IPL 2027 ಹರಾಜಿಗೆ ಪಾಕ್ ವೇಗಿ ಎಂಟ್ರಿ? ಕೊನೆಗೂ ಮೌನ ಮುರಿದ ಅಮಿರ್

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಹರಾಜಿಗೆ ಸಂಬಂಧಿಸಿದಂತೆ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದ್ದ ಅತ್ಯಂತ ದೊಡ್ಡ ವದಂತಿಯೊಂದಕ್ಕೆ ಈಗ ತೆರೆ ಬಿದ್ದಿದೆ. ಬ್ರಿಟಿಷ್ ನಾಗರಿಕತ್ವದ ಕೋಟಾದಡಿ ಐಪಿಎಲ್ ಪ್ರವೇಶಿಸಲಿದ್ದಾರೆ ಎನ್ನಲಾಗಿದ್ದ ಪಾಕ್ ಮಾಜಿ ವೇಗಿ ಮೊಹಮ್ಮದ್ ಅಮಿರ್, ಈ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

IPL 2027 ಹರಾಜಿಗೆ ಪಾಕ್ ವೇಗಿ ಎಂಟ್ರಿ? ಕೊನೆಗೂ ಮೌನ ಮುರಿದ ಅಮಿರ್
Mohammed Amir
Image Credit source: x.com

Updated on: Nov 03, 2026 | 8:02 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಸೀಸನ್-20ರ ಮಿನಿ ಹರಾಜಿಗೆ ಪಾಕಿಸ್ತಾನ್ ತಂಡದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮಿರ್ ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಇದೀಗ ಈ ಎಲ್ಲಾ ಸುದ್ದಿಗಳಿಗೆ ಖುದ್ದು ಅಮಿರ್ ಅವರೇ ಸ್ಪಷ್ಟನೆ ನೀಡುವ ಮೂಲಕ ಬ್ರೇಕ್ ಹಾಕಿದ್ದಾರೆ.

ವದಂತಿ ಹರಡಲು ಕಾರಣವೇನು?

ಪಾಕಿಸ್ತಾನದ ಆಟಗಾರರಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ನಿಷೇಧವಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಇತ್ತೀಚೆಗೆ ಮೊಹಮ್ಮದ್ ಅಮಿರ್ ಬ್ರಿಟನ್ ಪೌರತ್ವವನ್ನು ಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ಅವರು ಅಫ್ಘಾನಿಸ್ತಾನ್ ಪ್ರೀಮಿಯರ್ ಲೀಗ್ ಡ್ರಾಫ್ಟ್‌ನಲ್ಲಿ ಬ್ರಿಟಿಷ್ ನಾಗರಿಕರಾಗಿ ಹೆಸರು ನೋಂದಾಯಿಸಿಕೊಂಡಿದ್ದರು.

ಇದರ ಬೆನ್ನಲ್ಲೇ ಮೊಹಮ್ಮದ್ ಅಮಿರ್ ಅವರು ಬ್ರಿಟಿಷ್ (ಯುಕೆ) ನಾಗರಿಕತ್ವದ ಕೋಟಾದಡಿ ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸ್ವತಃ ಅಮಿರ್ ಅವರೇ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮೊಹಮ್ಮದ್ ಅಮಿರ್ ಸ್ಪಷ್ಟನೆ:

ಈ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಡುತ್ತಿದ್ದಂತೆ ಎಚ್ಚೆತ್ತ ಮೊಹಮ್ಮದ್ ಅಮಿರ್, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ಎಲ್ಲರಿಗೂ ನಮಸ್ಕಾರ, ಐಪಿಎಲ್‌ಗೆ ಸಂಬಂಧಿಸಿದಂತೆ ಬರುತ್ತಿರುವ ಸುದ್ದಿಗಳು ನಿಜವಲ್ಲ ಎಂದು ನಾನು ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಬರೆಯುವ ಮೂಲಕ ವದಂತಿಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.

