ಹಳ್ಳಿಯ ಹೆಣ್ಣುಮಗಳ ಸಾಧನೆ: ಲಾರ್ಡ್ಸ್ ಗೌರವ ಫಲಕದಲ್ಲಿ ಕ್ರಾಂತಿ ಗೌಡ್ ಹೆಸರು!
ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತ ಮಹಿಳಾ ತಂಡ ವಿಜಯ ಸಾಧಿಸಿದೆ.ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 285 ರನ್ ಕಲೆಹಾಕಿದರೆ, ಇಂಗ್ಲೆಂಡ್ 170 ರನ್ ಬಾರಿಸಿ ಆಲೌಟ್ ಆಗಿತ್ತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಭಾರತ 341 ರನ್ಗಳಿಸಿದರೆ, ಇಂಗ್ಲೆಂಡ್ 186 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 270 ರನ್‌ಗಳ ಜಯ ಸಾಧಿಸಿದೆ.

ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದ ಗೌರವ ಫಲಕದ ಮೇಲೆ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ವೇಗಿಯೊಬ್ಬರ ಹೆಸರು ಚಿನ್ನದ ಅಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಕೇವಲ 22 ವರ್ಷದ ಕ್ರಾಂತಿ ಗೌಡ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 37 ರನ್‌ಗಳಿಗೆ 5 ವಿಕೆಟ್ ಕಬಳಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬರಿಗಾಲಿನಲ್ಲಿ, ಮರದ ಕೊಂಬೆಯನ್ನೇ ಬ್ಯಾಟ್ ಮಾಡಿಕೊಂಡು ಆಡುತ್ತಿದ್ದ ಹಳ್ಳಿಯ ಹುಡುಗಿ, ಇಂದು ಕ್ರಿಕೆಟ್ ಜಗತ್ತಿನ ಮುಕುಟಪ್ರಾಯ ಲಾರ್ಡ್ಸ್ ಅಂಗಳದಲ್ಲಿ ಇತಿಹಾಸ ಬರೆದ ರೋಮಾಂಚಕ ಕಥೆ ಇಲ್ಲಿದೆ.
ಕ್ರಾಂತಿ ಸೃಷ್ಟಿಸಿದ ಇತಿಹಾಸ:
- ಮೊದಲ ಮಹಿಳೆ: 142 ವರ್ಷಗಳ ಇತಿಹಾಸವಿರುವ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಐದು ವಿಕೆಟ್ ಸಾಧನೆ ಮಾಡಿ ಗೌರವ ಫಲಕ ಸೇರಿದ ಮೊದಲ ಮಹಿಳಾ ಕ್ರಿಕೆಟರ್ ಕ್ರಾಂತಿ.
- ಭರ್ಜರಿ ಬೌಲಿಂಗ್: ಕೇವಲ 37 ರನ್ ನೀಡಿ 5 ವಿಕೆಟ್ ಉರುಳಿಸುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದು ಕ್ರಾಂತಿ ಗೌಡ್ ಇತಿಹಾಸ ಬರೆದರು.
- ಹೊಸ ದಾಖಲೆ: ಅತಿ ಕಿರಿಯ ವಯಸ್ಸಿನಲ್ಲಿ (22 ವರ್ಷ) ಟೆಸ್ಟ್‌ನಲ್ಲಿ 5 ವಿಕೆಟ್ ಪಡೆದ ಭಾರತದ ಮೊದಲ ಮಹಿಳಾ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
- ಪಂದ್ಯ ಶ್ರೇಷ್ಠ ಗೌರವ: ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಪಡೆದು, ಭಾರತಕ್ಕೆ 270 ರನ್‌ಗಳ ಬೃಹತ್ ಗೆಲುವು ತಂದುಕೊಟ್ಟು ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಸಣ್ಣ ಹಳ್ಳಿಯಿಂದ ಲಂಡನ್ ಅಂಗಳಕ್ಕೆ!
ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ‘ಘುವಾರಾ’ ಎಂಬ ಪುಟ್ಟ ಬುಡಕಟ್ಟು ಹಳ್ಳಿಯಲ್ಲಿ ಕ್ರಾಂತಿ ಜನಿಸಿದರು. 2012ರಲ್ಲಿ ತಂದೆ ಪೊಲೀಸ್ ಕಾನ್‌ಸ್ಟೆಬಲ್ ಕೆಲಸ ಕಳೆದುಕೊಂಡಾಗ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಕ್ರಿಕೆಟ್ ಕಿಟ್ ಕೊಳ್ಳಲು ಹಣವಿಲ್ಲದಿದ್ದಾಗ, ಮಗಳ ಕನಸಿಗಾಗಿ ತಾಯಿ ತನ್ನ ಮೈ ಮೇಲಿದ್ದ ಚಿನ್ನದ ಒಡವೆ ಹಾಗೂ ಬಳೆಗಳನ್ನು ಮಾರಿ ಕ್ರಿಕೆಟ್ ಕಿಟ್ ಕೊಡಿಸಿದರು.
