IPL 2025: 17 ವರ್ಷಗಳ ಗೆಲುವಿನ ಬರವನ್ನು ನೀಗಿಸಿಕೊಳ್ಳುತ್ತಾ ಆರ್‌ಸಿಬಿ? ಬಲಾಬಲ ಹೇಗಿದೆ?
RCB vs CSK IPL 2025: 2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಮಹತ್ವದ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಚೆಪಾಕ್‌ನಲ್ಲಿ ಸಿಎಸ್‌ಕೆ ತಂಡದ 17 ವರ್ಷಗಳ ಪ್ರಾಬಲ್ಯವನ್ನು ಆರ್‌ಸಿಬಿ ಮುರಿಯಲು ಪ್ರಯತ್ನಿಸುತ್ತದೆ. ಸ್ಪಿನ್ನರ್‌ಗಳಿಗೆ ಅನುಕೂಲಕರವಾದ ಪಿಚ್‌ನಲ್ಲಿ ಉಭಯ ತಂಡದ ಬ್ಯಾಟ್ಸ್‌ಮನ್‌ಗಳು ಯಾವ ರೀತಿಯ ಪ್ರದರ್ಶನವನ್ನು ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

2025 ರ ಐಪಿಎಲ್‌ನಲ್ಲಿ (IPL 2025) ಎರಡು ಬಲಿಷ್ಠ ತಂಡಗಳು ಹೈವೋಲ್ಟೇಜ್ ಕಾಳಗಕ್ಕೆ ಸಜ್ಜಾಗಿವೆ. ಕಿಕ್ಕಿರಿದು ತುಂಬುವ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲು ಆರ್‌ಸಿಬಿ ಹಾಗೂ ಸಿಎಸ್‌ಕೆ (RCB vs CSK) ತಯಾರಿ ನಡೆಸಿವೆ. ಈ ಎರಡು ತಂಡಗಳ ಪಂದ್ಯ ಚೆನ್ನೈ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಆರ್‌ಸಿಬಿ ತನ್ನ 17 ವರ್ಷಗಳ ಗೆಲುವಿನ ಬರವನ್ನು ನೀಗಿಸಿಕೊಳ್ಳಲು ಪ್ರಯತ್ನಿಸಿದರೆ, ಇತ್ತ ಸಿಎಸ್‌ಕೆ ಕೂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಎದುರು ನೋಡುತ್ತಿದೆ. ವಾಸ್ತವವಾಗಿ ಆರ್‌ಸಿಬಿ ತಂಡವು ಇದುವರೆಗೆ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ತಂಡವನ್ನು ಒಮ್ಮೆ ಮಾತ್ರ ಸೋಲಿಸಿದೆ. 2008 ರಲ್ಲಿ ನಡೆದಿದ್ದ ಮೊದಲ ಐಪಿಎಲ್‌ನಲ್ಲಿ ಆರ್‌ಸಿಬಿ, ಸಿಎಸ್‌ಕೆ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸಿತ್ತು. ಅದನ್ನು ಹೊರತುಪಡಿಸಿ, ಆರ್ಸಿಬಿಗೆ ಚೆನ್ನೈ ನಲ್ಲಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಚೆಪಾಕ್ ಚೆನ್ನೈನ ಭದ್ರಕೋಟೆ
ಆರ್ಸಿಬಿಯ ಗೆಲುವಿನ ಕನಸನ್ನು ನನಸಾಗಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಚೆನ್ನೈ ತಂಡ ಯಾವಾಗಲೂ ತನ್ನ ತವರು ಮೈದಾನದಲ್ಲಿ ಮೇಲುಗೈ ಸಾಧಿಸಿದೆ. ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಸಾಕಷ್ಟು ಸಹಾಯ ಸಿಗುವ ಪಿಚ್‌ನಲ್ಲಿ ಸಿಎಸ್‌ಕೆ ತಂಡವನ್ನು ಮಣಿಸುವುದು ಸುಲಭದ ಮಾತಲ್ಲ. ಸಿಎಸ್‌ಕೆ ತಂಡದಲ್ಲಿ ರವೀಂದ್ರ ಜಡೇಜಾ ಅವರಂತಹ ಅನುಭವಿ ಬೌಲರ್‌ಗಳಿದ್ದು, ಕಳೆದ ವರ್ಷದ ಹರಾಜಿನಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಖರೀದಿಸಲಾಗಿದೆ. ಇವರೊಂದಿಗೆ ಅಫ್ಘಾನಿಸ್ತಾನದ ಎಡಗೈ ವೇಗಿ ನೂರ್ ಅಹ್ಮದ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು, ಈ ಮೂವರು ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು. ಈ ಸ್ಪಿನ್ನರ್‌ಗಳು ಮುಂಬೈ ವಿರುದ್ಧ 11 ಓವರ್‌ಗಳಲ್ಲಿ ಕೇವಲ 70 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು.
