ಸೈನಿಕನಾಗಲು ಹೊರಟಿದ್ದವ RCB ಗೆ ಬಂದ ಕಥೆ..!
Jitesh Sharma: ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನೀಡಿದ 227 ರನ್ಗಳ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ಪರ ಜಿತೇಶ್ ಶರ್ಮಾ 33 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 85 ರನ್ ಬಾರಿಸಿದರು. ಈ ಮೂಲಕ 18.4 ಓವರ್ಗಳಲ್ಲಿ ಆರ್ಸಿಬಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಜಿತೇಶ್ ಮೋಹನ್ ಶರ್ಮಾ… ಈ ಒಂದು ಹೆಸರು ನಿನ್ನೆಯಿಂದ ಮನೆಮಾತಾಗಿದೆ. ಅಂತಹದೊಂದು ಸ್ಮರಣೀಯ ಇನಿಂಗ್ಸ್ ಆಡಿದ ಜಿತೇಶ್ ಶರ್ಮಾ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅದು ಸಹ ಬರೋಬ್ಬರಿ 227 ರನ್ಗಳ ಗುರಿಯನ್ನು ಬೆನ್ನತ್ತುವ ಮೂಲಕ ಎಂಬುದು ವಿಶೇಷ. ಅಂದರೆ ಆರ್ಸಿಬಿ ತಂಡಕ್ಕೆ ಕಳೆದ 17 ವರ್ಷಗಳಲ್ಲಿ 210 ಕ್ಕಿಂತ ಹೆಚ್ಚಿನ ರನ್ ಚೇಸ್ ಮಾಡಿ ಗೆದ್ದ ಇತಿಹಾಸವಿರಲಿಲ್ಲ. ಆದರೆ ಈ ಬಾರಿ ಹೊಸ ಇತಿಹಾಸ ಬರೆಯುವಲ್ಲಿ ಜಿತೇಶ್ ಶರ್ಮಾ ಯಶಸ್ವಿಯಾಗಿದ್ದಾರೆ.
ಅಂದಹಾಗೆ ಜಿತೇಶ್ ಶರ್ಮಾ ಮಹಾರಾಷ್ಟ್ರದ ಅಮರಾವತಿ ಮೂಲದವರು. ಈ ಹಿಂದೆ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಯುವ ವಿಕೆಟ್ ಕೀಪರ್ನನ್ನು ಈ ಬಾರಿ ಆರ್ಸಿಬಿ ಆಯ್ಕೆ ಮಾಡಿಕೊಂಡಿತ್ತು. ಅದು ಕೂಡ ಬಿಗ್ ಹಿಟ್ಟರ್ ಎಂಬ ಟ್ಯಾಗ್ ಲೈನ್ನೊಂದಿಗೆ. ಅಂದರೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಲು ಮುಖ್ಯ ಕಾರಣ, ಅವರ ಸಿಕ್ಸ್ ಬಾರಿಸುವ ಸಾಮರ್ಥ್ಯ.
ಯಾವುದೇ ಸಂದರ್ಭದಲ್ಲೂ ಸಿಕ್ಸ್ ಸಿಡಿಸುವ ಕಲೆ ಜಿತೇಶ್ ಶರ್ಮಾಗೆ ಕರಗತವಾಗಿತ್ತು. ಇತ್ತ ಆರ್ಸಿಬಿ ಕೂಡ ವಿಕೆಟ್ ಕೀಪರ್ ಬ್ಯಾಟರ್ನ ಹುಡುಕಾಟದಲ್ಲಿತ್ತು. ಈ ವೇಳೆ ದಿನೇಶ್ ಕಾರ್ತಿಕ್ ಕಣ್ಣಿಗೆ ಬಿದ್ದವನೇ ಜಿತೇಶ್ ಶರ್ಮಾ.
