IND vs WI 2nd T20: ಕೊನೆಯ ಓವರ್ನಲ್ಲಿ ನೋ ಬಾಲ್, ಫ್ರೀ ಹಿಟ್: ಗೆಲ್ಲುವ ಪಂದ್ಯದಲ್ಲಿ ಸೋತ ಭಾರತ
India vs West Indies: ಕೊನೆಯ ಓವರ್ನಲ್ಲಿ ವಿಂಡೀಸ್ ಗೆಲುವಿಗೆ 10 ರನ್ಗಳ ಅವಶ್ಯಕತೆಯಿತ್ತು. ಆದರೆ, ಆವೇಶ್ ಖಾನ್ ನೋ ಬಾಲ್, ಫ್ರೀ ಹಿಟ್ ನೀಡಿದ ಪರಿಣಾಮ ವಿಂಡೀಸ್ಗೆ ಜಯ ಒಲಿದುಬಂತು.
ಸ್ಯಾಂಟ್ ಕಿಟ್ಸ್ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ (India vs West Indies) ಸೋಲು ಕಂಡಿದೆ. ಈ ಮೂಲಕ ಟೀಮ್ ಇಂಡಿಯಾದ ಗೆಲುವಿನ ಓಟಕ್ಕೆ ವಿಂಡೀಸ್ ಬ್ರೇಕ್ ಹಾಕಿದೆ. ಏಕದಿನ ಸರಣಿಯಲ್ಲಿ ಮೂರು ಸೋಲು ಕಂಡು, ಮೊದಲ ಟಿ20 ಪಂದ್ಯದಲ್ಲೂ ಸೋಲುಂಡ ವಿಂಡೀಸ್ ಕೊನೆಗೂ ಜಯದ ನಗೆ ಬೀರಿದೆ. ಒಬೆಡ್ ಮೆಖಾಯ್ ಮಾರಕ ಬೌಲಿಂಗ್, ಬ್ರಾಂಡನ್ ಕಿಂಗ್ ಹಾಗೂ ಡೆವೋನ್ ಥೋಮಸ್ (Obed McCoy) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವಿಂಡೀಸ್ 5 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಬ್ಯಾಟಿಂಗ್ನಲ್ಲಿ ಭಾರತ ಸಂಪೂರ್ಣ ವೈಫಲ್ಯ ಅನುಭವಿಸಿದರೆ, ಬೌಲಿಂಗ್ನಲ್ಲೂ ಎಡವಿತು. ಅದರಲ್ಲೂ ವೇಗಿ ಆವೇಶ್ ಖಾನ್ (Avesh Khan) ಅಂತಿಮ ಓವರ್ನಲ್ಲಿ ಮಾಡಿದ ಎಡವಟ್ಟು ತಂಡದ ಸೋಲಿನಲ್ಲಿ ಮುಖ್ಯ ಪಾತ್ರವಹಿಸಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಇನ್ನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಸೂರ್ಯಕುಮಾರ್ ಯಾದವ್ (11) ಹಾಗೂ ಶ್ರೇಯಸ್ ಅಯ್ಯರ್ (10) ಈ ಬಾರಿ ಕೂಡ ತಂಡಕ್ಕೆ ನೆರವಾಗಲಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಕೊಂಚ ರನ್ ಕಲೆಹಾಕಿದರು. ಹೀಗಾಗಿ ತಂಡದ ಮೊತ್ತ 100ರ ಗಡಿ ದಾಟಿತು.
ಪಂತ್ 12 ಎಸೆತಗಳಲ್ಲಿ 24 ರನ್ ಬಾರಿಸಿದರೆ, ಪಾಂಡ್ಯ 31 ಎಸೆತಗಳಲ್ಲಿ 31 ರನ್ ಗಳಿಸಿದರು. ಜಡೇಜಾ 31 ಎಸೆತಗಳಲ್ಲಿ 27 ರನ್ ಕೊಡುಗೆ ನೀಡಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ದಿನೇಶ್ ಕಾರ್ತಿಕ್ ಈ ಬಾರಿ ಕೇವಲ 7 ರನ್ಗೆ ಬ್ಯಾಟ್ ಕೆಳಗಿಟ್ಟರು. ಅಶ್ವಿನ್ 10 ರನ್ಗೆ ಸುಸ್ತಾದರು. ಅಂತಿಮವಾಗಿ ಭಾರತ 19.4 ಓವರ್ನಲ್ಲಿ 138 ರನ್ಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಪರ ಒಬೆಡ್ ಮೆಖಾಯ್ 4 ಓವರ್ ಬೌಲಿಂಗ್ ಮಾಡಿ 1 ಮೇಡನ್ ಸಹಿತ ಬರೋಬ್ಬರಿ 6 ವಿಕೆಟ್ ಕಿತ್ತು ಮಿಂಚಿದರು.
ಸುಲಭ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತು. ಖೈಲ್ ಮೇಯೆರ್ಸ್ 8, ನಾಯಕ ನಿಕೋಲಸ್ ಪೂರನ್ 14 ಹಾಗೂ ಶಿಮ್ರೋನ್ ಹೆಟ್ಮೇರ್ 6 ರನ್ಗೆ ಔಟಾದರರು. ಆದರೆ, ಇದರ ನಡುವೆ ಓಪನರ್ ಆಗಿ ಬಂದ ಬ್ರೆಂಡನ್ ಕಿಂಗ್ ಭರ್ಜರಿ ಬ್ಯಾಟಿಂಗ್ ನಡೆಸಿದರು. 52 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಿಡಿಸಿ 68 ರನ್ ಚಚ್ಚಿ ತಂಡಕ್ಕೆ ಗೆಲುವನ್ನು ಹತ್ತಿರ ಮಾಡಿ ನಿರ್ಗಮಿಸಿದರು.
ಕೊನೇ ಹಂತದಲ್ಲಿ ಡೆವೋನ್ ಥೋಮಸ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 19 ಎಸೆತಗಳಲ್ಲಿ 1 ಫೋರ್, 2 ಸಿಕ್ಸರ್ನೊಂದಿಗೆ ಅಜೇಯ 31 ರನ್ ಚಚ್ಚಿದರು. ಕೊನೆಯ ಓವರ್ನಲ್ಲಿ ವಿಂಡೀಸ್ ಗೆಲುವಿಗೆ 10 ರನ್ಗಳ ಅವಶ್ಯಕತೆಯಿತ್ತು. ಆದರೆ, ಆವೇಶ್ ಖಾನ್ ನೋ ಬಾಲ್, ಫ್ರೀ ಹಿಟ್ ನೀಡಿದ ಪರಿಣಾಮ ವಿಂಡೀಸ್ಗೆ ಜಯ ಒಲಿದುಬಂತು. 19.2 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಬಾರಿಸಿ 5 ವಿಕೆಟ್ಗಳಿಂದ ಗೆದ್ದಿತು. ಒಬೆಡ್ ಮೆಖಾಯ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
Published On - 8:14 am, Tue, 2 August 22