IPL 2025: 17 ವರ್ಷಗಳ ಬಳಿಕ ಆರ್ಸಿಬಿ- ಕೆಕೆಆರ್ ಫಸ್ಟ್ ಫೈಟ್; ಮರುಕಳಿಸುತ್ತಾ ಇತಿಹಾಸ? ತಿರುಗೇಟು ನೀಡುತ್ತಾ ಆರ್ಸಿಬಿ?
IPL 2025 Opener: 2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್ಸಿಬಿ ತಂಡಗಳು ಮುಖಾಮುಖಿಯಾಗುತ್ತಿವೆ. ಹೊಸ ನಾಯಕರೊಂದಿಗೆ ಕಣಕ್ಕಿಳಿಯುತ್ತಿರುವ ಈ ಎರಡೂ ತಂಡಗಳು ಬಲಿಷ್ಠವಾಗಿ ಕಾಣುತ್ತಿವೆ. ಕೆಕೆಆರ್ ತಂಡದಲ್ಲಿ ಅಜಿಂಕ್ಯ ರಹಾನೆ ನಾಯಕತ್ವ ವಹಿಸಿದರೆ, ಆರ್ಸಿಬಿ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಸಂಯೋಜನೆಯನ್ನು ಹೊಂದಿರುವ ಈ ತಂಡಗಳು ರೋಮಾಂಚಕ ಪಂದ್ಯವನ್ನು ನೀಡುವ ನಿರೀಕ್ಷೆಯಿದೆ.

2025 ರ ಐಪಿಎಲ್ಗೆ (IPL 2025) ವೇದಿಕೆ ಸಜ್ಜಾಗಿದೆ. ಅಭಿಮಾನಿಗಳಿಂದ ಹಿಡಿದು ಆಟಗಾರರವರೆಗೆ ಎಲ್ಲರೂ ಮಾರ್ಚ್ 22 ರಂದು ಕೋಲ್ಕತ್ತಾದಲ್ಲಿ ಪ್ರಾರಂಭವಾಗುವ 18 ನೇ ಸೀಸನ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (KKR vs RCB) ನಡುವೆ ನಡೆಯಲಿದೆ. 17 ವರ್ಷಗಳ ನಂತರ ಎರಡೂ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. 2008 ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆಗ ಕೋಲ್ಕತ್ತಾ ಬೆಂಗಳೂರು ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಆದರೆ ಈಗ ಬಹಳಷ್ಟು ಬದಲಾಗಿದ್ದು, ಈ ಬಾರಿ ಎರಡೂ ತಂಡಗಳು ಹೊಸ ನಾಯಕರೊಂದಿಗೆ ಆಡುತ್ತಿವೆ. ಅಜಿಂಕ್ಯ ರಹಾನೆ ಕೆಕೆಆರ್ ತಂಡವನ್ನು ಮುನ್ನಡೆಸಿದರೆ, ರಜತ್ ಪಾಟಿದಾರ್ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ. ಪಾಟಿದಾರ್ ಆರ್‌ಸಿಬಿಯ ಅದೃಷ್ಟವನ್ನು ಬದಲಾಯಿಸುತ್ತಾರೋ ಅಥವಾ ರಹಾನೆ ಕೆಕೆಆರ್ ಆಳ್ವಿಕೆಯನ್ನು ಮುಂದುವರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.
ಕೆಕೆಆರ್ ಬಲ ಏನು?
ಕಳೆದ ಸೀಸನ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿಯೂ ಗೆಲುವಿನೊಂದಿಗೆ ಆರಂಭಿಸಲು ಬಯಸುತ್ತಿದೆ. ಆದರೆ ಕಳೆದ ಬಾರಿ ತಂಡವನ್ನು ಚಾಂಪಿಯನ್ ಮಾಡಿದ್ದ ಕೆಲವು ಆಟಗಾರರು ಈ ಬಾರಿ ತಂಡದಲ್ಲಿಲ್ಲಾವಾದರೂ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ನಾಯಕ ಹೊಸಬರಾಗಿದ್ದರೂ, ಈ ಬಾರಿಯೂ ಬಹುತೇಕ ಅದೇ ತಂಡ ಆಡಲಿದೆ. ಫಿಲ್ ಸಾಲ್ಟ್ ಬದಲಿಗೆ ಕ್ವಿಂಟನ್ ಡಿ ಕಾಕ್ ಆರಂಭಿಕ ಸ್ಥಾನವನ್ನು ತುಂಬಲಿದ್ದಾರೆ. ಉಳಿದಂತೆ ಸುನಿಲ್ ನರೈನ್ ಮತ್ತೊಮ್ಮೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ, ಉಪನಾಯಕ ವೆಂಕಟೇಶ್ ಅಯ್ಯರ್ ತಂಡವನ್ನು ನಿಭಾಯಿಸಲಿದ್ದು, ಶ್ರೇಯಸ್ ಅಯ್ಯರ್ ಪಾತ್ರವನ್ನು ಈಗ ಅಜಿಂಕ್ಯ ರಹಾನೆ ನಿರ್ವಹಿಸಲಿದ್ದಾರೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದು, ಇವರ ನಂತರ, ತಂಡದ ಫೈರ್‌ಪವರ್ ರಿಂಕು ಸಿಂಗ್ ಎಂದಿನಂತೆ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕಳೆದ ಬಾರಿಯಂತೆ ಆಲ್‌ರೌಂಡರ್ ಸ್ಥಾನವನ್ನು ರಮಣದೀಪ್ ಸಿಂಗ್ ಮತ್ತು ಆಂಡ್ರೆ ರಸೆಲ್ ತುಂಬಲಿದ್ದಾರೆ.
