ಭಾರತದ ಅಹಂಕಾರವನ್ನ ಮುಗಿಸಿಬಿಡಿ: ಪಾಕ್ ಪಡೆಗೆ ಅಖ್ತರ್ ಖಡಕ್ ಸಂದೇಶ
Asia Cup 2025 Final, India vs Pakistan: ಭಾರತ ಮತ್ತು ಪಾಕಿಸ್ತಾನ್ ನಡುವಣ ಮತ್ತೊಂದು ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಈ ಬಾರಿ ವೇದಿಕೆ ರೂಪುಗೊಂಡಿರುವುದು ಏಷ್ಯಾಕಪ್ ಫೈನಲ್ನಲ್ಲಿ. ಅಂದರೆ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಏಷ್ಯಾಕಪ್ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿದೆ.

ಭಾರತ ಮತ್ತು ಪಾಕಿಸ್ತಾನ್ ನಡುವಣ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ನಾಳೆ (ಸೆ.28) ನಡೆಯಲಿರುವ ಏಷ್ಯಾಕಪ್ನ ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡವನ್ನು ಬಗ್ಗು ಬಡಿದು, ಅವರ ಅಹಂಕಾರವನ್ನು ಮುಗಿಸಬೇಕೆಂದು ಪಾಕಿಸ್ತಾನ್ ವೇಗಿ ಶೊಯೆಬ್ ಅಖ್ತರ್ ತಮ್ಮ ತಂಡಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಚಾನೆಲ್ ಚರ್ಚೆಯೊಂದರಲ್ಲಿ ಮಾತನಾಡಿದ ಶೊಯೆಬ್ ಅಖ್ತರ್, ಭಾನುವಾರ ಪಾಕಿಸ್ತಾನ್ ತಂಡ ಭಾರತದ ಅಹಂಕಾರವನ್ನು ಮುಗಿಸಬೇಕು. ಪಾಕಿಸ್ತಾನ್ ಕೂಡ ಅದೇ ಮನೋಭಾವದಿಂದ ಕಣಕ್ಕಿಳಿಯುವುದನ್ನು ಎದುರು ನೋಡುತ್ತೇನೆ. ನಿಮ್ಮೊಡನೆ ಆಡಿದ್ರೆ, ನೀವು ಏನು ಮಾಡಬಲ್ಲಿರಿ ಎಂಬುದನ್ನು ಭಾರತಕ್ಕೆ ತೋರಿಸಿ ಎಂದು ಶೊಯೆಬ್ ಅಖ್ತರ್ ಪಾಕಿಸ್ತಾನ್ ತಂಡವನ್ನು ಹುರಿದುಂಬಿಸಿದ್ದಾರೆ.
ಶೊಯೆಬ್ ಅಖ್ತರ್ ಹೀಗೆ ಹೇಳಲು ಮುಖ್ಯ ಕಾರಣ ಇತ್ತೀಚೆಗೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನೀಡಿದ ಹೇಳಿಕೆ. ಪಾಕಿಸ್ತಾನ್ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಕ್ ತಂಡವನ್ನು ಇನ್ಮುಂದೆ ನಮ್ಮ ಪ್ರಬಲ ಪ್ರತಿಸ್ಪರ್ಧಿ ಎಂದು ಬಿಂಬಿಸಬೇಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದ್ದರು.
ಭಾರತ ತಂಡವು ಪಾಕ್ ವಿರುದ್ಧ ಏಕಪಕ್ಷೀಯವಾಗಿ ಪಂದ್ಯ ಗೆಲ್ಲುತ್ತಿದೆ. ಇಲ್ಲಿ ಪ್ರತಿಸ್ಪರ್ಧೆ ಅಥವಾ ಪೈಪೋಟಿ ಎಂಬುದೇ ಇಲ್ಲ. ಪ್ರತಿ ಸಲ ಏಕಪಕ್ಷೀಯವಾಗಿ ನಾವೇ ಗೆಲ್ಲುತ್ತಿರುವಾಗ, ಪೈಪೋಟಿಯ ಮಾತೇ ಬರಲ್ಲ. ಹೀಗಾಗಿ ನೀವೆಲ್ಲರೂ ಈ ‘ಪೈಪೋಟಿ’ಯ ಬಗ್ಗೆ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಬೇಕು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದರು.
ಒಂದು ತಂಡವು ಪರಸ್ಪರ 15 ಅಥವಾ 20 ಪಂದ್ಯಗಳನ್ನು ಆಡಿದರೆ, ಅದರಲ್ಲಿ ಉಭಯ ತಂಡಗಳು ಸ್ 7-7 ಅಥವಾ 8-7 ಪಂದ್ಯಗಳನ್ನು ಗೆದ್ದರೆ ಮಾತ್ರ ಅದನ್ನು ಪೈಪೋಟಿ ಎಂದು ಕರೆಯಲಾಗುತ್ತದೆ. ಆದರೆ ನನ್ನ ಊಹೆ ಪ್ರಕಾರ ನಾವು ಪಾಕಿಸ್ತಾನ್ ವಿರುದ್ಧ 13-0, 10-1 ಅಂತರದಿಂದ ಮೇಲುಗೈ ಹೊಂದಿದ್ದೇವೆ.
ಹೀಗಾಗಿ ಭಾರತಕ್ಕೆ ಪಾಕಿಸ್ತಾನ್ ಸಾಟಿಯೇ ಅಲ್ಲ. ಇದೇ ಕಾರಣದಿಂದ ಇನ್ಮುಂದೆ ಉಭಯ ತಂಡಗಳ ಪಂದ್ಯವನ್ನು ಪೈಪೋಟಿ ಎಂದು ಬಿಂಬಿಸದಿರಿ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮನವಿ ಮಾಡಿದ್ದರು.
ಇದೀಗ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲುಣಿಸಿ, ಟೀಮ್ ಇಂಡಿಯಾದ ಈ ಅಹಂಕಾರವನ್ನು ಕೊನೆಗಾಣಿಸಬೇಕೆಂದು ಶೊಯೆಬ್ ಅಖ್ತರ್ ಆಗ್ರಹಿಸಿದ್ದಾರೆ.
ಇತ್ತ ಟೀಮ್ ಇಂಡಿಯಾ ಒಂದೇ ಟೂರ್ನಿಯಲ್ಲಿ ಪಾಕಿಸ್ತಾನ್ ಪಡೆಯನ್ನು ಮೂರು ಬಾರಿ ಸೋಲಿಸಿ, ಹ್ಯಾಟ್ರಿಕ್ ವಿಜಯದೊಂದಿಗೆ ಹೊಸ ಇತಿಹಾಸ ಬರೆಯುವ ತವಕದಲ್ಲಿದ್ದಾರೆ. ಹೀಗಾಗಿ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