ಈ ಪಂದ್ಯದಲ್ಲೂ ಪಿಚ್ ಇದೇ ರೀತಿ ವರ್ತಿಸುವ ನಿರೀಕ್ಷೆಯಿದೆ. ಹೀಗಾಗಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು, ವಿಶೇಷವಾಗಿ ಕೊಹ್ಲಿ, ಅನುಭವಿ ಸಿಎಸ್‌ಕೆ ಬೌಲರ್‌ಗಳ ವಿರುದ್ಧ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಬೇಕಾಗುತ್ತದೆ. ಈ ಮೈದಾನದಲ್ಲಿ ಆಕ್ರಮಣಶೀಲತೆ ಮಾತ್ರ ಕೆಲಸ ಮಾಡುವುದಿಲ್ಲ, ಬದಲಿಗೆ ಸ್ಪಿನ್ನರ್‌ಗಳನ್ನು ಬುದ್ಧಿವಂತಿಕೆಯಿಂದ ಎದುರಿಸಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಕೊಹ್ಲಿ ಸ್ಪಿನ್ ವಿರುದ್ಧ ತಮ್ಮ ಆಟವನ್ನು ಬಹಳಷ್ಟು ಸುಧಾರಿಸಿಕೊಂಡಿದ್ದಾರೆ. ವಿಶೇಷವಾಗಿ ಸ್ವೀಪ್ ಮತ್ತು ಸ್ಲಾಗ್ ಸ್ವೀಪ್ ಹೊಡೆತಗಳ ಮೂಲಕ ಸ್ಪಿನ್ನರ್ ವಿರುದ್ಧ ರನ್ಗಳಿಸುವ ಕೊಹ್ಲಿ ಈ ಪಂದ್ಯದಲ್ಲೂ ಅದೇ ತಂತ್ರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ಭುವನೇಶ್ವರ್ ಕುಮಾರ್ ಆಡುತ್ತಾರಾ?
ಆದರೆ, ಕೊಹ್ಲಿ ಒಬ್ಬಂಟಿಯಾಗಿ ಸಿಎಸ್‌ಕೆ ತಂಡದ ಬೌಲಿಂಗ್ ಅನ್ನು ಸೋಲಿಸಲು ಸಾಧ್ಯವಿಲ್ಲ. ಅವರಿಗೆ ಫಿಲ್ ಸಾಲ್ಟ್, ನಾಯಕ ರಜತ್ ಪಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಿತೇಶ್ ಶರ್ಮಾ ಅವರಂತಹ ಬ್ಯಾಟ್ಸ್‌ಮನ್‌ಗಳಿಂದ ಸಂಪೂರ್ಣ ಬೆಂಬಲ ಬೇಕಾಗುತ್ತದೆ. ಪಿಚ್ ಅನ್ನು ಅವಲಂಬಿಸಿ, ಆರ್‌ಸಿಬಿ ತಂಡದ ಆಡಳಿತವು ಟಿಮ್ ಡೇವಿಡ್ ಬದಲಿಗೆ ಜಾಕೋಬ್ ಬೆಥಾಲ್ ಅವರನ್ನು ಆಡಿಸುವ ಬಗ್ಗೆಯೂ ಪರಿಗಣಿಸಬಹುದು. ಏಕೆಂದರೆ ಅವರು ಎಡಗೈ ಸ್ಪಿನ್ ಆಯ್ಕೆಯನ್ನು ಸಹ ನೀಡುತ್ತಾರೆ. ಅಲ್ಲದೆ, ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ ಗಾಯದ ಕಾರಣ ರಜೆ ತೆಗೆದುಕೊಂಡಿದ್ದ ಬೌಲರ್ ಭುವನೇಶ್ವರ್ ಕುಮಾರ್ ಅವರ ಫಿಟ್ನೆಸ್ ಮೇಲೆ ತಂಡ ನಿಗಾ ಇಡಲಿದೆ. ಅವರು ಫಿಟ್ ಆಗಿದ್ದರೆ, ರಸಿಕ್ ಸಲಾಂ ಅವರ ಬದಲು ಭುವಿ ಆಡಲಿದ್ದಾರೆ.
