KL Rahul: ಮೊದಲು ಹೀರೋ, ಆಮೇಲೆ ವಿಲನ್ ಆದ ಕೆಎಲ್ ರಾಹುಲ್

TV9kannada Web Team

TV9kannada Web Team | Edited By: Zahir PY

Updated on: Dec 04, 2022 | 8:08 PM

Bangladesh vs India, 1st ODI: ಈ ವೇಳೆ ದಾಳಿಗಿಳಿದ ಶಕೀಬ್ ಅಲ್ ಹಸನ್ ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಆಟಗಾರರನ್ನು ಒಬ್ಬರ ಹಿಂದೆ ಒಬ್ಬರಂತೆ ಔಟ್ ಮಾಡಿದರು. ಪರಿಣಾಮ ಟೀಮ್ ಇಂಡಿಯಾ 41.2 ಓವರ್​ಗಳಲ್ಲಿ 186 ರನ್​ಗಳಿಗೆ ಸರ್ವಪತನ ಕಂಡಿತು.

KL Rahul: ಮೊದಲು ಹೀರೋ, ಆಮೇಲೆ ವಿಲನ್ ಆದ ಕೆಎಲ್ ರಾಹುಲ್
KL Rahul

ಢಾಕಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ್ ತಂಡವು 1 ರನ್​ಗಳಿಂದ ರೋಚಕ ಜಯ ಸಾಧಿಸಿದೆ. ಭಾರತದ ಈ ಸೋಲಿಗೆ ಮುಖ್ಯ ಕಾರಣ ಕಳಪೆ ಫೀಲ್ಡಿಂಗ್ ಎಂದರೆ ತಪ್ಪಾಗಲಾರದು. ಒಂದೆಡೆ ವಿರಾಟ್ ಕೊಹ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದು ಮಿಂಚಿದರೆ, ಅಂತಹದ್ದೇ ಫೀಲ್ಡಿಂಗ್ ಪ್ರದರ್ಶನ ಉಳಿದ ಆಟಗಾರರಿಂದ ಮೂಡಿಬಂದಿರಲಿಲ್ಲ. ಮೊದಲ ಕಡಿಮೆ ಮೊತ್ತ ದಾಖಲಿಸಿದ್ದ ಟೀಮ್ ಇಂಡಿಯಾ ಅತ್ಯುತ್ತಮ ಕ್ಷೇತ್ರರಕ್ಷಣೆಯ ಮೂಲಕ ಬಾಂಗ್ಲಾ ತಂಡವನ್ನು ಕಟ್ಟಿಹಾಕುವಲ್ಲಿ ಎಡವಿತು ಎಂದರೆ ತಪ್ಪಾಗಲಾರದು.

ಏಕೆಂದರೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ವಿಫಲರಾದರು. ರೋಹಿತ್ ಶರ್ಮಾ (27), ಶಿಖರ್ ಧವನ್ (7), ವಿರಾಟ್ ಕೊಹ್ಲಿ (9) ಬೇಗನೆ ನಿರ್ಗಮಿಸಿದರೆ, ಆ ಬಳಿಕ ಬಂದ ಶ್ರೇಯಸ್ ಅಯ್ಯರ್ 24 ರನ್​ಗಳಿಸಲಷ್ಟೇ ಶಕ್ತರಾದರು.

ಇದಾಗ್ಯೂ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ ಸ್ಮರಣೀಯ ಇನಿಂಗ್ಸ್ ಆಡಿದರು. ಬಾಂಗ್ಲಾದೇಶ್ ಬೌಲರ್​ಗಳ ಬೆಂಡೆತ್ತಿದ ಕೆಎಲ್​ಆರ್​ 4 ಭರ್ಜರಿ ಸಿಕ್ಸ್​ ಹಾಗೂ 5 ಫೋರ್​ಗಳನ್ನು ಬಾರಿಸಿದರು. ಈ ಮೂಲಕ 70 ಎಸೆತಗಳಲ್ಲಿ 73 ರನ್​ ಚಚ್ಚಿದರು.

