IPL 2025: ‘ಅಂಕಿಅಂಶಗಳೇ ಎಲ್ಲವನ್ನೂ ಹೇಳುತ್ತವೆ’; ರೋಹಿತ್ಗೆ ತಿರುಗೇಟು ನೀಡಿದ ಮೊಹಮ್ಮದ್ ಸಿರಾಜ್
Mohammed Siraj's Snippy Reply to Rohit Sharma: ಭಾರತ ತಂಡದಿಂದ ಕೈಬಿಡಲ್ಪಟ್ಟ ಮೊಹಮ್ಮದ್ ಸಿರಾಜ್ ಅವರು ರೋಹಿತ್ ಶರ್ಮಾ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಹಳೆಯ ಚೆಂಡಿನಲ್ಲಿ ಪರಿಣಾಮಕಾರಿಯಲ್ಲ ಎಂಬ ರೋಹಿತ್ ಅವರ ಆರೋಪಕ್ಕೆ ಸಿರಾಜ್ ಅವರು ತಮ್ಮ ಅಂಕಿಅಂಶಗಳನ್ನು ತೋರಿಸಿ ತಮ್ಮ ಪ್ರತಿಭೆಯನ್ನು ಸಮರ್ಥಿಸಿಕೊಂಡಿದ್ದಾರೆ. ಐಪಿಎಲ್ 2025ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡಲು ಸಿರಾಜ್ ಸಿದ್ಧರಾಗಿದ್ದಾರೆ.

ಕೆಲವೇ ತಿಂಗಳುಗಳ ಹಿಂದೆ ಟೀಂ ಇಂಡಿಯಾದ ಬೌಲಿಂಗ್ ವಿಭಾಗದ ಖಾಯಂ ಸದಸ್ಯ ಎನಿಸಿಕೊಂಡಿದ್ದ ಬೌಲರ್ ಮೊಹಮ್ಮದ್ ಸಿರಾಜ್ಗೆ (Mohammed Siraj) ತಂಡದಲ್ಲಿ ಸ್ಥಾನ ಇಲ್ಲದಂತಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊನೆಯದಾಗಿ ಆಡಿದ್ದ ಸಿರಾಜ್ರನ್ನು ಆ ಬಳಿಕ ತಂಡದಿಂದ ಕೈಬಿಡಲಾಗಿದೆ. ಟೆಸ್ಟ್ ಮಾದರಿಯ ಹೊರತಾಗಿ ಏಕದಿನ ಮಾದರಿಗೂ ಸಿರಾಜ್ ಆಯ್ಕೆಯಾಗಿಲ್ಲ. ಇತ್ತೀಚೆಗಷ್ಟೇ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಿರಾಜ್ಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ತಂಡವನ್ನು ಪ್ರಕಟಿಸುವ ವೇಳೆ ಸಿರಾಜ್ರನ್ನು ಕೈಬಿಟ್ಟಿದ್ಯಾಕೆ ಎಂಬುದನ್ನು ವಿವರಿಸಿದ್ದ ನಾಯಕ ರೋಹಿತ್ (Rohit Sharma), ಸಿರಾಜ್ ಹಳೆಯ ಚೆಂಡಿನಲ್ಲಿ ಅಷ್ಟೊಂದು ಪರಿಣಾಮಕಾರಿಯಲ್ಲ. ಹಾಗಾಗಿ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂದಿದ್ದರು. ಆದರೀಗ ರೋಹಿತ್ ಅವರ ಈ ಹೇಳಿಕೆಗೆ ಸಿರಾಜ್ ಮಾರ್ಮಿಕ ಉತ್ತರ ನೀಡಿ, ನಾಯಕನಿಗೆ ಟಕ್ಕರ್ ನೀಡುವ ಕೆಲಸ ಮಾಡಿದ್ದಾರೆ.
ಅಂಕಿಅಂಶಗಳೇ ಎಲ್ಲವನ್ನೂ ಹೇಳುತ್ತವೆ
ವಾಸ್ತವವಾಗಿ ಈ ಬಾರಿಯ ಐಪಿಎಲ್‌ನಿಂದ ಮೊಹಮ್ಮದ್ ಸಿರಾಜ್, ಗುಜರಾತ್ ಟೈಟನ್ಸ್ ತಂಡದ ಪರ ಆಡಲಿದ್ದಾರೆ. ಹೀಗಾಗಿ ಐಪಿಎಲ್‌ನ ಹೊಸ ಸೀಸನ್‌ಗೆ ಮೊದಲು ಗುಜರಾತ್ ಟೈಟನ್ಸ್ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಈ ಸಮಯದಲ್ಲಿ, ಹೊಸ ತಂಡದ ಪರ ಕಣಕ್ಕಿಳಿಯುತ್ತಿರುವ ಸಿರಾಜ್ ಬಳಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗದಿರುವ ಬಗ್ಗೆ ಮತ್ತು ರೋಹಿತ್ ನೀಡಿದ ಕಾರಣದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಮಾರ್ಮಿಕ ಉತ್ತರ ನೀಡಿರುವ ಸಿರಾಜ್, ‘ಕಳೆದ ವರ್ಷ, ಹಳೆಯ ಚೆಂಡಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಹತ್ತು ವೇಗದ ಬೌಲರ್‌ಗಳಲ್ಲಿ ನನ್ನ ಹೆಸರು ಸೇರಿತ್ತು. ಎಕಾನಮಿ ರೇಟ್ ಕೂಡ ಕಡಿಮೆ ಇದೆ. ಅಂಕಿಅಂಶಗಳೇ ಎಲ್ಲವನ್ನೂ ಹೇಳುತ್ತವೆ. ನಾನು ಹೊಸ ಮತ್ತು ಹಳೆಯ ಚೆಂಡುಗಳೆರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದೇನೆ ಎಂದಿದ್ದಾರೆ.
ಮೇಲೆ ಹೇಳಿದಂತೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ಸಿರಾಜ್ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಸಿರಾಜ್ರನ್ನು ತಂಡದಿಂದ ಕೈಬಿಡಲು ಕಾರಣವೂ ಇದ್ದು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿರಾಜ್ ಪ್ರದರ್ಶನ ಸಪ್ಪೆಯಾಗಿತ್ತು. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದಾದ ನಂತರ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮತ್ತು ಏಕದಿನ ಸರಣಿಗೂ ಅವರನ್ನು ಕಡೆಗಣಿಸಲಾಯಿತು. ಅದಾದ ನಂತರ ಸಿರಾಜ್ರನ್ನು ಚಾಂಪಿಯನ್ಸ್ ಟ್ರೋಫಿಗೂ ಆಯ್ಕೆ ಮಾಡದರೆ ಅವರ ಸ್ಥಾನದಲ್ಲಿ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರಿಗೆ ಅವಕಾಶ ನೀಡಲಾಗಿತ್ತು.
Mohammed Siraj: 87 ಎಸೆತಗಳಲ್ಲಿ ಸೊನ್ನೆ ರನ್; ರೋಹಿತ್ಗೆ ತಕ್ಕ ಉತ್ತರ ನೀಡಿದ ಸಿರಾಜ್
ಹೊಸ ಆರಂಭಕ್ಕೆ ಸಿರಾಜ್ ಸಿದ್ಧ
ಮೊಹಮ್ಮದ್ ಸಿರಾಜ್ ಕಳೆದ 7 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಭಾಗವಾಗಿದ್ದರು. ಆದರೆ ಆರ್ಸಿಬಿ ಅವರನ್ನು ಮೆಗಾ ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆ ಮಾಡಿತು. ಇದಾದ ನಂತರ ಗುಜರಾತ್ ಟೈಟಾನ್ಸ್ ಅವರನ್ನು 12.25 ಕೋಟಿ ರೂ.ಗೆ ಖರೀದಿಸಿದೆ. ಈ ಬಾರಿ ಅವರು ಹೊಸ ತಂಡದೊಂದಿಗೆ ಐಪಿಎಲ್ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಗುಜರಾತ್ ತಂಡ ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಸಮಯದಲ್ಲಿ ಸಿರಾಜ್ ಆಡುವುದನ್ನು ಕಾಣಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