ಚೆನ್ನೈ ತಂಡದ ಮಧ್ಯಮ ಕ್ರಮಾಂಕ ಹೇಗಿದೆ?
ಮುಂಬೈ ವಿರುದ್ಧದ ಕಳೆದ ಪಂದ್ಯದಲ್ಲಿ ಶಿವಂ ದುಬೆ, ದೀಪಕ್ ಹೂಡಾ ಮತ್ತು ಸ್ಯಾಮ್ ಕರನ್ ಉತ್ತಮ ಪ್ರದರ್ಶನ ನೀಡದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಮಧ್ಯಮ ಕ್ರಮಾಂಕವನ್ನು ಮತ್ತೆ ಹಳಿಗೆ ತರಲು ಬಯಸುತ್ತದೆ. ರಚಿನ್ ರವೀಂದ್ರ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಅವರಿಗೆ ಹೆಚ್ಚಿನ ಬೆಂಬಲ ಸಿಗಬೇಕು. ಎಂಎಸ್ ಧೋನಿ ಮತ್ತೊಮ್ಮೆ ಶಾರ್ಟ್ ಇನ್ನಿಂಗ್ಸ್ ಆಡುವ ನಿರೀಕ್ಷೆಯಿದೆ. ಮುಂಬೈ ವಿರುದ್ಧ ಆಡದ ತಮ್ಮ ವೇಗದ ಬೌಲರ್ ಮಥಿಶಾ ಪತಿರಾನ ಅವರ ಫಿಟ್ನೆಸ್ ಮೇಲೆಯೂ ಸಿಎಸ್‌ಕೆ ಕಣ್ಣಿಡಲಿದೆ. ಅವರು ಫಿಟ್ ಆಗಿದ್ದರೆ, ನಾಥನ್ ಎಲ್ಲಿಸ್ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಗಬಹುದು.
IPL 2025: ಟಾಪ್ 10 ಕೋಟಿ ವೀರರ ಮೊದಲ ಪಂದ್ಯದ ಪ್ರದರ್ಶನ ಹೇಗಿತ್ತು? ವರದಿ ನೋಡಿ
ಉಭಯ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಎಂಎಸ್ ಧೋನಿ, ರವೀಂದ್ರ ಜಡೇಜ, ಶಿವಂ ದುಬೆ, ಮಥಿಶಾ ಪತಿರಾನ, ನೂರ್ ಅಹ್ಮದ್, ರವಿಚಂದ್ರನ್ ಅಶ್ವಿನ್, ಡೆವೊನ್ ಕಾನ್ವೇ, ಸೈಯದ್ ಖಲೀಲ್ ಅಹ್ಮದ್, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ಸ್ಯಾಮ್ ಕರನ್, ಶೇಖ್ ರಶೀದ್, ಅಂಶುಲ್ ಕಾಂಬೋಜ್, ಮುಖೇಶ್ ಚೌಧರಿ, ದೀಪಕ್ ಹೂಡಾ, ಗುರ್ಜನ್‌ಪ್ರೀತ್ ಸಿಂಗ್, ನಾಥನ್ ಎಲ್ಲಿಸ್, ಜೇಮೀ ಓವರ್ಟನ್, ಕಮಲೇಶ್ ನಾಗರ್ಕೋಟಿ, ರಾಮಕೃಷ್ಣನ್ ಘೋಷ್, ಶ್ರೇಯಸ್ ಗೋಪಾಲ್, ವಂಶ್ ಬೇಡಿ, ಆಂಡ್ರೆ ಸಿದ್ಧಾರ್ಥ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ಸಲಾಂ, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಾಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕಲ್, ಸ್ವಸ್ತಿಕ್ ಚಿಖರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