ಕೆಎಲ್ ರಾಹುಲ್ ಅವರ ಈ ಆಕರ್ಷಕ ಅರ್ಧಶತಕದ ನೆರವಿನಿಂದಾಗಿ ಟೀಮ್ ಇಂಡಿಯಾ ಮೊತ್ತ 150 ರ ಗಡಿದಾಟುವಂತಾಯಿತು. ಒಂದಾರ್ಥದಲ್ಲಿ ಬಾಂಗ್ಲಾ ಬೌಲರ್​ಗಳ ಮುಂದೆ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಹುಲ್ ಟೀಮ್ ಇಂಡಿಯಾದ ಮಾನ ಕಾಪಾಡಿದರು. ಇದಾಗ್ಯೂ 41.2 ಓವರ್​ಗಳಲ್ಲಿ ಟೀಮ್ ಇಂಡಿಯಾ 186 ರನ್​ಗಳಿಸಿ ಆಲೌಟ್ ಆಯಿತು.

187 ರನ್​ಗಳ ಗುರಿ ಪಡೆದ ಬಾಂಗ್ಲಾದೇಶ್ ತಂಡಕ್ಕೂ ಉತ್ತಮ ಆರಂಭ ದಕ್ಕಿರಲಿಲ್ಲ. ಮೊದಲ ಓವರ್​ನ ಮೊದಲ ಎಸೆತದಲ್ಲೇ ನಜ್ಮುಲ್ (0) ವಿಕೆಟ್ ಪಡೆಯುವ ಮೂಲಕ ದೀಪಕ್ ಚಹರ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅನಾಮುಲ್ ಹಕ್ (14) ಕೂಡ ಸಿರಾಜ್ ಎಸೆತದಲ್ಲಿ ಔಟಾದರು.

ಈ ಹಂತದಲ್ಲಿ ಜೊತೆಗೂಡಿದ ಲಿಟನ್ ದಾಸ್ ಹಾಗೂ ಶಕೀಬ್ ಅಲ್ ಹಸನ್ ಅತ್ಯುತ್ತಮ ಜೊತೆಯಾಟವಾಡಿದರು. 3ನೇ ವಿಕೆಟ್​ಗೆ 48 ರನ್​ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ವೇಳೆ 41 ರನ್​ಗಳಿಸಿದ್ದ ಲಿಟನ್ ದಾಸ್ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಕ್ಯಾಚ್ ನೀಡಿದರು. ಇದಾಗ್ಯೂ ಮತ್ತೊಂದೆಡೆ ಶಕೀಬ್ ಅಲ್ ಹಸನ್ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.

ವಾಷಿಂಗ್ಟನ್ ಸುಂದರ್ ಎಸೆದ 24ನೇ ಓವರ್​ನ 3ನೇ ಎಸೆತವನ್ನು ಶಕೀಬ್ ಡೀಪ್ ಕವರ್​ನತ್ತ ಭರ್ಜರಿಯಾಗಿ ಬಾರಿಸಿದ್ದರು. ಚೆಂಡು ಗಾಳಿಯಲ್ಲಿ ಹಾರುತ್ತಿದ್ದಂತೆ ಇತ್ತ ಫ್ರಂಟ್ ಫೀಲ್ಡಿಂಗ್​ನಲ್ಲಿದ್ದ ವಿರಾಟ್ ಕೊಹ್ಲಿ ಬಲಭಾಗದತ್ತ ಜಿಗಿದು ಅತ್ಯಾದ್ಭುತವಾಗಿ ಕ್ಯಾಚ್ ಹಿಡಿದರು.

