ಐಪಿಎಲ್ ನಡುವೆ ರೋಹಿತ್ ಅಚ್ಚರಿಯ ನಿರ್ಧಾರ; ಹಿಟ್‌ಮ್ಯಾನ್ ಟೆಸ್ಟ್ ವೃತ್ತಿಜೀವನ ಅಂತ್ಯ?
Rohit Sharma's Test Future Uncertain: ರೋಹಿತ್ ಶರ್ಮಾ ಅವರು ಐಪಿಎಲ್ ನಂತರ ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್ ಸರಣಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಕಳಪೆ ಪ್ರದರ್ಶನ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಆಡುವುದು ಖಚಿತವಾಗಿದ್ದರೂ, ರೋಹಿತ್ ಅವರ ಸ್ಥಾನ ಅನಿಶ್ಚಿತವಾಗಿದೆ.

ಕಳೆದ 6 ತಿಂಗಳಲ್ಲಿ ರೋಹಿತ್ ಶರ್ಮಾ (Rohit Sharma) ಭಾರತ ಕ್ರಿಕೆಟ್ ತಂಡವನ್ನು ಎರಡು ಐಸಿಸಿ (ICC) ಟೂರ್ನಿಗಳಲ್ಲಿ ಚಾಂಪಿಯನ್ ಮಾಡಿದ್ದಾರೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಹಿಟ್‌ಮ್ಯಾನ್ ಯುಗ ಸದ್ಯಕ್ಕೆ ಅಂತ್ಯವಾಗುವುದಿಲ್ಲ ಅಂದುಕೊಂಡಿದ್ದವರಿಗೆ ಅಚ್ಚರಿ ಎದುರಾಗಿದೆ. ಸದ್ಯ ಹೊರಬಿದ್ದಿರುವ ಮಾಹಿತಿಯ ಪ್ರಕಾರ, ಟೀಂ ಇಂಡಿಯಾದ ಮುಂದಿನ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಆಡುವುದಿಲ್ಲ ಎಂದು ವರದಿಯೊಂದು ಹೇಳುತ್ತಿದೆ. ಸ್ವತಃ ರೋಹಿತ್ ಅವರೇ ಈ ಸರಣಿಯಿಂದ ತಮ್ಮ ಹೆಸರನ್ನು ಹಿಂತಗೆದುಕೊಂಡಿದ್ದಾರೆ. ಇಂಡಿಯಾ ಟುಡೇಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಐಪಿಎಲ್ ನಂತರ, ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಮಾಡಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಆದರೆ ಈ ಸರಣಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ರೋಹಿತ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಯಾವುದು ದೃಢಪಟ್ಟಿಲ್ಲ
ರೋಹಿತ್ ಇಂಗ್ಲೆಂಡ್‌ಗೆ ಹೋಗುವುದಿಲ್ಲ ಎಂದು ವರದಿಗಳು ಹೇಳುತ್ತಿದ್ದರೂ, ಟಿವಿ9 ಕನ್ನಡ ಅದನ್ನು ದೃಢಪಡಿಸುವುದಿಲ್ಲ. ರೋಹಿತ್ ಪ್ರಕರಣದಲ್ಲಿ ಹಲವು ಹೇಳಿಕೆಗಳು ಈ ಹಿಂದೆಯೂ ಸಹ ತಪ್ಪು ಎಂದು ಸಾಬೀತಾಗಿದೆ. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ನಂತರ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾಗಬಹುದು ಎಂದು ಹೇಳಲಾಗುತ್ತಿತ್ತು ಆದರೆ ಅದು ಆಗಲಿಲ್ಲ. ಆದರೆ, ರೋಹಿತ್ ಇಂಗ್ಲೆಂಡ್‌ಗೆ ಹೋಗದಿರಲು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರ ಕಳಪೆ ಪ್ರದರ್ಶನವೇ ಕಾರಣ ಎಂದು ಹೇಳಲಾಗುತ್ತಿದೆ.