ಆರಂಭದಲ್ಲಿ ಕ್ರಿಕೆಟ್ ಆಡಲು ಬ್ಯಾಟ್ ಇಲ್ಲದೆ, ಮರದ ಕೊಂಬೆಯನ್ನೇ ಬ್ಯಾಟ್ ಮಾಡಿಕೊಂಡು ಹುಡುಗರ ಜೊತೆ ಬರಿಗಾಲಿನಲ್ಲಿ ಕ್ರಾಂತಿ ಕ್ರಿಕೆಟ್ ಆಡುತ್ತಿದ್ದರು.
ಸ್ಥಳೀಯ ಪಂದ್ಯವೊಂದರಲ್ಲಿ ಮೂವರು ಹಿರಿಯ ಆಟಗಾರರನ್ನು ಕ್ಲೀನ್ ಬೌಲ್ಡ್ ಮಾಡಿದ ಕ್ರಾಂತಿಯ ವೇಗವನ್ನು ಕಂಡು, ಕೋಚ್ ರಾಜೀವ್ ಬಿಲ್ಥಾರೆ ಅವರು ಉಚಿತವಾಗಿ ತರಬೇತಿ ನೀಡಿದರು. ಈ ತರಬೇತಿಯ ಫಲವಾಗಿ ಕ್ರಾಂತಿ ಗೌಡ್ಗೆ ರಾಜ್ಯ ತಂಡದಲ್ಲಿ ಸ್ಥಾನ ಲಭಿಸಿತು. ಅಲ್ಲಿಂದ ಹಿಂತಿರುಗಿ ನೋಡಿಯೇ ಇಲ್ಲ ಎನ್ನಬಹುದು.
ಟೀಮ್ ಇಂಡಿಯಾಗೆ ಎಂಟ್ರಿ:
ದೇಶೀಯ ಕ್ರಿಕೆಟ್ನಲ್ಲಿ ಮಿಂಚಿನ ದಾಳಿ ಸಂಘಟಿಸಿ ಮಿಂಚಿದ್ದ ಕ್ರಾಂತಿ ಗೌಡ್ ಅವರ ಮೇಲೆ ಆಯ್ಕೆಗಾರರು ಕಣ್ಣಿಟ್ಟಿದ್ದರು. ಅದರಂತೆ ಟೀಮ್ ಇಂಡಿಯಾಗೂ ಆಯ್ಕೆಯಾದರು.
ಮೇ 2025 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕ್ರಾಂತಿ, ಕೆಲವೇ ತಿಂಗಳುಗಳಲ್ಲಿ ಭಾರತದ ಪ್ರಮುಖ ವೇಗಿಯಾಗಿ ಬೆಳೆದರು.
2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡುವ ಮೂಲಕ ಮೊದಲ ಬಾರಿಗೆ ಜಾಗತಿಕ ಗಮನ ಸೆಳೆದಿದ್ದರು. ಇದಾದ ಬಳಿಕ ಭಾರತ ಟೆಸ್ಟ್ ತಂಡದಲ್ಲೂ ಸ್ಥಾನ ಲಭಿಸಿತು.
ಹಳ್ಳಿಯ ಗಲ್ಲಿ ಕ್ರಿಕೆಟ್‌ನಿಂದ ಆರಂಭವಾದ ಇವರ ಜರ್ನಿ, ಇಂದು ಕ್ರಿಕೆಟ್‌ನ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್ಸ್ ಮೈದಾನದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯುವಂತೆ ಮಾಡಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!
ಒಟ್ಟಾರೆಯಾಗಿ ಹೇಳುವುದಾದರೆ ಕ್ರಾಂತಿ ಗೌಡ್ ಅವರ ಈ ಅದ್ಭುತ ಯಶೋಗಾಥೆ ಕೇವಲ ಕ್ರಿಕೆಟ್ ಲೋಕದ ಸಾಧನೆಯಲ್ಲ. ಇದು ಬಡತನ, ಕಷ್ಟಗಳನ್ನು ಮೆಟ್ಟಿ ನಿಂತು ಜಗತ್ತನ್ನೇ ಗೆಲ್ಲಬಹುದು ಎಂಬುದಕ್ಕೆ ಸಾಕ್ಷಿ.