ಜಿತೇಶ್ ಶರ್ಮಾ ಬಿಗ್ ಹಿಟ್ಗಳ ಮೂಲಕ ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರ. ಹಾಗಾಗಿ ನಾವು ಆತನಿಗಾಗಿ ಬಿಡ್ ಮಾಡಿದ್ದೇವೆ ಎಂದು ಈ ಹಿಂದೊಮ್ಮೆ ಡಿಕೆ ಹೇಳಿದ್ದರು. ಇದೀಗ ದಿನೇಶ್ ಕಾರ್ತಿಕ್ ಅವರ ಈ ಹೇಳಿಕೆಯನ್ನು ಜಿತೇಶ್ ನಿಜವಾಗಿಸಿದ್ದಾರೆ. ಅದು ಕೂಡ ಕೇವಲ 33 ಎಸೆತಗಳಲ್ಲಿ ಅಜೇಯ 85 ರನ್ಗಳನ್ನು ಬಾರಿಸುವ ಮೂಲಕ ಎಂಬುದು ವಿಶೆಷ.
ಸೈನಿಕನಾಗುವ ಕನಸು ಕಂಡಿದ್ದ ಜಿತೇಶ್:
ಜಿತೇಶ್ ಶರ್ಮಾ ಬಾಲ್ಯದಲ್ಲಿ ಯಾವತ್ತೂ ಕ್ರಿಕೆಟಿಗನಾಗಬೇಕೆಂದು ಕನಸು ಕಂಡಿರಲಿಲ್ಲ. ಬದಲಾಗಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕೆಂಬ ಆಕಾಂಕ್ಷೆಯನ್ನು ಹೊಂದಿದ್ದ. ಇದರ ನಡುವೆ ಮೋಜಿಗಾಗಿ ಕ್ರಿಕೆಟ್ ಆಡುತ್ತಿದ್ದರು ಅಷ್ಟೇ. ಅಲ್ಲದೆ 12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಭಾರತೀಯ ಸೇನೆಗೆ ಸೇರಲು ಎನ್‌ಡಿಎ ಸೇರುವುದು ಅವರ ಗುರಿಯಾಗಿತ್ತು.
ಆದರೆ ಮಹಾರಾಷ್ಟ್ರ ರಾಜ್ಯ ಮಂಡಳಿಯು ರಾಜ್ಯ ಮಟ್ಟದಲ್ಲಿ ಕ್ರೀಡೆಗಳನ್ನು ಆಡುವ ವಿದ್ಯಾರ್ಥಿಗಳಿಗೆ 4% ಹೆಚ್ಚಿನ ಅಂಕಗಳನ್ನು ನೀಡುತ್ತಿದ್ದರು. ಅದರಂತೆ ಶೇ.4 ರಷ್ಟು ಹೆಚ್ಚುವರಿ ಅಂಕ ಪಡೆಯಲೆಂದು ಮೈದಾನಕ್ಕೆ ಇಳಿಯಲಾರಂಭಿಸಿದ. ಕ್ರಿಕೆಟ್ ಅಂಗಳಕ್ಕೆ ಇಳಿದ ಬಳಿಕ ಜಿತೇಶ್ಗೆ ಎದುರಾಗಿದ್ದೇ ಮುಂದಿನ ಗುರಿಯೇನು? ಎಂಬ ಪ್ರಶ್ನೆ.
ಶಾಲೆಯಲ್ಲಿ ಸ್ಪೋರ್ಟ್ಸ್ ಫಾರ್ಮ್ನಲ್ಲಿ ಜಿತೇಶ್ ಶರ್ಮಾ ಬ್ಯಾಟರ್/ಬೌಲರ್ ಅಥವಾ ವಿಕೆಟ್ ಕೀಪರ್ ಎಂಬುದನ್ನು ಭರ್ತಿ ಮಾಡಲೇಬೇಕಿತ್ತು. ಈ ವೇಳೆ ವಿಕೆಟ್ ಕೀಪರ್ ಪಟ್ಟಿಯಲ್ಲಿ ಕೇವಲ ಮೂವರ ಹೆಸರುಗಳು ಮಾತ್ರ ಕಾಣಿಸಿದ್ದವು. ಹೀಗಾಗಿ ಜಿತೇಶ್ ಶರ್ಮಾ ಕೂಡ ವಿಕೆಟ್ ಕೀಪರ್ ಎಂದು ಹೆಸರು ನೋಂದಾಯಿಸಿಕೊಂಡರು.
ಅಲ್ಲಿಂದ ಜಿತೇಶ್ ಶರ್ಮಾ ಜೀವನವೇ ಬದಲಾಯಿತು. ಸೈನ್ಯಕ್ಕೆ ಸೇರಲು ಹೊರಟಿದ್ದ ಹುಡುಗನಿಗೆ ಕ್ರಿಕೆಟ್ ರುಚಿಸಲರಾಂಭಿಸಿತು. ಹಿರಿಯ ಆಟಗಾರರಿಂದ ಹಾಗೂ ಯೂಟ್ಯೂಬ್ ನೋಡಿ ಕ್ರಿಕೆಟ್ ಅನ್ನು ಕರಗತ ಮಾಡಲಾರಂಭಿಸಿದ. ಆ ಬಳಿಕ ಜಿತೇಶ್ ಶರ್ಮಾ ಹಿಂತಿರುಗಿ ನೋಡಿಲ್ಲ ಎನ್ನಬಹುದು.
ಏಕೆಂದರೆ 2014 ರಲ್ಲಿ ವಿದರ್ಭ ಪರ ದೇಶೀಯ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದರು. ಅದೇ ವರ್ಷ, ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆದರು. 2015 ರಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಸಹ ಆಡಿದರು. ವಿದರ್ಭ ಪರ ಆರಂಭಿಕನಾಗಿ ಬ್ಯಾಟಿಂಗ್ ಮಾಡುವಾಗ, ಜಿತೇಶ್ ತುಂಬಾ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ಆಕ್ರಮಣಕಾರಿ ಬ್ಯಾಟಿಂಗ್ ಐಪಿಎಲ್ ಹಾದಿಯನ್ನು ಸುಗಮಗೊಳಿಸಿತು.
2017 ರ ಐಪಿಎಲ್ಗಾಗಿ ಜಿತೇಶ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದರು. ಈ ವೇಳೆ ಅವರ ವಯಸ್ಸು ಕೇವಲ 23 ವರ್ಷಗಳು ಮಾತ್ರ. ಆ ಬಳಿಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದರು. ಪಂಜಾಬ್ ಪರ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಈ ಭರ್ಜರಿ ಪ್ರದರ್ಶನದ ಫಲವಾಗಿ 2023 ರಲ್ಲಿ ಟೀಮ್ ಇಂಡಿಯಾಗೆ ಆಯ್ಕೆಯಾದರು.
ಆ ಬಳಿಕ ಭಾರತ ಟಿ20 ತಂಡದಿಂದ ಹೊರಬಿದ್ದ ಜಿತೇಶ್ ಶರ್ಮಾ ಅವರ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕಣ್ಣಿಟ್ಟಿತು. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ ಜಿತೇಶ್ ಶರ್ಮಾ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ಖರೀದಿಸಿತು. ಇದೀಗ ಜಿತೇಶ್ ಆರ್ಸಿಬಿ ತಂಡದ ಖಾಯಂ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುತ್ತಿದ್ದಾರೆ.
ಈವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 14 ಪಂದ್ಯಗಳ 10 ಇನ್ನಿಂಗ್ಸ್ ಆಡಿರುವ ಜಿತೇಶ್ ಶರ್ಮಾ 39.50 ಸರಾಸರಿ ಮತ್ತು 171 ಸ್ಟ್ರೈಕ್ ರೇಟ್‌ನಲ್ಲಿ 237 ರನ್ ಗಳಿಸಿದ್ದಾರೆ. ಈ ಮೂಲಕ ಆರ್ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ನಿಯಮವೇ ಗೊತ್ತಿಲ್ದೆ ಕ್ರೀಡಾ ಸ್ಫೂರ್ತಿ ಮೆರೆಯುತ್ತಿರುವ ಕ್ರಿಕೆಟಿಗರು
ಒಟ್ಟಿನಲ್ಲಿ ಇಂಡಿಯನ್ ಆರ್ಮಿ ಸೇರಲು ಹೊರಟಿದ್ದ ಹುಡುಗ ಇದೀಗ ರೆಡ್ ಆರ್ಮಿ ಪರ ಕಣಕ್ಕಿಳಿಯುತ್ತಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಕಪ್ ಗೆದ್ದು ಕೊಡುವ ಹೊಸ ಭರವಸೆಯನ್ನು ಹುಟ್ಟುಹಾಕಿದ್ದಾರೆ.
