವಾಗಿದೆ. ಈ ಇಬ್ಬರು ಆಟಗಾರರನ್ನು ನೀಡಿ ಹಾರ್ದಿಕ್ ಪಾಂಡ್ಯರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಮಾತುಕತೆ ನಡೆಸಿದೆ. ಅತ್ತ ಮುಂಬೈ ಇಂಡಿಯನ್ಸ್ ಕಡೆಯಿಂದಲೂ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೀಗಾಗಿ ಈ ಡೀಲ್ ಕುದುರಿಕೊಳ್ಳುವ ಸಾಧ್ಯತೆಯಿದೆ.
ಹಾರ್ದಿಕ್ ಪಾಂಡ್ಯ: ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯಗೆ 16.35 ಕೋಟಿ ನೀಡುತ್ತಿದೆ.
ಅರ್ಷದೀಪ್ ಸಿಂಗ್: ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಅರ್ಷದೀಪ್ ಸಿಂಗ್ಗೆ ಬರೋಬ್ಬರಿ 18 ಕೋಟಿ ರೂ. ನೀಡುತ್ತಿದೆ.
ವಿಷ್ಣು ವಿನೋದ್: ಪಂಜಾಬ್ ಕಿಂಗ್ಸ್ ತಂಡವು ವಿಷ್ಣು ವಿನೋದ್ ಅವರನ್ನು ಕಳೆದ ಹರಾಜಿನಲ್ಲಿ 95 ಲಕ್ಷ ರೂ. ನೀಡಿ ಖರೀದಿಸಿತ್ತು.
ಇದೀಗ ಮೆಗಾ ಸ್ವಾಪ್ ಡೀಲ್ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಅರ್ಷದೀಪ್ ಸಿಂಗ್ ಮತ್ತು ವಿಷ್ಣು ವಿನೋದ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಟ್ಟು, ಹಾರ್ದಿಕ್ ಪಾಂಡ್ಯರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ.
ಇದನ್ನೂ ಓದಿ: PSLಗೆ ಕೈಕೊಟ್ಟು IPLಗೆ ಬರ್ತಾರಾ ಗ್ಲೆನ್ ಮ್ಯಾಕ್ಸ್ವೆಲ್?
ಒಟ್ಟಾರೆಯಾಗಿ ಹೇಳುವುದಾದರೆ, ನವೆಂಬರ್ 17ರ ರಿಟೆನ್ಷನ್ ಗಡುವಿಗೂ ಮುನ್ನವೇ ಐಪಿಎಲ್ ಅಖಾಡದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿರುವುದಂತೂ ನಿಜ. ಒಂದು ಕಡೆ ರೋಹಿತ್ ಶರ್ಮಾ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ತಂಡದ ಸಾರಥ್ಯ ವಹಿಸಿಕೊಳ್ಳುವ ಮುನ್ಸೂಚನೆ ಸಿಕ್ಕಿದ್ದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಸೇರ್ಪಡೆಯಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಬಲಿಷ್ಠ ಆಲ್-ರೌಂಡರ್ ಲಭಿಸಿದಂತಾಗುತ್ತದೆ. ಒಂದು ವೇಳೆ ಈ ಮೆಗಾ ಅದಲು-ಬದಲು ಪ್ರಕ್ರಿಯೆ ಅಧಿಕೃತಗೊಂಡರೆ, ಮುಂಬರುವ ಐಪಿಎಲ್ ಸೀಸನ್ ಎರಡೂ ತಂಡಗಳ ಪಾಲಿಗೆ ಅತ್ಯಂತ ರೋಮಾಂಚನಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.