
ಭಾರತ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಮುಂಬರುವ 2026-27ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಹೈದರಾಬಾದ್ ಪುರುಷರ ತಂಡದ ನಾಯಕರಾಗಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಶುಕ್ರವಾರ (ಸೆ. 11) ನಡೆದ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಹಿರಿಯ ಆಯ್ಕೆ ಸಮಿತಿ ಸಭೆಯಲ್ಲಿ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ತಂಡದ ಮತ್ತೊಬ್ಬ ಅನುಭವಿ ಎಡಗೈ ವೇಗಿ ಹಾಗೂ ಬೌಲಿಂಗ್ ಆಲ್ ರೌಂಡರ್ ಚಾಮಾ ಮಿಲಿಂದ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಸಿರಾಜ್ ಅವರು ಭಾರತ ರಾಷ್ಟ್ರೀಯ ತಂಡದ ಪಂದ್ಯಗಳ ಕಾರಣದಿಂದ ಲಭ್ಯವಿಲ್ಲದ ಅವಧಿಯಲ್ಲಿ, ಚಾಮಾ ಮಿಲಿಂದ್ ಹೈದರಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೆಚ್‌ಸಿಎ ಸ್ಪಷ್ಟಪಡಿಸಿದೆ.
ಮೊಹಮ್ಮದ್ ಸಿರಾಜ್ ಕಳೆದ ರಣಜಿ ಸೀಸನ್‌ನಲ್ಲಿ ರಾಹುಲ್ ಸಿಂಗ್ ಅವರಿಂದ ನಾಯಕತ್ವದ ಜವಾಬ್ದಾರಿ ಪಡೆದು, ಮುಂಬೈ ಮತ್ತು ಛತ್ತೀಸ್‌ಗಢ ವಿರುದ್ಧದ ಎರಡು ಪಂದ್ಯಗಳಲ್ಲಿ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು. ಆದರೆ, ಪೂರ್ಣ ಪ್ರಮಾಣದ ಸೀಸನ್‌ಗೆ ಅವರು ತಂಡದ ಮುಖ್ಯ ನಾಯಕರಾಗಿ ನೇಮಕಗೊಂಡಿರುವುದು ಇದೇ ಮೊದಲು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಜಸ್‌ಪ್ರೀತ್ ಬುಮ್ರಾ ಅವರಂತಹ ದಿಗ್ಗಜರೊಂದಿಗೆ ಆಡಿ ಅಪಾರ ಅನುಭವ ಹೊಂದಿರುವ ಮೊಹಮ್ಮದ್ ಸಿರಾಜ್, ಈಗ ತಮ್ಮ ತವರು ತಂಡವನ್ನು ದೇಶಿ ಕ್ರಿಕೆಟ್‌ನ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಹೊತ್ತಿದ್ದಾರೆ.
ಮೊಹಮ್ಮದ್ ಸಿರಾಜ್ ಮತ್ತು ಚಾಮಾ ಮಿಲಿಂದ್ ಜೋಡಿಯು ಹೈದರಾಬಾದ್ ತಂಡದ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದೆ. ಜತೆಗೆ ಇವರಿಬ್ಬರೇ ನಾಯಕತ್ವದ ಸೂತ್ರ ಹಿಡಿದಿರುವುದರಿಂದ ತಂಡದ ಕಾರ್ಯತಂತ್ರಗಳು ಬೌಲಿಂಗ್ ಸ್ನೇಹಿಯಾಗಿರಲಿವೆ ಎಂಬ ನಿರೀಕ್ಷೆ ಕ್ರಿಕೆಟ್ ವಲಯದಲ್ಲಿದೆ.
ಕಳೆದ ಕೆಲ ಸೀಸನ್‌ಗಳಿಂದ ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿರುವ ಹೈದರಾಬಾದ್ ತಂಡಕ್ಕೆ ಈ ಹೊಸ ನಾಯಕತ್ವ ಹೊಸ ಚೈತನ್ಯ ನೀಡಬಲ್ಲದೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 9ನೇ ಕ್ರಮಾಂಕದಲ್ಲಿ ಸಿಡಿಲಬ್ಬರ: ವಿಶ್ವ ದಾಖಲೆ ಬರೆದ ಪಾಕ್ ಆಟಗಾರ
2026-27ರ ರಣಜಿ ಟ್ರೋಫಿ ಟೂರ್ನಿಯು ಅಕ್ಟೋಬರ್ 11, 2026 ರಿಂದ ಆರಂಭವಾಗಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿರುವ ವೇಳಾಪಟ್ಟಿಯಂತೆ, ಈ ಬಾರಿಯ ಟೂರ್ನಿಯನ್ನು ಆಟಗಾರರ ದಣಿವು ನಿವಾರಿಸಲು ಮತ್ತು ಹವಾಮಾನದ ಅನುಕೂಲಕ್ಕಾಗಿ ಎರಡು ಹಂತಗಳಲ್ಲಿಆಯೋಜಿಸಲಾಗುತ್ತದೆ.
ಅಕ್ಟೋಬರ್ 11 ರಂದು ನಡೆಯಲಿರುವ ಮೊದಲ ದಿನದಂದೇ ಹೈದರಾಬಾದ್ ತಂಡವು ತ್ರಿಪುರಾ ವಿರುದ್ಧ ಹಾಗೂ ಕರ್ನಾಟಕ ತಂಡವು ಆಂಧ್ರಪ್ರದೇಶ್ ವಿರುದ್ಧ ಸೆಣಸಾಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿವೆ.