GT vs MI: ತಿಲಕ್ ಶತಕ, ಅಶ್ವನಿ ಮಾರಕ ದಾಳಿ; ಸತತ ಸೋಲುಗಳಿಂದ ಹೊರಬಂದ ಮುಂಬೈ

IPL 2026 MI vs GT: ಐಪಿಎಲ್ 2026 ರ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ 99 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ತಿಲಕ್ ವರ್ಮಾ ಅವರ ಸ್ಫೋಟಕ ಶತಕದಿಂದ 199 ರನ್ ಗಳಿಸಿದ ಮುಂಬೈ, ಗುಜರಾತ್ ಅನ್ನು 100 ರನ್‌ಗಳಿಗೆ ಆಲೌಟ್ ಮಾಡಿತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈಗೆ ಈ ನಿರ್ಣಾಯಕ ಗೆಲುವು ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿದೆ.

GT vs MI: ತಿಲಕ್ ಶತಕ, ಅಶ್ವನಿ ಮಾರಕ ದಾಳಿ; ಸತತ ಸೋಲುಗಳಿಂದ ಹೊರಬಂದ ಮುಂಬೈ
Mumbai Indians

Updated on: Apr 20, 2026 | 11:30 PM

ಐಪಿಎಲ್ 2026 (IPL 2026) ರ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಗುಜರಾತ್ ಟೈಟಾನ್ಸ್ (MI vs GT) ತಂಡವನ್ನು ಎದುರಿಸಿತ್ತು. ಈ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ ಮುಂಬೈ ಮುಂದಿನ ಹಂತವನ್ನು ತಲುಪಬೇಕೆಂದರೆ ಉಳಿದ ಎಲ್ಲಾ ಪಂದ್ಯವನ್ನು ಗೆಲ್ಲಬೇಕು. ಅದರಂತೆ ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡ ತಿಲಕ್ ವರ್ಮಾ ಅವರ ಸ್ಫೋಟಕ ಶತಕದ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್​ಗಳನ್ನು ಕಳೆದುಕೊಂಡು 199 ರನ್ ಕಲೆಹಾಕಿತು. ಈ ಮೂಲಕ ಗುಜರಾತ್ ಗೆಲುವಿಗೆ 200 ರನ್​ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಗುಜರಾತ್ ಕೇವಲ 100 ರನ್​ಗಳಿಗೆ ಆಲೌಟ್ ಆಗುವ ಮೂಲಕ ಬರೋಬ್ಬರಿ 99 ರನ್​ಗಳಿಂದ ಪಂದ್ಯವನ್ನು ಸೋತಿತು.

ಮುಂಬೈಗೆ ಆರಂಭಿಕ ಆಘಾತ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 30 ನೇ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ತಮ್ಮ ಅಭಿಮಾನಿಗಳ ಮುಂದೆ ಹೀನಾಯ ಸೋಲನ್ನು ಅನುಭವಿಸಿತು. ಆದಾಗ್ಯೂ, ಪಂದ್ಯ ಪ್ರಾರಂಭವಾದಾಗ, ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ. ಏಕೆಂದರೆ ಗುಜರಾತ್ ವೇಗಿ ಕಗಿಸೊ ರಬಾಡ, ಪವರ್‌ಪ್ಲೇನಲ್ಲಿಯೇ ಮುಂಬೈ ಇಂಡಿಯನ್ಸ್​ ತಂಡದ ಪ್ರಮುಖ 3 ವಿಕೆಟ್‌ಗಳನ್ನು ಉರುಳಿಸಿದರು. ಆದರೆ ಆ ನಂತರ ನಮನ್ ಧೀರ್ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು 100 ರನ್‌ಗಳ ಹತ್ತಿರಕ್ಕೆ ತಂದರು.

ತಿಲಕ್ ಸ್ಫೋಟಕ ಶತಕ

ಇದಾದ ನಂತರ, ತಂಡದ ಇನ್ನಿಂಗ್ಸ್ ಕಟ್ಟುವ ಕೆಲಸವನ್ನು ತಿಲಕ್ ವರ್ಮಾ ಮಾಡಿದರು. ಹಿಂದಿನ 5 ಪಂದ್ಯಗಳಲ್ಲಿ ಕೇವಲ 43 ರನ್ ಗಳಿಸಿದ್ದ ತಿಲಕ್, ಈ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಅದ್ಭುತ ಶತಕ ಗಳಿಸಿದರು. ಒಂದು ಹಂತದಲ್ಲಿ, ತಿಲಕ್ 22 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದ್ದರು. ಆದರೆ ಇಲ್ಲಿಂದ ಗೇರ್ ಬದಲಿಸಿದ ತಿಲಕ್ ಬೌಂಡರಿಗಳ ಮಳೆಗರೆದರು. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ ಕೇವಲ 15 ರನ್ ಗಳಿಸಲಷ್ಟೇ ಶಕ್ತರಾದರು. ತಿಲಕ್ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕವನ್ನು ಪೂರೈಸಿದರು.

ಮೊದಲ ಎಸೆತದಲ್ಲೇ ಬುಮ್ರಾಗೆ ವಿಕೆಟ್

ಈ ಗುರಿ ಬೆನ್ನಟ್ಟಿದ ಗುಜರಾತ್​ಗೆ ಬುಮ್ರಾ ಮೊದಲ ಎಸೆತದಲ್ಲೇ ಶಾಕ್ ನೀಡಿದರು. ಕಳೆದ ಐಪಿಎಲ್ ಸೀಸನ್‌ನಿಂದ ಇದುವರೆಗೆ ಅಂದರೆ ಸತತ 146 ಎಸೆತಗಳಲ್ಲಿ ವಿಕೆಟ್ ಪಡೆಯದೆ ಉಳಿದಿದ್ದ ಬುಮ್ರಾ, ಇನ್ನಿಂಗ್ಸ್‌ನ ಮೊದಲ ಓವರ್ ಎಸೆದು ಮೊದಲ ಎಸೆತದಲ್ಲೇ ಸಾಯಿ ಸುದರ್ಶನ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಬರವನ್ನು ಕೊನೆಗೊಳಿಸಿದರು. ನಂತರ ಹಾರ್ದಿಕ್ ಪಾಂಡ್ಯ ಮುಂದಿನ ಓವರ್‌ನಲ್ಲಿ ಜೋಸ್ ಬಟ್ಲರ್ ಅವರ ವಿಕೆಟ್ ಪಡೆದರು. ಈ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಶ್ವನಿ ಕುಮಾರ್ (4/24), ಗುಜರಾತ್ ನಾಯಕ ಶುಭಮನ್ ಗಿಲ್ (14) ಅವರ ವಿಕೆಟ್ ಉರುಳಿಸಿದರು. ಅಲ್ಲಿಂದ ಗುಜರಾತ್‌ನ ಸೋಲು ಖಚಿತವಾಯಿತು.

GT vs MI: ಮೊದಲ ಎಸೆತದಲ್ಲೇ ವಿಕೆಟ್; ಕೊನೆಗೂ ವಿಕೆಟ್ ಬರ ನೀಗಿಸಿಕೊಂಡ ಬುಮ್ರಾ

ಅಶ್ವನಿಗೆ 4 ವಿಕೆಟ್

ನಂತರ ಮಿಚೆಲ್ ಸ್ಯಾಂಟ್ನರ್ ಒಂದೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ (26) ಮತ್ತು ಗ್ಲೆನ್ ಫಿಲಿಪ್ಸ್ (6) ಅವರನ್ನು ಔಟ್ ಮಾಡುವ ಮೂಲಕ ಉಳಿದ ಭರವಸೆಯನ್ನು ನಾಶಪಡಿಸಿದರು. ನಂತರ ದಾಳಿಗಿಳಿದ ಅಶ್ವನಿ, ರಾಹುಲ್ ತೆವಾಟಿಯಾ, ಶಾರುಖ್ ಖಾನ್ ಮತ್ತು ರಶೀದ್ ಖಾನ್ ಅವರನ್ನು ಔಟ್ ಮಾಡಿದರು. ಸ್ಪಿನ್ನರ್ ಅಲ್ಲಾ ಗಜನ್‌ಫರ್ ಕೊನೆಯ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಅಂತಿಮವಾಗಿ ಗುಜರಾತ್ 15.5 ಓವರ್‌ಗಳಲ್ಲಿ ಕೇವಲ 100 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ, ಮುಂಬೈ ಅಹಮದಾಬಾದ್ ಪಿಚ್‌ನಲ್ಲಿ ಮೊದಲ ಬಾರಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿದ ದಾಖಲೆ ಬರೆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:14 pm, Mon, 20 April 26

Follow Us