ತಿರಸ್ಕಾರದಿಂದ ಕಿರೀಟದವರೆಗೆ… ಈ ‘ಪಾಟಿ’ಯ ಯಶಸ್ಸು!
IPL 2026, Rajat Patidar: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ಬಾರಿ ಫೈನಲ್ಗೇರಿದೆ. ಮೊದಲ ಬಾರಿಗೆ 2009 ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಮೊದಲ ಬಾರಿಗೆ ಫೈನಲ್ ಆಡಿದ್ದ ಆರ್ಸಿಬಿ, ಅ ಬಳಿಕ 2011 ರಲ್ಲಿ ಡೇನಿಯಲ್ ವೆಟ್ಟೋರಿ ಮುಂದಾಳತ್ವದಲ್ಲಿ ಫೈನಲ್ ಮ್ಯಾಚ್ ಆಡಿತ್ತು. ಇದಾದ ಬಳಿಕ 2016 ರಲ್ಲಿ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಫೈನಲ್ಗೇರಿತ್ತು. ಇದಾಗ್ಯೂ ಮೂರು ಬಾರಿ ಕೂಡ ಆರ್ಸಿಬಿ ತಂಡಕ್ಕೆ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗಿರಲಿಲ್ಲ. ಆರ್ಸಿಬಿ ತಂಡದ ಈ ಸುದೀರ್ಘ ಕನಸನ್ನು ಕನಸು ಮಾಡಿದ ನಾಯಕನೇ ರಜತ್ ಪಾಟಿದಾರ್.

ಕ್ರೀಡಾ ಲೋಕದಲ್ಲಿ ಕೆಲವೊಂದು ಕರೆಗಳು ಇಡೀ ಚರಿತ್ರೆಯನ್ನೇ ಬದಲಿಸುತ್ತದೆ. ಹೀಗೆ ಚರಿತ್ರೆಯನ್ನೇ ಬದಲಿಸಿದ ಆಟಗಾರನೆಂದರೆ ರಜತ್ ಪಾಟಿದಾರ್ (Rajat Patidar). ಐಪಿಎಲ್ ಹರಾಜಿನಲ್ಲಿ ನಿರಂತರ ಅವಗಣನೆ, ಈ ಅವಗಣನೆ ನಡುವೆ ಹೊಸ ಬದುಕಿಗೆ ನಾಂದಿಯಾಡಲು ಸಜ್ಜಾಗುತ್ತಿದ್ದ ಆಟಗಾರನ ಭವಿಷ್ಯ ಬದಲಿಸಿದ್ದು ಒಂದು ಕರೆ. ಆ ಕರೆಯಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶಾಪ ವಿಮೋಚಣೆಯಾಗಿದ್ದು ಈಗ ಇತಿಹಾಸ.
ಅದು 2021ರ ಐಪಿಎಲ್ ಹರಾಜು… ಮಿನಿ ಹರಾಜಿನ ಕೊನೆಯ ಸುತ್ತಿನಲ್ಲಿ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ರಜತ್ ಪಾಟಿದಾರ್ ಅವರನ್ನು ಆರ್ಸಿಬಿ ಖರೀದಿಸಿತ್ತು. ಹೀಗೆ ಖರೀದಿಸಿದ ಆಟಗಾರನಿಗೆ 4 ಪಂದ್ಯಗಳಲ್ಲಿ ಅವಕಾಶ ನೀಡಲಾಯಿತು. ಈ ನಾಲ್ಕು ಮ್ಯಾಚ್ಗಳಲ್ಲಿ ರಜತ್ ಕಲೆಹಾಕಿದ್ದು ಕೇವಲ 71 ರನ್ಗಳು. ಹೀಗಾಗಿಯೇ ಐಪಿಎಲ್ 2022 ರ ಮೆಗಾ ಹರಾಜಿಗೂ ಮುನ್ನ ರಜತ್ ಪಾಟಿದಾರ್ ಅವರನ್ನು ತಂಡದಿಂದ ಕೈ ಬಿಡಲಾಯಿತು.
ಇದಾಗ್ಯೂ 2022 ರ ಮೆಗಾ ಹರಾಜಿಗಾಗಿ ರಜತ್ ಪಾಟಿದಾರ್ ಹೆಸರು ನೊಂದಾಯಿಸಿಕೊಂಡಿದ್ದರು. ಕೇವಲ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಆಟಗಾರನ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ.
ಐಪಿಎಲ್ನಲ್ಲಿ ಅವಕಾಶ ಕೈ ತಪ್ಪಿದ್ದರಿಂದ ಆ ಅವಧಿಯಲ್ಲಿ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಂಡರು. ಇನ್ನೇನು ಮದುವೆ ದಿನಾಂಕ ಫಿಕ್ಸ್ ಮಾಡಿ ಹೊಸ ಇನಿಂಗ್ಸ್ ಆರಂಭಿಸಬೇಕು ಅನ್ನುವಷ್ಟರಲ್ಲಿ ರಜತ್ ಪಾಟಿದಾರ್ಗೆ ಒಂದು ಕರೆ ಬಂದಿತ್ತು.
