VIDEO: ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡ್ತಿರುವ ಟೀಮ್ ಇಂಡಿಯಾ ಸ್ಟಾರ್ ಆಟಗಾರನ ತಂದೆ..!
Rinku Singh: ಟೀಮ್ ಇಂಡಿಯಾ ಪರ 15 ಟಿ20 ಪಂದ್ಯಗಳನ್ನಾಡಿರುವ ರಿಂಕು ಸಿಂಗ್ 356 ರನ್ ಕಲೆಹಾಕಿದ್ದಾರೆ. ಹಾಗೆಯೇ ಭಾರತದ ಪರ 2 ಏಕದಿನ ಪಂದ್ಯಗಳಿಂದ 55 ರನ್ ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಸ್ಟಾರ್ ಆಟಗಾರನಾಗಿ ರಿಂಕು ಸಿಂಗ್ ಮಿಂಚುತ್ತಿದ್ದಾರೆ.

ಏಪ್ರಿಲ್ 9, 2023…ಈ ದಿನವನ್ನು ಯಾರು ಮರೆತರೂ ಇಬ್ಬರು ಕ್ರಿಕೆಟಿಗರು ಮಾತ್ರ ತಮ್ಮ ಜೀವಮಾನದಲ್ಲಿ ಮರೆಯಲ್ಲ. ಅದರಲ್ಲಿ ಒಬ್ಬರು ಯಶ್ ದಯಾಳ್. ಮತ್ತೊಬ್ಬರು ರಿಂಕು ಸಿಂಗ್ (Rinku Singh). ದಯಾಳ್ ಪಾಲಿಗೆ ಕಾಡುವ ಕನಸಾಗಿ ಏಪ್ರಿಲ್ ಕಾಡಿದ್ರೆ, ರಿಂಕು ಪಾಲಿಗೆ ಅವಿಸ್ಮರಣೀಯ ದಿನ. ಏಕೆಂದರೆ ಗುಜರಾತ್ ಟೈಟಾನ್ಸ್ ಹಾಗೂ ಕೆಕೆಆರ್ ನಡುವಣ ಪಂದ್ಯದಲ್ಲಿ ಯಶ್ ದಯಾಳ್ ಅವರ ಕೊನೆಯ ಓವರ್ನಲ್ಲಿ ರಿಂಕು ಸಿಂಗ್ 5 ಭರ್ಜರಿ ಸಿಕ್ಸರ್ ಸಿಡಿಸಿ ಕೆಕೆಆರ್ ತಂಡಕ್ಕೆ ಕಷ್ಟಸಾಧ್ಯದ ಗೆಲುವು ತಂದುಕೊಟ್ಟಿದ್ದರು.
ಅಂದಿನಿಂದ ಮನೆಮಾತಾಗಿರುವ ರಿಂಕು ಸಿಂಗ್ ಟೀಮ್ ಇಂಡಿಯಾದ ಸ್ಟಾರ್ ಆಟಗಾರ. ಈಗಾಗಲೇ ಟಿ20 ಹಾಗೂ ಏಕದಿನ ತಂಡಗಳಲ್ಲಿ ಕಾಣಿಸಿಕೊಂಡಿರುವ ಯುವ ದಾಂಡಿಗ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಆದರೆ ಈ ಪ್ರತಿಭೆಯನ್ನು ಅನಾವರಣೊಗಳಿಸಲು ರಿಂಕು ಸವೆಸಿದ ಹಾದಿ ಸುಲಭವಾಗಿರಲಿಲ್ಲ.
ಉತ್ತರ ಪ್ರದೇಶ ಮೂಲದ ರಿಂಕು ಸಿಂಗ್ ಬಡ ಕುಟುಂಬದಿಂದ ಅರಳಿದ ಪ್ರತಿಭೆ. ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಇಂದು ಪ್ರಸಿದ್ಧಿ ಪಡೆದಿರುವ ಆಟಗಾರನಾಗಿ ಬೆಳೆದು ನಿಂತಿದ್ದಾರೆ. ಎಲ್‌ಪಿಜಿ ಗ್ಯಾಸ್ ವಿತಕರಾಗಿರುವ ಅವರ ತಂದೆಗೆ ಮಗನ ಕ್ರಿಕೆಟ್ ಅಭ್ಯಾಸಕ್ಕಾಗಿ ಹಣ ಹೊಂದಿಸುವುದೇ ದೊಡ್ಡ ಸವಾಲಾಗಿತ್ತು. ಇನ್ನು ಅಣ್ಣ ಆಟೋರಿಕ್ಷಾ ಚಾಲಕ. ಮತ್ತೋರ್ವ ಅಣ್ಣ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಬೆಂಬಲದ ಹೊರತಾಗಿಯೂ ರಿಂಕು ಸಿಂಗ್ ಆರ್ಥಿಕ ಸಂಕಷ್ಟದಿಂದ ಒದ್ದಾಡಿದ್ದರು.
ಇದನ್ನೂ ಓದಿ: ಸ್ಪೋಟಕ ಬ್ಯಾಟಿಂಗ್ ಮೂಲಕ ದಾಖಲೆ ಬರೆದ ರಿಂಕು ಸಿಂಗ್
ಇದೀಗ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ರಿಂಕು ಸಿಂಗ್ ಭಾರತದ ಸ್ಟಾರ್ ಕ್ರಿಕೆಟಿಗರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಪ್ರತಿ ಪಂದ್ಯಕ್ಕೆ ಲಕ್ಷಗಟ್ಟಲೇ ವೇತನವನ್ನೂ ಸಹ ಪಡೆಯುತ್ತಿದ್ದಾರೆ. ಈ ಮೂಲಕ ಆರ್ಥಿಕವಾಗಿಯೂ ಸಬಲರಾಗುತ್ತಿದ್ದಾರೆ. ಇದಾಗ್ಯೂ ಅವರ ತಂದೆ ತನ್ನ ಉದ್ಯೋಗವನ್ನು ತೊರೆದಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ರಿಂಕು ಸಿಂಗ್ ಅವರ ತಂದೆ ಖಾನ್ಚಂದ್ರ ಸಿಂಗ್ ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಈಗಲೂ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸುತ್ತಿದ್ದಾರೆ. ತ್ರಿಚಕ್ರ ವಾಹದಲ್ಲಿ ಅವರು ಗ್ಯಾಸ್ ಸಿಲಿಂಡರ್ ವಿತರಿಸುತ್ತಿರುವ ವಿಡಿಯೋವೊಂದನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ರಿಂಕು ಸಿಂಗ್ ಅವರ ತಂದೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಏಕೆಂದರೆ ಮಗನ ಉನ್ನತಿಯ ನಡುವೆ ತಾನು ನಂಬಿದ್ದ ಕೆಲಸವನ್ನು ಖಾನ್ಚಂದ್ರ ಸಿಂಗ್ ಈಗಲೂ ಮುಂದುವರೆಸುತ್ತಿರುವುದಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಐಶ್ವರ್ಯ ಬಂದಾಗ ನಡೆದು ಬಂದ ಹಾದಿಯನ್ನು ಮರೆಯಬಾರದು ಎಂಬುದಕ್ಕೆ ರಿಂಕು ಸಿಂಗ್ ಅವರ ತಂದೆ ಉತ್ತಮ ಉದಾಹರಣೆಯಾಗಿ ನಿಂತಿದ್ದಾರೆ.
