AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Riyan Parag: ನಮ್ಮ ಸೋಲಿಗೆ ಇದೊಂದೇ ಕಾರಣ..!

IPL 2026 RR vs SRH: ಐಪಿಎಲ್​ನ 36ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​​ಗಳಲ್ಲಿ 228 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 18.3 ಓವರ್​ಗಳಲ್ಲಿ 229 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Riyan Parag: ನಮ್ಮ ಸೋಲಿಗೆ ಇದೊಂದೇ ಕಾರಣ..!
Riyan Parag
ಝಾಹಿರ್ ಯೂಸುಫ್
|

Updated on:Apr 26, 2026 | 1:18 PM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 36ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 228 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದರೂ ಈ ಗುರಿಯನ್ನು ಸನ್​ರೈಸರ್ಸ್ ಹೈದರಾಬಾದ್ ಸುಲಭವಾಗಿ ಚೇಸ್ ಮಾಡಿತು. ಪರಿಣಾಮ ಆರ್​ಆರ್​ ಪಡೆ 5 ವಿಕೆಟ್​ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.

ಈ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ನಮ್ಮ ಪ್ರದರ್ಶನ ಚೆನ್ನಾಗಿತ್ತು, ಆದರೆ ನಾವು ಅನೇಕ ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ಅಭಿಷೇಕ್ ಶರ್ಮಾ ಅವರಂತಹ ಗುಣಮಟ್ಟದ ಆಟಗಾರರಿಗೆ ನೀವು ಎರಡನೇ ಅವಕಾಶ ನೀಡಿದರೆ ಅವರು ಪಂದ್ಯವನ್ನು ನಮ್ಮಿಂದ ಕಸಿದುಕೊಳ್ಳುತ್ತಾರೆ.  ಮುಂದಿನ ಪಂದ್ಯಗಳಲ್ಲಿ ನಾವು ಫೀಲ್ಡಿಂಗ್‌ನಲ್ಲಿ ಹೆಚ್ಚು ಶಿಸ್ತು ಪ್ರದರ್ಶಿಸಬೇಕಿದೆ.

ನಮ್ಮ ಸೋಲಿಗೆ ಕಳಪೆ ಫೀಲ್ಡಿಂಗ್​ ಒಂದೇ ಕಾರಣ. ಈ ತಪ್ಪುಗಳನ್ನು ಸರಿ ಪಡಿಸಿಕೊಳ್ಳದಿದ್ದರೆ ಮ್ಯಾಚ್ ಗೆಲ್ಲಲು ಸಾಧ್ಯವಿಲ್ಲ.  ತಂಡದ ಫೀಲ್ಡಿಂಗ್ ತರಬೇತುದಾರ ಟ್ರೆವರ್ ಪೆನ್ನಿ ಮುಂದಿನ ಅಭ್ಯಾಸ ಅವಧಿಯಲ್ಲಿ ಆಟಗಾರರಿಗೆ ಕಠಿಣ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ರಿಯಾನ್ ಪರಾಗ್ ಮಾರ್ಮಿಕವಾಗಿ ನುಡಿದಿದ್ದಾರೆ.

ಇನ್ನು ರಾಜಸ್ಥಾನ್ ರಾಯಲ್ಸ್  ತಂಡವು 228 ರನ್ ಗಳಿಸಿದರೂ, ಅದು ಗೆಲುವಿಗೆ ಸಾಲದು ಎಂಬುದು ಗೊತ್ತಿತ್ತು.  ನಾವು ಕನಿಷ್ಠ 10-15 ರನ್ ಕಡಿಮೆ ಗಳಿಸಿದ್ದೆವು. ಎಸ್‌ಆರ್‌ಹೆಚ್ ಬೌಲರ್‌ಗಳು 18 ಮತ್ತು 19ನೇ ಓವರ್‌ಗಳಲ್ಲಿ ಅದ್ಭುತವಾಗಿ ಯಾರ್ಕರ್ ಎಸೆದರು. ಅಲ್ಲಿ ನಾವು ರನ್ ಗಳಿಸಲು ಕಷ್ಟಪಟ್ಟೆವು. ಒಂದು ವೇಳೆ ಸ್ಕೋರ್ 240 ದಾಟಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು ಎಂದು ಪರಾಗ್ ಅಭಿಪ್ರಾಯಪಟ್ಟಿದ್ದಾರೆ.

ಬೌಲಿಂಗ್ ಬದಲಾವಣೆ ಮತ್ತು ಸ್ಪಿನ್ನರ್‌ಗಳ ಬಳಕೆ:

ರವಿ ಬಿಷ್ಣೋಯ್ ಅವರನ್ನು ತಡವಾಗಿ ಬೌಲಿಂಗ್‌ಗೆ ತಂದ ಬಗ್ಗೆ ಸ್ಪಷ್ಟನೆ ನೀಡಿದ ರಿಯಾನ್ ಪರಾಗ್, ಕ್ರೀಸ್‌ನಲ್ಲಿ ಎಡಗೈ ಬ್ಯಾಟರ್‌ಗಳಿದ್ದ ಕಾರಣ ನಾನು ಮತ್ತು ಡೊನೊವನ್ ಫೆರೇರಾ ವಿಕೆಟ್ ಪಡೆಯುವ ಪ್ರಯತ್ನ ಮಾಡಿದೆವು. ಅಲ್ಲದೆ ಪಿಚ್​ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿರಲಿಲ್ಲ. ವೇಗಿಗಳು ವಿಕೆಟ್ ಪಡೆಯಬೇಕಾದ ಮತ್ತು ಸ್ಪಿನ್ನರ್‌ಗಳು ರನ್ ನಿಯಂತ್ರಿಸಬೇಕಾದ ಅನಿವಾರ್ಯತೆ ಇತ್ತು. ಇದು ನಾವು ಅಂದುಕೊಂಡಂತೆ ನಡೆಯದಿದ್ದರೂ, ಸನ್ನಿವೇಶಕ್ಕೆ ತಕ್ಕಂತೆ ಆ ನಿರ್ಧಾರ ಸರಿಯಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

ಇದೇ ವೇಳೆ ವೇಗಿ ಜೋಫ್ರಾ ಆರ್ಚರ್ ಅವರ ಪ್ರದರ್ಶನವನ್ನು ಶ್ಲಾಘಿಸಿದ ಪರಾಗ್, “ಈ ಇಡೀ ಸೀಸನ್‌ನಲ್ಲಿ ಆರ್ಚರ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ.  ದುರದೃಷ್ಟವಶಾತ್ ಕೆಲವು ಟಾಪ್-ಎಡ್ಜ್‌ಗಳು ಫೀಲ್ಡರ್‌ಗಳಿಲ್ಲದ ಜಾಗದಲ್ಲಿ ಬಿದ್ದವು. ಇಲ್ಲದಿದ್ದರೆ ಅವರ ಅಂಕಿಅಂಶ ಇನ್ನು ಉತ್ತಮವಾಗಿರುತ್ತಿತ್ತು ಎಂದರು.

ಇದನ್ನೂ ಓದಿ:  RCB ತಂಡದ ಮುಂದಿನ ಪಂದ್ಯಕ್ಕೆ ಇಬ್ಬರು ಅಲಭ್ಯ?

ಮುಂದಿನ ಸವಾಲು:

ಪಂಜಾಬ್ ಕಿಂಗ್ಸ್ ವಿರುದ್ಧ ಚಂಡೀಗಢದಲ್ಲಿ ನಡೆಯಲಿರುವ ಮುಂದಿನ ಪಂದ್ಯದ ಬಗ್ಗೆ ಮಾತನಾಡುತ್ತಾ, ಪ್ರತಿ ಮೈದಾನವೂ ಹೊಸ ಸವಾಲುಗಳನ್ನು ನೀಡುತ್ತದೆ. ಚಂಡೀಗಢದ ಹೊಸ ಮಣ್ಣು ಮತ್ತು ಪಿಚ್ ಹೇಗಿರಲಿದೆ ಎಂದು ನಮಗೆ ತಿಳಿದಿಲ್ಲ. ಈ ಸೋಲಿನಿಂದ ಪಾಠ ಕಲಿತು, ಮಾನಸಿಕವಾಗಿ ರಿಫ್ರೆಶ್ ಆಗಿ ಮುಂದಿನ ಪಂದ್ಯದಲ್ಲಿ ಪುಟಿದೇಳುತ್ತೇವೆ ಎಂದು ರಿಯಾನ್  ಪರಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Published On - 1:18 pm, Sun, 26 April 26

Follow Us