ರೋಹಿತ್ ಡೌಟ್, ಕೊಹ್ಲಿ ಫಿಕ್ಸ್
ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನದಿಂದ ಬೇಸತ್ತಿದ್ದ ರೋಹಿತ್, ಸಿಡ್ನಿ ಟೆಸ್ಟ್‌ನಿಂದ ಹೊರಗುಳಿದು ಜಸ್ಪ್ರೀತ್ ಬುಮ್ರಾ ಅವರಿಗೆ ತಂಡದ ನಾಯಕತ್ವ ವಹಿಸಿಕೊಟ್ಟಿದ್ದರು. ಹೀಗಾಗಿ ರೋಹಿತ್ ಟೆಸ್ಟ್ ಮಾದರಿಯಲ್ಲಿ ಆಡುವುದು ಅನುಮಾನವಾಗಿದೆ. ಆದರೆ ಕೊಹ್ಲಿ ಮಾತ್ರ ಟೆಸ್ಟ್ ತಂಡದಲ್ಲಿ ಆಡುವುದು ಖಚಿತವಾಗಿದೆ. ಆದಾಗ್ಯೂ, ಭಾರತದ ಇತ್ತೀಚಿನ ದೀರ್ಘ ಟೆಸ್ಟ್ ಸೀಸನ್‌ನಲ್ಲಿ ಕೊಹ್ಲಿ ಮತ್ತು ರೋಹಿತ್ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಕೊಹ್ಲಿ 19 ಇನ್ನಿಂಗ್ಸ್‌ಗಳಲ್ಲಿ ಕೇವಲ 22.47 ಸರಾಸರಿಯಲ್ಲಿ ಕೇವಲ 382 ರನ್ ಗಳಿಸಿದ್ದಾರೆ, ಇದರಲ್ಲಿ ಕೇವಲ ಒಂದು ಶತಕ ಮತ್ತು ಒಂದು ಅರ್ಧಶತಕ ಮಾತ್ರ ಅವರ ಹೆಸರಲ್ಲಿದೆ. ಅದೇ ಸಮಯದಲ್ಲಿ, ರೋಹಿತ್ ಶರ್ಮಾ 15 ಇನ್ನಿಂಗ್ಸ್‌ಗಳಲ್ಲಿ ಕೇವಲ 10.93 ರ ಸರಾಸರಿಯಲ್ಲಿ 164 ರನ್‌ಗಳನ್ನು ಗಳಿಸಿದ್ದು, ಅವರ ಬ್ಯಾಟ್‌ನಿಂದ ಕೇವಲ ಒಂದು ಅರ್ಧಶತಕ ಮಾತ್ರ ಸಿಡಿದಿದೆ.
IPL 2025: 18 ವರ್ಷಗಳಲ್ಲಿ 18ನೇ ಸೊನ್ನೆ; ಅಗ್ರಸ್ಥಾನಕ್ಕೇರಿದ ರೋಹಿತ್ ಶರ್ಮಾ; ವಿಡಿಯೋ
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸತತ ಸರಣಿ ಸೋಲಿನ ನಂತರ, ಟೆಸ್ಟ್ ತಂಡದಲ್ಲಿ ಇಬ್ಬರೂ ಸ್ಟಾರ್ ಬ್ಯಾಟ್ಸ್‌ಮನ್‌ಗಳ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದಾಗ್ಯೂ, ಇಂಗ್ಲೆಂಡ್‌ನಲ್ಲಿ ಆಡಿದ ಕೊಹ್ಲಿಯ ವ್ಯಾಪಕ ಅನುಭವವನ್ನು ಪರಿಗಣಿಸಿ, ತಂಡದ ಆಡಳಿತವು ಅವರಿಗೆ ಟೆಸ್ಟ್ ತಂಡದಲ್ಲಿ ಮತ್ತೊಂದು ಅವಕಾಶ ನೀಡುವ ಬಗ್ಗೆ ಯೋಚಿಸುತ್ತಿದೆ. ಭಾರತದ ಇಂಗ್ಲೆಂಡ್ ಪ್ರವಾಸ ಜೂನ್ 20 ರಿಂದ ಪ್ರಾರಂಭವಾಗಲಿದ್ದು, ಮೊದಲ ಟೆಸ್ಟ್ ಪಂದ್ಯ ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:04 pm, Thu, 27 March 25