ಈ ಯಶಸ್ಸಿನೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಉತ್ತಮ ದಾಳಿ ಸಂಘಟಿಸಿದರು. 10 ಓವರ್​ಗಳಲ್ಲಿ ಕೇವಲ 32 ರನ್​ ನೀಡಿ ಸಿರಾಜ್ 3 ವಿಕೆಟ್ ಕಬಳಿಸಿದರು. ಸಿರಾಜ್​ಗೆ ಉತ್ತಮ ಸಾಥ್ ನೀಡಿದ ಕುಲ್ದೀಪ್ ಸೇನ್ ಕೂಡ 2 ವಿಕೆಟ್ ಪಡೆದರು. ಪರಿಣಾಮ ಬಾಂಗ್ಲಾದೇಶ್ ತಂಡವು 136 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಇತ್ತ ಭಾರತದ ಗೆಲುವಿಗೆ ಒಂದು ವಿಕೆಟ್​ನ ಅವಶ್ಯಕತೆಯಿದ್ದಾಗ ಮೆಹದಿ ಹಸನ್ ಮಿರಾಝ್ ಭರ್ಜರಿ ಹೊಡೆತಕ್ಕೆ ಮುಂದಾದರು. ಚೆಂಡು ವಿಕೆಟ್ ಹಿಂಬದಿಯಲ್ಲಿ ಆಕಾಶದತ್ತ ಚಿಮ್ಮಿತ್ತು. ಕ್ಯಾಚ್ ಹಿಡಿಯಲು ಹಿಮ್ಮುಖವಾಗಿ ಓಡಿದ ಕೆಎಲ್ ರಾಹುಲ್ ಸರಿಯಾಗಿ ಚೆಂಡನ್ನು ಗುರುತಿಸಿದರು. ಇನ್ನೇನು ಚೆಂಡು ಹಿಡಿದರು ಅನ್ನುಷ್ಟರಲ್ಲಿ ಕೆಎಲ್ ರಾಹುಲ್ ಅವರು ಕ್ಯಾಚ್ ಕೈಚೆಲ್ಲಿದರು. ಈ ವೇಳೆ ಮೆಹದಿ ಹಸನ್ ಕಲೆಹಾಕಿದ್ದು ಕೇವಲ 15 ರನ್​ ಮಾತ್ರ. ಹಾಗೆಯೇ ಬಾಂಗ್ಲಾದೇಶ್ ತಂಡದ ಸ್ಕೋರ್ 155/9. ಈ ವೇಳೆ ಆ ಕ್ಯಾಚ್ ಕೆಎಲ್ ರಾಹುಲ್ ಹಿಡಿದಿದ್ದರೆ ಟೀಮ್ ಇಂಡಿಯಾ 31 ರನ್​ಗಳ ಭರ್ಜರಿ ಜಯ ಸಾಧಿಸುತ್ತಿತ್ತು.

ಆದರೆ ಸಿಕ್ಕ ಜೀವದಾನವನ್ನು ಬಳಸಿಕೊಂಡ ಮೆಹದಿ ಹಸನ್ ಕೊನೆಯ ವಿಕೆಟ್​ನಲ್ಲಿ ಮುಸ್ತಫಿಜುರ್ ರೆಹಮಾನ್ (10) ಜೊತೆಗೂಡಿ ಕೊನೆಯ ವಿಕೆಟ್​ನಲ್ಲಿ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ 38 ರನ್ ಬಾರಿಸುವ ಮೂಲಕ ಮೆಹದಿ ಬಾಂಗ್ಲಾ ತಂಡಕ್ಕೆ 1 ರನ್​ಗಳ ರೋಚಕ ಜಯ ತಂದುಕೊಟ್ಟರು.

ಒಂದೆಡೆ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ನಲ್ಲಿ ಆಕರ್ಷಕ 73 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಪಾಲಿಗೆ ಹೀರೋ ಆಗಿದ್ದ ಕೆಎಲ್ ರಾಹುಲ್, 2ನೇ ಇನಿಂಗ್ಸ್​ ವೇಳೆ ಕ್ಯಾಚ್ ಕೈಚೆಲ್ಲುವ ಮೂಲಕ ವಿಲನ್ ಆದರು. ಈ ಸೋಲಿನ ಹೊರತಾಗಿಯೂ 2 ಎರಡು ಪಂದ್ಯಗಳಿದ್ದು, ಈ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada