
ಐಪಿಎಲ್ 2026 (IPL 2026) ರಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ (DC vs PBKS) ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕನ್ನಡಿಗ ಕೆಎಲ್ ರಾಹುಲ್ (KL Rahul) ಭರ್ಜರಿ ಶತಕ ಸಿಡಿಸಿದರು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಹರಿಸಿದ ರಾಹುಲ್ ಕೇವಲ 47 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಯಾನ್ಸನ್ ಎಸೆದ 15ನೇ ಓವರ್ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದ 6ನೇ ಶತಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಎರಡನೇ ಶತಕವನ್ನು ದಾಖಲಿಸಿದರು.
ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪಾತುಮ್ ನಿಸ್ಸಾಂಕ ಮತ್ತೆ ನಿರಾಸೆ ಮೂಡಿಸಿದರು. ಇದರ ಜೊತೆಗೆ ರಾಹುಲ್ ಕೂಡ 12 ರನ್ಗಳಿಗೆ ಸುಲಭ ಕ್ಯಾಚ್ ನೀಡಿದ್ದರು. ಆದರೆ ಪಂಜಾಬ್ ಕಿಂಗ್ಸ್ ತಂಡದ ಶಶಾಂಕ್ ಸಿಂಗ್ ಸುಲಭ ಕ್ಯಾಚ್ ಅನ್ನು ಕೈಚೆಲ್ಲುವ ಮೂಲಕ ರಾಹುಲ್ ಶತಕಕ್ಕೆ ನೆರವಾದರು. ಇದರ ಜೊತೆಗೆ ರಾಹುಲ್ಗೆ ಎರಡನೇ ಜೀವದಾನವೂ ಸಿಕ್ಕಿತು. ಇದರ ಸಂಪೂರ್ಣ ಲಾಭವನ್ನು ಬಳಸಿಕೊಳ್ಳುವಲ್ಲಿ ರಾಹುಲ್ ಯಶಸ್ವಿಯಾದರು.
KL Rahul ಕ್ಯಾಚ್ ಡ್ರಾಪ್!😱
ಗೇಮ್ ಚೇಂಜ್ ಮಾಡೋ ತಾಕತ್ತು ಇರೋ ಕನ್ನಡಿಗನ ಕ್ಯಾಚ್ ಬಿಟ್ಟು Shashank Singh ಯಾಕೋ ದೊಡ್ಡ ತಪ್ಪು ಮಾಡಿದ ಹಾಗಿದೆ!😬
ವೀಕ್ಷಿಸಿ | #TATAIPL2026 👉 #DCvsPBKS | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ.#TATAIPL pic.twitter.com/vtfJANtHdz
— Star Sports Kannada (@StarSportsKan) April 25, 2026
ಶಶಾಂಕ್ ಸಿಂಗ್ ಸುಲಭ ಕ್ಯಾಚ್ ಅನ್ನು ಕೈಬಿಟ್ಟಾಗ ರಾಹುಲ್ ಕೇವಲ 12 ರನ್‌ಗಳಿಸಿದ್ದರು. ಇದಾದ ನಂತರ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ರಾಹುಲ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ರಾಹುಲ್ 51 ರನ್‌ಗಳಲ್ಲಿದ್ದಾಗ, ಮತ್ತೊಂದು ಕ್ಯಾಚ್ ಕೈಬಿಡಲಾಯಿತು. ಈ ಎರಡನೇ ಜೀವದಾನದ ನಂತರ, ರಾಹುಲ್ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿ ಕೇವಲ 47 ಎಸೆತಗಳಲ್ಲಿ 100 ರನ್‌ಗಳ ಗಡಿ ತಲುಪಿದರು. ಈ ಶತಕದ ಇನ್ನಿಂಗ್ಸ್ ಜೊತೆಗೆ ರಾಹುಲ್, ನಿತೀಶ್ ರಾಣಾ ಅವರೊಂದಿಗೆ ಉತ್ತಮ ಪಾಲುದಾರಿಕೆಯನ್ನು ರೂಪಿಸಿದರು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ನ ಫೀಲ್ಡಿಂಗ್ ನಿರಾಶಾದಾಯಕವಾಗಿತ್ತು. ಎರಡು ನಿರ್ಣಾಯಕ ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ, ರಾಹುಲ್ಗೆ ಜೀವದಾನ ನೀಡುವುದರ ಜೊತೆಗೆ, ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಸ್ಕೋರ್ ಗಳಿಸಲು ಅವಕಾಶ ಮಾಡಿಕೊಟ್ಟಿತು.
DC vs PBKS IPL 2026 Live Score: ಶತಕದಂಚಿನಲ್ಲಿ ಎಡವಿದ ರಾಣಾ
ಈ ಶತಕದೊಂದಿಗೆ, ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಆವೃತ್ತಿಯ ಆರಂಭದಲ್ಲಿ ರಾಹುಲ್ ಎರಡು ಪಂದ್ಯಗಳಲ್ಲಿ ಕೇವಲ 1 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಆ ನಂತರ 92 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಫಾರ್ಮ್ ಕಂಡುಕೊಂಡಿದ್ದ ರಾಹುಲ್ ಈಗ ರನ್ ಸ್ಕೋರಿಂಗ್ ಪಟ್ಟಿಯಲ್ಲಿ ನಂ. 1 ಸ್ಥಾನಕ್ಕೇರಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Sat, 25 April 26