ಬೌಲಿಂಗ್ ಬಗ್ಗೆ ಹೇಳುವುದಾದರೆ, ಮಿಚೆಲ್ ಸ್ಟಾರ್ಕ್ ಬದಲಿಗೆ, ಸ್ಪೆನ್ಸರ್ ಜಾನ್ಸನ್ ಮತ್ತು ಅನ್ರಿಕ್ ನೋಕಿಯಾ ತಂಡವನ್ನು ಸೇರಿಕೊಂಡಿದ್ದಾರೆ. ಈ ಇಬ್ಬರ ಜೊತೆಗೆ ವೈಭವ್ ಅರೋರಾ ಮತ್ತು ಹರ್ಷಿತ್ ರಾಣಾ ಕೂಡ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಕಾಣಿಸಿಕೊಳ್ಳಲಿದ್ದಾರೆ.
ಈ ಬಾರಿ ಆರ್‌ಸಿಬಿ ತಂಡ ಹೇಗಿದೆ?
ಆರ್‌ಸಿಬಿ ತಂಡ 18 ವರ್ಷಗಳಿಂದ ತನ್ನ ಮೊದಲ ಟ್ರೋಫಿಗಾಗಿ ಹಂಬಲಿಸುತ್ತಿದೆ. ಕಳೆದ ಸೀಸನ್ನಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತಾದರೂ ಎಲಿಮಿನೇಟರ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಈ ಸೀಸನ್ನಲ್ಲಿ ಹಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿರುವ ರೆಡ್ ಆರ್ಮಿಯನ್ನು ಹೊಸ ನಾಯಕ ರಜತ್ ಪಾಟಿದರ್ ಮುನ್ನಡೆಸಲಿದ್ದಾರೆ. ಇಷ್ಟೇ ಅಲ್ಲದೆ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್‌ರಂತಹ ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟಿರುವ ಆರ್ಸಿಬಿ, ಹೊಸ ಆಟಗಾರರೊಂದಿಗೆ ಎಷ್ಟರ ಮಟ್ಟಿಗೆ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ.
IPL 2025 RCB: 82.25 ಕೋಟಿ ವ್ಯರ್ಥವಾಗುತ್ತಾ?: ಪಂದ್ಯ ಆರಂಭಕ್ಕು ಮುನ್ನವೇ ಆರ್‌ಸಿಬಿಗೆ ಶುರುವಾಗಿದೆ ಟೆನ್ಶನ್
ಈ ಬಾರಿ ಬೆಂಗಳೂರಿನ ಬ್ಯಾಟಿಂಗ್ ಬಲಿಷ್ಠವಾಗಿರುವಂತೆ ಕಾಣುತ್ತಿದೆ. ಅಗ್ರ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಬ್ಯಾಟ್ಸ್‌ಮನ್‌ಗಳಿದ್ದಾರೆ. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ, ರಜತ್ ಪಾಟಿದಾರ್ ಮತ್ತು ಜಾಕೋಬ್ ಬೆಥೆಲ್ ತಂಡವನ್ನು ಬಲಪಡಿಸಲಿದ್ದಾರೆ. ಇವರ ಜೊತೆಗೆ ಟಿಮ್ ಡೇವಿಡ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಪಂದ್ಯದ ದಿಕ್ಕನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್‌ರಂತಹ ಅನುಭವಿ ವೇಗದ ಬೌಲರ್‌ಗಳಿದ್ದಾರೆ. ಇವರ ಜೊತೆಗೆ, ಯಶ್ ದಯಾಳ್ ಕೂಡ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಕೃನಾಲ್ ಪಾಂಡ್ಯ ಹಾಗೂ ಸುಯೇಶ್ ಶರ್ಮಾ ಸ್ಪಿನ್ ವಿಭಾಗವನ್ನು ಮುನ್ನಡೆಸುವುದನ್ನು ಕಾಣಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