ಅದೃಷ್ಟ ಬದಲಿಸಿದ ಆ ಒಂದು ಫೋನ್ ಕರೆ:
ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಲವ್ನೀತ್ ಸಿಸೋಡಿಯಾ ಗಾಯಗೊಂಡರು. ಹೀಗೆ ಗಾಯಗೊಂಡ ಆಟಗಾರನ ಬದಲಿಯಾಗಿ ತಂಡವನ್ನು ಸೇರಿಕೊಳ್ಳುವಂತೆ ರಜತ್ ಪಾಟಿದಾರ್ಗೆ ಕರೆ ಮಾಡಲಾಯಿತು.
ಈ ಕರೆ ಸ್ವೀಕರಿಸಿದ ಬೆನ್ನಲ್ಲೇ ಮದುವೆಯನ್ನು ಮುಂದೂಡಿ ರಜತ್ ಪಾಟಿದಾರ್ ಆರ್ಸಿಬಿ ತಂಡವನ್ನು ಕೂಡಿಕೊಂಡರು. ಅಲ್ಲದೆ ಆ ಸೀಸನ್ನಲ್ಲಿ ರಜತ್ ಪಾಟಿದಾರ್ಗೆ 8 ಪಂದ್ಯಗಳಲ್ಲಿ ಕಣಕ್ಕಿಳಿಯಲು ಅವಕಾಶ ಸಿಕ್ಕಿತ್ತು.
ಈ ಅವಕಾಶಗಳನ್ನು ಬಳಸಿಕೊಂಡ ರಜತ್ ಪಾಟಿದಾರ್ 8 ಪಂದ್ಯಗಳಿಂದ ಕಲೆಹಾಕಿದ್ದು ಬರೋಬ್ಬರಿ 333 ರನ್ಗಳು. ಇದರಲ್ಲಿ ಒಂದು ಸಿಡಿಲಬ್ಬರದ ಶತಕ ಕೂಡ ಸೇರಿದೆ.
ಈ ಭರ್ಜರಿ ಪ್ರದರ್ಶನದೊಂದಿಗೆ ರಜತ್ ಪಾಟಿದಾರ್ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರಾಗುವುದು ಖಚಿತವಾಯಿತು.
ಬೆನ್ನತ್ತಿದ ದುರಾದೃಷ್ಟ:
ಐಪಿಎಲ್ ಮುಗಿದ ಬೆನ್ನಲ್ಲೇ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ ರಜತ್ ಪಾಟಿದಾರ್ ರಣಜಿ ಟೂರ್ನಿಯ ಫೈನಲ್ನಲ್ಲಿ ಭರ್ಜರಿ ಶತಕ ಸಿಡಿಸಿದರು. ಈ ಶತಕದೊಂದಿಗೆ ಮಧ್ಯಪ್ರದೇಶ ತಂಡಕ್ಕೆ ಚೊಚ್ಚಲ ರಣಜಿ ಟ್ರೋಫಿ ತಂದುಕೊಟ್ಟರು.
ಆದರೆ ಈ ಯಶಸ್ವಿನ ಬೆನ್ನಲ್ಲೇ ರಜತ್ ಪಾಟಿದಾರ್ ಗಂಭೀರವಾಗಿ ಗಾಯಗೊಂಡರು. ಪರಿಣಾಮ 2023 ರಲ್ಲಿ ಹಿಮ್ಮಡಿ ಗಾಯದ ಕಾರಣ ಐಪಿಎಲ್‌ನಿಂದ ಹೊರಗುಳಿಯಬೇಕಾಯಿತು.
ಕಂಬ್ಯಾಕ್ ಮಾಡಿದ ಪಾಟಿದಾರ್:
ಹಿಮ್ಮಡಿ ಗಾಯದ ಕಾರಣ ಕೆಲ ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿದಿದ್ದ ರಜತ್ ಪಾಟಿದಾರ್ 2024 ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ವೇಳೆ ಕಂಬ್ಯಾಕ್ ಮಾಡಿದರು. ಮಧ್ಯಪ್ರದೇಶ ತಂಡದ ನಾಯಕನಾಗಿ ಕಣಕ್ಕಿಳಿದ ಪಾಟಿದಾರ್ ಅತ್ಯುತ್ತಮ ಪ್ರದರ್ಶನ ನೀಡಿದರು. ಅಲ್ಲದೆ ಬಲಿಷ್ಠ ಮುಂಬೈ ತಂಡಕ್ಕೆ ಸೋಲುಣಿಸಿ ಮಧ್ಯಪ್ರದೇಶ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ರಜತ್ ಪಾಟಿದಾರ್ ಯಶಸ್ವಿಯಾದರು.
