
PSL 2026: ಪಾಕಿಸ್ತಾನ್ ಸೂಪರ್ ಲೀಗ್ 2026ರ ಸೀಸನ್ ಮಧ್ಯೆಯೇ ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಯುವ ವೇಗದ ಬೌಲರ್ ಮೀರ್ ಹಂಝ ಸಜ್ಜಾದ್ ಅವರು ತರಬೇತಿ ಅವಧಿಯಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ತುರ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ (ಏಪ್ರಿಲ್ 7) ಕರಾಚಿಯ ಹನೀಫ್ ಮೊಹಮ್ಮದ್ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡದ ಅಭ್ಯಾಸ ನಡೆಯುತ್ತಿತ್ತು. ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದ ವೇಳೆ, ಸಹ ಆಟಗಾರ ಮಾರ್ಕ್ ಚಾಪ್ಮನ್ ಬಾರಿಸಿದ ಬಲವಾದ ಶಾಟ್ ನೇರವಾಗಿ ಮೀರ್ ಹಂಝ ಅವರ ತಲೆಯ ಹಿಂಭಾಗಕ್ಕೆ ಬಡಿಯಿತು. ಏಟಿನ ರಭಸಕ್ಕೆ ಹಂಝ ಮೈದಾನದಲ್ಲೇ ಕುಸಿದು ಬಿದ್ದರು ಮತ್ತು ಕೆಲಕಾಲ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ವರದಿಯಾಗಿದೆ.
ತಕ್ಷಣವೇ ಸ್ಥಳದಲ್ಲಿದ್ದ ವೈದ್ಯಕೀಯ ತಂಡ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ತಪಾಸಣೆಗಾಗಿ ಅವರನ್ನು ಕರಾಚಿಯ ಆಗಾ ಖಾನ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ರವಾನಿಸಲಾಯಿತು.
ಇತ್ತೀಚಿನ ವರದಿಗಳ ಪ್ರಕಾರ, ಮೀರ್ ಹಂಝ ಸಜ್ಜಾದ್ ಅವರ ಸ್ಥಿತಿ ಈಗ ಸ್ಥಿರವಾಗಿದೆ. ಅವರು ಪ್ರಜ್ಞೆ ಮರಳಿ ಪಡೆದಿದ್ದು, ವೈದ್ಯರೊಂದಿಗೆ ಮಾತನಾಡುತ್ತಿದ್ದಾರೆ. ಆದಾಗ್ಯೂ, ತಲೆಯ ಒಳಭಾಗದಲ್ಲಿ ಯಾವುದೇ ಗಂಭೀರ ಗಾಯಗಳಾಗಿವೆಯೇ ಎಂದು ಪರೀಕ್ಷಿಸಲು ವೈದ್ಯರು CT ಸ್ಕ್ಯಾನ್ ನಡೆಸಲು ನಿರ್ಧರಿಸಿದ್ದಾರೆ. ಪ್ರಸ್ತುತ ಅವರು ವೈದ್ಯರ ನಿಗಾದಲ್ಲಿದ್ದಾರೆ.
ಏಪ್ರಿಲ್ 9ರಂದು ಲಾಹೋರ್ ಖಲಂದರ್ಸ್ ವಿರುದ್ಧ ನಡೆಯಲಿರುವ ಪ್ರಮುಖ ಪಂದ್ಯಕ್ಕೆ ಮೀರ್ ಹಂಝ ಸಜ್ಜಾದ್ ಅಲಭ್ಯರಾಗುವ ಸಾಧ್ಯತೆಯಿದೆ.
ಹಂಝ ಅವರು ಈ ಬಾರಿಯ ಹರಾಜಿನಲ್ಲಿ 70 ಲಕ್ಷ ರೂಪಾಯಿಗೆ (PKR) ತಂಡ ಸೇರಿದ್ದರು. ಅವರ ಗಾಯದ ತೀವ್ರತೆಯನ್ನು ಅವಲಂಬಿಸಿ ಇಸ್ಲಾಮಾಬಾದ್ ಯುನೈಟೆಡ್ ತಂಡವು ಬದಲಿ ಆಟಗಾರನನ್ನು ಘೋಷಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ವಿರುದ್ಧ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?
ಇಸ್ಲಾಮಾಬಾದ್ ಯುನೈಟೆಡ್ ತಂಡವು ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಯುವ ಬೌಲರ್‌ನ ಈ ಅಪಘಾತವು ತಂಡದ ಆತಂಕಕ್ಕೆ ಕಾರಣವಾಗಿದೆ. ಅಭಿಮಾನಿಗಳು ಹಂಝ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.
Published On - 11:18 am, Wed, 8 April 26