Amir

ಮೊಹಮ್ಮದ್ ಅಮಿರ್ ಪೋಸ್ಟ್

ಒಟ್ಟಾರೆಯಾಗಿ, ಬ್ರಿಟಿಷ್ ನಾಗರಿಕತ್ವ ಪಡೆದ ಬಳಿಕ ಮೊಹಮ್ಮದ್ ಅಮಿರ್ ಐಪಿಎಲ್ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತಾದರೂ, ಸದ್ಯಕ್ಕಂತೂ ಅಂತಹ ಯಾವುದೇ ಯೋಚನೆ ತಮಗಿಲ್ಲ ಎಂಬುದನ್ನು ಎಡಗೈ ವೇಗಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಅಮಿರ್ ಐಪಿಎಲ್ ಹರಾಜಿನಲ್ಲಿ ಭಾಗವಹಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಸದ್ಯಕ್ಕೆ ತೆರೆ ಬಿದ್ದಂತಾಗಿದೆ.

ಅಮಿರ್ ಯುಕೆ ಪ್ರಜೆ:

ಮೊಹಮ್ಮದ್ ಅಮಿರ್ ಅವರು ಅಧಿಕೃತವಾಗಿ ಬ್ರಿಟಿಷ್ ಪೌರತ್ವ ಪಡೆದುಕೊಂಡಿದ್ದಾರೆ. 2016 ರಲ್ಲಿ ಬ್ರಿಟಿಷ್ ಪ್ರಜೆಯಾದ ನರ್ಜೀಸ್ ಖಾನ್ ಅವರನ್ನು ವಿವಾಹವಾಗಿದ್ದ ಅವರು, 2020 ರಿಂದ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನೆಲೆಸಿದ್ದಾರೆ. ಇದೀಗ ನಿಯಮಾವಳಿಗಳ ಪ್ರಕಾರ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವ ಅವರು ಬ್ರಿಟಿಷ್ ಪಾಸ್‌ಪೋರ್ಟ್ ಪಡೆದಿದ್ದಾರೆ. ಈ ಪೌರತ್ವದ ಹಿನ್ನೆಲೆಯಲ್ಲಿ ಅಮಿರ್ ಅವರಿಗೆ ಐಪಿಎಲ್ ಹರಾಜಿಗಾಗಿ ಹೆಸರು ನೋಂದಾಯಿಸಿಕೊಳ್ಳುವ ತಾಂತ್ರಿಕ ಅವಕಾಶವಿದೆ. ಆದರೆ, ತಾವು ಸದ್ಯಕ್ಕೆ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಅಮಿರ್ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ ಹರಾಜು ಯಾವಾಗ?

ಐಪಿಎಲ್ 2027 ರ ಮಿನಿ ಹರಾಜು ಪ್ರಕ್ರಿಯೆಯು 2026 ರ ಡಿಸೆಂಬರ್ 16 ರಂದು ನಡೆಯಲಿದೆ. ಹರಾಜಿಗೂ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 15 ರಂದು ಬಿಸಿಸಿಐ ಅಧಿಕಾರಿಗಳು ಮತ್ತು ಎಲ್ಲಾ 10 ಫ್ರಾಂಚೈಸಿಗಳ ಮಾಲೀಕರ ನಡುವೆ ವಿಶೇಷ ಸಭೆ ಸೇರಲಿದ್ದಾರೆ. ಇದರಲ್ಲಿ ಹರಾಜಿನ ನಿಯಮಾವಳಿಗಳ ಬಗ್ಗೆ ಅಂತಿಮ ಚರ್ಚೆ ನಡೆಯಲಿದೆ.

ಇದನ್ನೂ ಓದಿ: ‘ಮ್ಯಾಡ್ ಮ್ಯಾಕ್ಸ್’ ಯುಗಾಂತ್ಯ: ದಿಢೀರ್ ನಿವೃತ್ತಿ ಘೋಷಿಸಿದ ಗ್ಲೆನ್ ಮ್ಯಾಕ್ಸ್​ವೆಲ್

ಇನ್ನು ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲಾ 10 ತಂಡಗಳು ತಾವು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿದೆ. ಈ ಆಟಗಾರರ ರಿಟೆನ್ಷನ್ ಪಟ್ಟಿಯನ್ನು ಸಲ್ಲಿಸಲು ಬಿಸಿಸಿಐ 2026 ರ ನವೆಂಬರ್ 17 ಅನ್ನು ಅಂತಿಮ ಗಡುವು ಎಂದು ನಿಗದಿಪಡಿಸಿದೆ. ಅಂದರೆ ನವೆಂಬರ್ 17 ಅಥವಾ ನವೆಂಬರ್ 18 ರಂದು 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಸಂಪೂರ್ಣ ಮಾಹಿತಿ ಹೊರಬೀಳಲಿದೆ.

Published On - 8:00 am, Tue, 3 November 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us