IPL 2025: ಮಹಿಳೆಯರಿಗೆ ಕಿರುಕುಳ; ಆರ್‌ಸಿಬಿ ಫ್ಯಾನ್ಸ್ ವಿರುದ್ಧ ರಾಬಿನ್ ಉತ್ತಪ್ಪ ಗಂಭೀರ ಆರೋಪ
RCB Fans' Behavior Criticized by Robin Uthappa: ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಆರ್‌ಸಿಬಿ ಅಭಿಮಾನಿಗಳ ಅಸಭ್ಯ ವರ್ತನೆ ಮತ್ತು ಸಿಎಸ್‌ಕೆ ತಂಡವನ್ನು ಟ್ರೋಲ್ ಮಾಡಿದ್ದಕ್ಕಾಗಿ ತೀವ್ರವಾಗಿ ಖಂಡಿಸಿದ್ದಾರೆ. ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಮಹಿಳೆಯರೊಂದಿಗೆ ಅನುಚಿತ ವರ್ತನೆ ಮತ್ತು ಆಟಗಾರರನ್ನು ಗೇಲಿ ಮಾಡುವುದು ಸೇರಿದಂತೆ ಹಲವು ಘಟನೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಈ ರೀತಿಯ ಅಭಿಮಾನಿಗಳ ವರ್ತನೆಯು ಕ್ರಿಕೆಟ್‌ಗೆ ಹಾನಿಕಾರಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉತ್ತಪ್ಪ ಅವರ ಟೀಕೆಯು ಐಪಿಎಲ್ ಅಭಿಮಾನಿಗಳ ನಡವಳಿಕೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ (Robin Uthappa) ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಎರಡು ತಂಡಗಳ ಪರವೂ ಆಡಿದ್ದಾರೆ. ಪ್ರಸ್ತುತ, ಅವರು ಲೀಗ್‌ನಲ್ಲಿ ಪಂದ್ಯಗಳ ವೀಕ್ಷಕ ವಿವರಣೆಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಐಪಿಎಲ್ 2025 (IPL 2025) ಮೇ 17 ರಂದು ಮತ್ತೆ ಪ್ರಾರಂಭವಾಗುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಉತ್ತಪ್ಪ ಆರ್‌ಸಿಬಿ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ಉತ್ತಪ್ಪ ಆರೋಪಿಸಿದ್ದಾರೆ. ಇದಲ್ಲದೆ, ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಅದರ ಆಟಗಾರರನ್ನು ಟ್ರೋಲ್ ಮಾಡಿದ್ದಕ್ಕಾಗಿಯೂ ಆರ್‌ಸಿಬಿ ಫ್ಯಾನ್ಸ್ ವಿರುದ್ಧ ಉತ್ತಪ್ಪ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಉತ್ತಪ್ಪ ಹೇಳಿದ್ದೇನು?
ಚಿನ್ನವಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯದ ಬಗ್ಗೆ ರಾಬಿನ್ ಉತ್ತಪ್ಪ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಪಂದ್ಯಕ್ಕೆ ಸಂಬಂಧಿಸಿದಂತೆ ಅವರು, ‘ಆರ್‌ಸಿಬಿ ಅಭಿಮಾನಿಗಳು ಪಂದ್ಯಕ್ಕೂ ಮುನ್ನ ಕಪ್ಪು ಪಟ್ಟೆಗಳಿರುವ ಬಿಳಿ ಟಿ-ಶರ್ಟ್‌ಗಳನ್ನು ಧರಿಸಿದ್ದರು. ಈ ಮೂಲಕ ಅವರು ಸಿಎಸ್‌ಕೆ ತಂಡದ ಎರಡು ವರ್ಷಗಳ ನಿಷೇಧವನ್ನು ಗೇಲಿ ಮಾಡುತ್ತಿದ್ದರು. ಅಭಿಮಾನಿಗಳ ಪೈಪೋಟಿ ಪಂದ್ಯವನ್ನು ಮೀರಿ ಹೋಗಿದೆ, ಇದು ಆತಂಕಕಾರಿ ಸಂಕೇತವಾಗಿದೆ. ಚೆನ್ನೈ ತಂಡದ ಸೋಲಿನ ನಂತರ, ಮಹಿಳಾ ಅಭಿಮಾನಿಗಳೊಂದಿಗೆ ಆರ್‌ಸಿಬಿ ಫ್ಯಾನ್ಸ್ ಅನುಚಿತವಾಗಿ ವರ್ತಿಸಿದ್ದು ನನಗೆ ತುಂಬಾ ಕೋಪ ತರಿಸಿತು.
