
ಕ್ರೈಸ್ಟ್ಚರ್ಚ್ನಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ನ್ಯೂಝಿಲೆಂಡ್ ಎ ತಂಡಗಳ ನಡುವಣ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ದೇವದತ್ ಪಡಿಕ್ಕಲ್ ಹಾಗೂ ಧ್ರುವ್ ಜುರೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಎ ತಂಡದ ನಾಯಕ ರೈಸ್ ಮಾರಿಯು ಬೌಲಿಂಗ್ ಆಯ್ದುಕೊಂಡರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ (0) ನಾಲ್ಕು ಎಸೆತಗಳಲ್ಲೇ ಸೊನ್ನೆ ಸುತ್ತಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಸಾಯಿ ಸುದರ್ಶನ್ ಹಾಗೂ ದೇವದತ್ ಪಡಿಕ್ಕಲ್ 91 ರನ್ಗಳ ಜೊತೆಯಾಟದೊಂದಿಗೆ ಟೀಮ್ ಇಂಡಿಯಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಇದರ ನಡುವೆ 41 ರನ್ ಬಾರಿಸಿದ ಸಾಯಿ ಸುದರ್ಶನ್ ಜೆರ್ರೊಡ್ ಮೆಕೆ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಆ ಬಳಿಕ ಬಂದ ಯಶ್ ರಾಥೋಡ್ ಕೇವಲ 13 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಪಡಿಕ್ಕಲ್ ಜೊತೆಗೂಡಿದ ನಾಯಕ ಧ್ರುವ್ ಜುರೆಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಇತ್ತ 140 ಎಸೆತಗಳಲ್ಲಿ 80 ರನ್ ಬಾರಿಸಿ ಶತಕದತ್ತ ಹೆಜ್ಜೆ ಹಾಕಿದ್ದ ದೇವದತ್ ಪಡಿಕ್ಕಲ್ ಅವರನ್ನು ಕೊನೆಗೂ ಔಟ್ ಮಾಡುವಲ್ಲಿ ಫ್ರೇಸರ್ ಶೀಟ್ ಯಶಸ್ವಿಯಾದರು. ಪಡಿಕ್ಕಲ್ ಔಟಾದ ಬಳಿಕ ಬಂದ ಸ್ಮರಣ್ ರವಿಚಂದ್ರನ್ (0) ಮೊದಲ ಎಸೆತದಲ್ಲೇ ಡಕ್ ಔಟ್ ಆದರು.
ಇದಾಗ್ಯೂ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಧ್ರುವ್ ಜುರೆಲ್ ಅರ್ಧಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ಮೊತ್ತವನ್ನು 250ರ ಗಡಿದಾಟಿಸಿದರು. ಅದರಂತೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಎ ತಂಡವು 7 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿದೆ.
ಸದ್ಯ ಕ್ರೀಸ್ನಲ್ಲಿ ಧ್ರುವ್ ಜುರೆಲ್ (99) ಹಾಗೂ ಆಕಾಶ್ ದೀಪ್ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ದ್ವಿತೀಯ ದಿನದಾಟದಲ್ಲಿ ಇನಿಂಗ್ಸ್ ಮುಂದುವರೆಸಲಿದ್ದಾರೆ.
ನ್ಯೂಝಿಲೆಂಡ್ ಎ ಪ್ಲೇಯಿಂಗ್ 11: ರೈಸ್ ಮಾರಿಯು (ನಾಯಕ) , ಕರ್ಟಿಸ್ ಹೀಫಿ , ಟಿಮ್ ರಾಬಿನ್ಸನ್ , ಮ್ಯಾಥ್ಯೂ ಬಾಯ್ಲ್ ,
ಡೀನ್ ಫಾಕ್ಸ್‌ಕ್ರಾಫ್ಟ್ , ಮಿಚೆಲ್ ಹೇ (ವಿಕೆಟ್ ಕೀಪರ್ ), ಕ್ರಿಶ್ಚಿಯನ್ ಕ್ಲಾರ್ಕ್ , ಬ್ರೆಟ್ ರಾಂಡೆಲ್ , ಫ್ರೇಸರ್ ಶೀಟ್ , ಜೇಡೆನ್ ಲೆನಾಕ್ಸ್.
ಇದನ್ನೂ ಓದಿ: 6,6,6,6,6,6,6: ರಾಹುಲ್ ಸಿಡಿಲಬ್ಬರ, ಸ್ಫೋಟಕ ಅರ್ಧಶತಕ
ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ಯಶ್ ರಾಥೋಡ್ , ಧ್ರುವ್ ಜುರೆಲ್ (ನಾಯಕ) , ಸ್ಮರಣ್ ರವಿಚಂದ್ರನ್ , ವಾಷಿಂಗ್ಟನ್ ಸುಂದರ್ , ಮಾನವ್ ಸುತಾರ್ , ಆಕಾಶ್ ದೀಪ್ , ಮೊಹಮ್ಮದ್ ಸಿರಾಜ್ , ಮುಖೇಶ್ ಕುಮಾರ್.