ಅಲ್ಲದೆ ಐಪಿಎಲ್ 2024 ರಲ್ಲಿ ಆರ್ಸಿಬಿ ಪರ 15 ಪಂದ್ಯಗಳನ್ನಾಡಿದ ರಜತ್ ಪಾಟಿದಾರ್ 5 ಅರ್ಧಶತಕಗಳೊಂದಿಗೆ 395 ರನ್ ಕಲೆಹಾಕಿ ಮಿಂಚಿದರು. ಇದರ ನಡುವೆ ರಜತ್ನಲ್ಲಿರುವ ನಾಯಕತ್ವದ ಗುಣಗಳನ್ನು ಆರ್ಸಿಬಿ ತಂಡದ ಕೋಚ್ ಆ್ಯಂಡಿ ಫ್ಲವರ್ ಗುರುತಿಸಿದ್ದರು.
ಪಾಟಿದಾರ್ಗೆ ಕ್ಯಾಪ್ಟನ್ ಪಟ್ಟ:
ಐಪಿಎಲ್ 2025ರ ಆರಂಭಕ್ಕೂ ಮುನ್ನ ಆರ್ಸಿಬಿ ಮ್ಯಾನೇಜ್ಮೆಂಟ್ ಹೊಸ ನಾಯಕನನ್ನು ಕಣಕ್ಕಿಳಿಸಲು ನಿರ್ಧರಿಸಿತು. ಇತ್ತ ನಾಯಕನ ಹುಡುಕಾಟದಲ್ಲಿದ್ದ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಆ್ಯಂಡಿ ಫ್ಲವರ್ ರಜತ್ ಪಾಟಿದಾರ್ ಅವರ ಹೆಸರನ್ನು ಶಿಫಾರಸ್ಸು ಮಾಡಿದರು.
ಅತ್ತ ಅದಾಗಲೇ ರಣಜಿ ಟೂರ್ನಿ ಹಾಗೂ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಮಧ್ಯ ಪ್ರದೇಶ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರಜತ್ಗೆ ನಾಯಕತ್ವ ನೀಡುವುದು ಉತ್ತಮ ಎಂಬ ಅಭಿಪ್ರಾಯವನ್ನು ಆರ್ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಕೂಡ ಮುಂದಿಟ್ಟರು. ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆಯಾದರು.
ಆರ್ಸಿಬಿಯ ಶಾಪ ವಿಮೋಚನೆ:
ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಬೆನ್ನೇರಿ ಬಂದ ರಜತ್ ಪಾಟಿದಾರ್ ಮುಂದಿದದ್ದು ಒಂದೇ ಗುರಿ… ಅದು ಆರ್ಸಿಬಿ ತಂಡಕ್ಕೆ ಚಾಂಪಿಯನ್ ಪಟ್ಟ. ವಿರಾಟ್ ಕೊಹ್ಲಿಗೆ ಮೊದಲ ಟ್ರೋಫಿ.
ಈ ನಿರೀಕ್ಷೆಗಳು ಹುಸಿಯಾಗಲಿಲ್ಲ. ಐಪಿಎಲ್ 2025 ರಲ್ಲಿ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ರಜತ್ ಪಾಟಿದಾರ್ ಟ್ರೋಫಿ ಎತ್ತಿ ಹಿಡಿದರು. ಈ ಮೂಲಕ ಆರ್ಸಿಬಿ ಅಭಿಮಾನಿಗಳ 18 ವರ್ಷಗಳ ಕಾಯುವಿಕೆಗೆ ಮುಕ್ತಿ ನೀಡಿದರು.
ಇದೀಗ ಮತ್ತೊಮ್ಮೆ ಆರ್ಸಿಬಿ ಫೈನಲ್ಗೆ ಲಗ್ಗೆಯಿಟ್ಟಿದೆ. ಅದು ಕೂಡ ಬ್ಯಾಕ್ ಟು ಬ್ಯಾಕ್. ಅಂದರೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೀಸನ್ಗಳಲ್ಲಿ ಫೈನಲ್ಗೇರಿದೆ. ಹೀಗೆ ಆರ್ಸಿಬಿ ತಂಡವನ್ನು ಬ್ಯಾಕ್ ಟು ಬ್ಯಾಕ್ ಫೈನಲ್ಗೆ ಕೊಂಡೊಯ್ದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ.
ಇದನ್ನೂ ಓದಿ: CSK ದಾಖಲೆಯನ್ನೇ ಧೂಳೀಪಟ ಮಾಡಿದ RCB
ಈ ಹೆಗ್ಗಳಿಕೆಯೊಂದಿಗೆ ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಮ್ಮೆ ಚಾಂಪಿಯನ್ ಪಟ್ಟ ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ.





