Obed McCoy: ಟೀಮ್ ಇಂಡಿಯಾದ ಹೆಡಮುರಿ ಕಟ್ಟಿ ಹಲವು ದಾಖಲೆ ಬರೆದ ಮೆಕಾಯ್
Obed McCoy: ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 139 ರನ್ಗಳ ಟಾರ್ಗೆಟ್ ಅನ್ನು ವೆಸ್ಟ್ ಇಂಡೀಸ್ ತಂಡವು 19.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ 2ನೇ ಟಿ20 ಪಂದ್ಯದಲ್ಲಿ ನಿಕೋಲಸ್ ಪೂರನ್ ಪಡೆಯು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ವೇಗಿ ಒಬೆಡ್ ಮೆಕಾಯ್ (Obed McCoy). ಏಕೆಂದರೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಹೆಡಮುರಿ ಕಟ್ಟಿದ್ದೇ ಮೆಕಾಯ್. ಪಂದ್ಯದ ಮೊದಲ ಓವರ್ನ ಮೊದಲ ಎಸೆತದಲ್ಲೇ ನಾಯಕ ರೋಹಿತ್ ಶರ್ಮಾ (0) ವಿಕೆಟ್ ಪಡೆಯುವ ಮೂಲಕ ಮೆಕಾಯ್ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡಿದ್ದರು. ಇದರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಆಟಗಾರ ಸೂರ್ಯಕುಮಾರ್ ಯಾದವ್ (11) ವಿಕೆಟ್ ಪಡೆದು ಮತ್ತೊಂದು ಯಶಸ್ಸು ತಂದುಕೊಟ್ಟರು. ಇಬ್ಬರು ಆರಂಭಿಕರನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸುವ ವಿಂಡೀಸ್ಗೆ ಒಬೆಡ್ ಆರಂಭಿಕ ಯಶಸ್ಸು ತಂದುಕೊಟ್ಟಿದ್ದರು.
ಇದಾದ ಬಳಿಕ ಡೆತ್ ಓವರ್ ವೇಳೆ ಮರಳಿದ ಮೆಕಾಯ್ ರವೀಂದ್ರ ಜಡೇಜಾ (27), ಡೇಂಜರಸ್ ದಿನೇಶ್ ಕಾರ್ತಿಕ್ (7), ಅಶ್ವಿನ್ (10) ಹಾಗೂ ಭುವನೇಶ್ವರ್ ಕುಮಾರ್ ವಿಕೆಟ್ ಉರುಳಿಸಿ ಅಂತಿಮ ಓವರ್ಗಳ ವೇಳೆ ಮತ್ತೊಮ್ಮೆ ಆಘಾತ ನೀಡಿದರು. ಪರಿಣಾಮ ಟೀಮ್ ಇಂಡಿಯಾ 19.4 ಓವರ್ಗಳಲ್ಲಿ ಕೇವಲ 138 ರನ್ಗಳಿಗೆ ಆಲೌಟ್ ಆಯಿತು.
ಇತ್ತ ಒಬೆಡ್ ಮೆಕಾಯ್ 4 ಓವರ್ಗಳಲ್ಲಿ 1 ಮೇಡನ್ ಹಾಗೂ 17 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದರು. ವಿಶೇಷ ಎಂದರೆ ಈ ಮಾರಕ ಬೌಲಿಂಗ್ ಮೂಲಕ 25 ವರ್ಷದ ಒಬೆಡ್ ಮೆಕಾಯ್ ವಿಶೇಷ ದಾಖಲೆಯೊಂದನ್ನು ಕೂಡ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಇದು ವೆಸ್ಟ್ ಇಂಡೀಸ್ ಬೌಲರ್‌ನ ಅತ್ಯುತ್ತಮ ಪ್ರದರ್ಶನವಾಗಿದೆ. ಅದರಲ್ಲೂ ವಿಂಡೀಸ್ ಪರ ಟೀಮ್ ಇಂಡಿಯಾ ವಿರುದ್ದ ಟಿ20ಯಲ್ಲಿ 6 ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿರುದ್ದ ಅತ್ಯುತ್ತಮ ಬೌಲಿಂಗ್ ಮಾಡಿದ ದಾಖಲೆ ಇದೀಗ ಒಬೆಡ್ ಮೆಕಾಯ್ ಪಾಲಾಗಿದೆ. ಕೇವಲ 17 ರನ್ ನೀಡುವ ಮೂಲಕ 6 ವಿಕೆಟ್ ಕಬಳಿಸಿ ಮೆಕಾಯ್ ಭಾರತ ತಂಡದ ವಿರುದ್ದ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇದಕ್ಕೂ ಮುನ್ನ ಟಿ20 ಕ್ರಿಕೆಟ್ನಲ್ಲಿ ಭಾರತದ ವಿರುದ್ದ ಅತ್ಯುತ್ತಮ ಬೌಲಿಂಗ್ ಫಿಗರ್ ಹೊಂದಿದ್ದ ದಾಖಲೆ ಶ್ರೀಲಂಕಾದ ವನಿಂದು ಹರಸರಂಗ ಹೆಸರಿನಲ್ಲಿತ್ತು. ಹಸರಂಗ 9 ರನ್ ನೀಡಿ 4 ವಿಕೆಟ್ ಕಬಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 17 ರನ್ಗಳಿಗೆ 6 ವಿಕೆಟ್ ಕಬಳಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಭಾರತದ ವಿರುದ್ದದ ಅತ್ಯಂತ ಯಶಸ್ವಿ ಬೌಲರ್ ಎಂಬ ದಾಖಲೆಯನ್ನು ಒಬೆಡ್ ಮೆಕಾಯ್ ತಮ್ಮದಾಗಿಸಿಕೊಂಡಿದ್ದಾರೆ.
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ 6 ವಿಕೆಟ್ ಕಬಳಿಸಿದ 6ನೇ ಬೌಲರ್ ಎಂಬ ದಾಖಲೆಗೂ ಒಬೆಡ್ ಮೆಕಾಯ್ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಒಂದು ಪಂದ್ಯದ ಮೂಲಕ ವೆಸ್ಟ್ ಇಂಡೀಸ್ನ ಯುವ ವೇಗಿ ಹಲವು ದಾಖಲೆಗಳನ್ನು ನಿರ್ಮಿಸಿ ಮಿಂಚಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 139 ರನ್ಗಳ ಟಾರ್ಗೆಟ್ ಅನ್ನು ವೆಸ್ಟ್ ಇಂಡೀಸ್ ತಂಡವು 19.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇನ್ನು ಮೂರನೇ ಟಿ20 ಪಂದ್ಯವು ಮಂಗಳವಾರ (ಆಗಸ್ಟ್ 2) ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಮತ್ತೆ ಮೇಲುಗೈ ಸಾಧಿಸುವ ಇರಾದೆಯಲ್ಲಿದೆ.
Published On - 10:53 am, Tue, 2 August 22