
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಐಪಿಎಲ್ 2026 (IPL 2026) ರಲ್ಲಿ ಇದುವರೆಗೆ 11 ಪಂದ್ಯಗಳನ್ನು ಆಡಿದೆ. ಅಂದರೆ ಲೀಗ್ ಹಂತದಲ್ಲಿ ಎಲ್ಲೋ ಆರ್ಮಿಗೆ ಇನ್ನು ಉಳಿದಿರುವುದು ಕೇವಲ ಮೂರೇ ಮೂರು ಪಂದ್ಯಗಳು. ಈ ಮೂರು ಪಂದ್ಯಗಳನ್ನು ಗೆದ್ದರೂ ಸಿಎಸ್‌ಕೆ ಪ್ಲೇಆಫ್ಗೇರಬೇಕೆಂದರೆ ಉಳಿದ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗಿದೆ. ಇದೆಲ್ಲದರ ನಡುವೆ ಕೋಟ್ಯಾಂತರ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಎಂದರೆ, ಧೋನಿ (MS Dhoni) ಯಾವಾಗ ಆಡುತ್ತಾರೆ? ಎಂಬುದು. ಪ್ರಸ್ತುತ ಧೋನಿ, ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಧೋನಿ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಹೀಗಿರುವಾಗ ಸಿಎಸ್‌ಕೆ ತನ್ನ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಾದರೂ ಧೋನಿ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನವೇ ಧೋನಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಧೋನಿ ಆರಂಭಿಕ ಕೆಲವು ಪಂದ್ಯಗಳನ್ನು ಆಡುವುದಿಲ್ಲ ಎಂದು ಫ್ರಾಂಚೈಸಿ ಹೇಳಿತ್ತು. ಆದರೀಗ ಲೀಗ್ ಹಂತ ಮುಗಿಯುವುದಕ್ಕೆ ಬಂದರೂ ಧೋನಿ ಆಡುವುದರ ಬಗ್ಗೆ ಸುಳಿವು ಸಿಕ್ಕಿಲ್ಲ. ಇದೀಗ ಧೋನಿ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿ ಸಿಕ್ಕಿದ್ದು, ಲಕ್ನೋ ವಿರುದ್ಧದ ಪಂದ್ಯಕ್ಕೆ ಧೋನಿ ತಂಡದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಇದೆ.
ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕ್ರಿಕ್‌ಬಜ್ ವರದಿ ಮಾಡಿದ್ದು, ಲಕ್ನೋಗೆ ಸಿಎಸ್‌ಕೆ ತಂಡ ಪ್ರಯಾಣ ಮಾಡಲಿರುವ ಇಂಡಿಗೊ ವಿಮಾನದಲ್ಲಿ ಒಟ್ಟು 60 ಟಿಕೆಟ್‌ಗಳನ್ನು ಬುಕ್ ಮಾಡಲಾಗಿದೆ. ಈ 60 ಪ್ರಯಾಣಿಕರಲ್ಲಿ ಧೋನಿ ಕೂಡ ಸೇರಿದ್ದಾರೆ. ಅಂದರೆ ಧೋನಿ ತಂಡದೊಂದಿಗೆ ಲಕ್ನೋಗೆ ಪ್ರಯಾಣಿಸಲ್ಲಿದ್ದು, ಅಲ್ಲಿ ಅವರು ತಂಡದೊಂದಿಗೆ ಇರಲಿದ್ದಾರೆ. ಆದಾಗ್ಯೂ ಧೋನಿ ಈ ಪಂದ್ಯದಲ್ಲಿ ಆಡುತ್ತಾರಾ? ಅಥವಾ ಇಲ್ಲವಾ ಎಂಬುದು ಇನ್ನು ಖಚಿತವಾಗಿಲ್ಲ.
RCB vs MI: ಒಂದೇ ಪಂದ್ಯದಲ್ಲಿ ಒಟ್ಟಿಗೆ ಧೋನಿ ದಾಖಲೆ ಮುರಿದ ರೋಹಿತ್, ಕೊಹ್ಲಿ
ಒಂದು ವೇಳೆ ಧೋನಿ ಲಕ್ನೋ ವಿರುದ್ಧವೂ ಕಣಕ್ಕಿಳಿಯದಿದ್ದರೆ, ಮೇ 18 ರಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಧೋನಿ ಆಡುವ ಸಾಧ್ಯತೆಗಳಿವೆ. ಏಕೆಂದರೆ ಸಿಎಸ್‌ಕೆ ತನ್ನ ತವರು ನೆಲವಾದ ಎಂಎ ಚಿದಂಬರಂ ಮೈದಾನದಲ್ಲಿ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಈ ಪಂದ್ಯದ ಬಳಿಕ ಸಿಎಸ್‌ಕೆ ಈ ಆವೃತ್ತಿಯಲ್ಲಿ ಯಾವ ಪಂದ್ಯವನ್ನು ಇಲ್ಲಿ ಆಡುವುದಿಲ್ಲ. ಹೀಗಾಗಿ ನಿವೃತ್ತಿ ಅಂಚಿನಲ್ಲಿರುವ ಧೋನಿ, ಸಿಎಸ್ಕೆಯ ತವರು ನೆಲದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿ ಐಪಿಎಲ್ಗೆ ವಿದಾಯ ಹೇಳುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Wed, 13 May 26