ಮಹಿಳೆಯರಿಗೆ ಕಿರುಕುಳ
‘ಸಿಎಸ್‌ಕೆ ತಂಡದ ಬಸ್ ಹೊರಡುವಾಗ ಆರ್‌ಸಿಬಿ ಫ್ಯಾನ್ಸ್ ಕ್ರೀಡಾಂಗಣದ ಹೊರಗೆ ಸಿಎಸ್‌ಕೆ ಆಟಗಾರರನ್ನು ಗೇಲಿ ಮಾಡುತ್ತಿದ್ದರು. ಇದು ನಾನು ನೋಡಿದ ಒಂದು ವಿಷಯ, ನನಗೆ ಕೆಟ್ಟದೆನಿಸಿತು. ನಾನು ನೋಡಿದ ಇನ್ನೊಂದು ವಿಷಯವೆಂದರೆ ಅಭಿಮಾನಿಗಳು ಪರಸ್ಪರ ಜಗಳವಾಡುತ್ತಿದ್ದರು. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಾನು ನೋಡಿದೆ, ಅದು ತುಂಬಾ ತಪ್ಪೆಂದು ತೋರುತ್ತದೆ. ಕಳೆದ ವರ್ಷ ಚೆನ್ನೈನಲ್ಲಿಯೂ ನಾವು ಇದನ್ನು ನೋಡಿದ್ದೇವೆ. ಇದು ಸರಿಯಲ್ಲ’.
IPL 2025: ಜೈಲು ಜೆರ್ಸಿ ತೋರಿಸಿ ಸಿಎಸ್‌ಕೆ ತಂಡವನ್ನು ಸ್ವಾಗತಿಸಿದ ಆರ್‌ಸಿಬಿ ಫ್ಯಾನ್ಸ್; ವಿಡಿಯೋ ವೈರಲ್
ಆಟವನ್ನು ಮೀರಿ ಹೋಗುತ್ತಿದೆ
‘ಇದು ತುಂಬಾ ಗಂಭೀರ ವಿಷಯವಾಗಿದೆ. ಆರ್‌ಸಿಬಿ ಫ್ಯಾನ್ಸ್ ಜೈಲು ಜೆರ್ಸಿ ತೋರಿಸುತ್ತಿದ್ದರು, ಅದರಲ್ಲಿ ಸಿಎಸ್‌ಕೆ ತಂಡವನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿದೆ ಎಂದು ಬರೆಯಲಾಗಿತ್ತು. ಆ ಜೆರ್ಸಿ ಮೇಲೆ ಧೋನಿ ಅವರ ಜೆರ್ಸಿ ಸಂಖ್ಯೆಯನ್ನು ಮತ್ತು ಅದರ ಕೆಳಗೆ ಥಾಲಾ ಎಂದು ಬರೆದಿದ್ದರು, ಇದು ಧೋನಿ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದಾರೆ ಎಂದು ತೋರಿಸುತ್ತದೆ. ಇದು ಆಟವನ್ನು ಮೀರಿ ಹೋಗುತ್ತಿದೆ, ಇದು ನನ್ನನ್ನು ಚಿಂತೆಗೀಡು ಮಾಡಿದೆ ಎಂದು ಉತ್ತಪ್ಪ ಹೇಳಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Sat, 17 May 25
