IPL 2025: ಆರ್‌ಸಿಬಿ- ರಾಜಸ್ಥಾನ್ ಮುಖಾಮುಖಿ; ಹೇಗಿರಲಿದೆ ಪ್ಲೇಯಿಂಗ್ 11?
RCB vs RR: ಏಪ್ರಿಲ್ 24 ರಂದು ಬೆಂಗಳೂರಿನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ 42ನೇ ಐಪಿಎಲ್ ಪಂದ್ಯ ನಡೆಯಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ್, ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಹೆಣಗಾಡುತ್ತಿದೆ. ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿದ್ದು, ಗೆಲುವಿನತ್ತ ಸಾಗುತ್ತಿದೆ. ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ರಾಜಸ್ಥಾನ್ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಐಪಿಎಲ್ (IPL 2025) 18 ನೇ ಸೀಸನ್ನ 42ನೇ ಪಂದ್ಯವೂ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs RR) ತಂಡದ ನಡುವೆ ನಡೆಯಲಿದೆ. ಏಪ್ರಿಲ್ 24 ರಂದು ನಡೆಯಲಿರುವ ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಆಡಿರುವ 8 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದಿರುವ ರಾಜಸ್ಥಾನ್ಗೆ ಮುಂದಿನ ಪ್ರತಿಯೊಂದು ಪಂದ್ಯವೂ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ. ಏಕೆಂದರೆ ಕೇವಲ 4 ಅಂಕಗಳನ್ನು ಹೊಂದಿರುವ ರಾಜಸ್ಥಾನ್ ಪ್ಲೇಆಫ್ ತಲುಪಲು ಕನಿಷ್ಠ 16 ಅಂಕಗಳ ಅಗತ್ಯವಿದೆ. ಹೀಗಾಗಿ ಒಂದು ಪಂದ್ಯದಲ್ಲಿ ಸೋತರೂ ರಾಜಸ್ಥಾನ್ ಪ್ಲೇಆಫ್ ರೇಸ್‌ನಿಂದ ಹೊರಗುಳಿಯಲಿದೆ.
ಸಂಜು ಸ್ಯಾಮ್ಸನ್ ಅಲಭ್ಯ
ಈ ನಡುವೆ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ರಾಜಸ್ಥಾನ್ಗೆ ಸಂಜು ಸ್ಯಾಮ್ಸನ್ ಅಲಭ್ಯತೆ ಮತ್ತೊಂದು ಆಘಾತ ನೀಡಿದೆ. ಸಂಜು ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ. ಇದು ಮಾತ್ರವಲ್ಲದೆ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಕೆಲವು ಆಟಗಾರರನ್ನು ತಂಡದಿಂದ ಹೊರಗಿಟ್ಟು ಬೆಂಚ್ ಮೇಲೆ ಕುಳಿತಿರುವವರಿಗೆ ಈ ಪಂದ್ಯದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಹೀಗಾಗಿ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ್ ತಂಡದಲ್ಲಿ ಬದಲಾವಣೆಗಳಾಗುವುದು ಖಚಿತ.
ತಂಡದಲ್ಲಿ 1 ಬದಲಾವಣೆ
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಹೇಳುವುದಾದರೆ, ಆಡಿರುವ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು, 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ತನ್ನ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ವಿರುದ್ಧ ಏಳು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಅಂತಹ ಪರಿಸ್ಥಿತಿಯಲ್ಲಿ, ಆರ್‌ಸಿಬಿ ಅದೇ ಗೆಲುವಿನ ಸಂಯೋಜನೆಯೊಂದಿಗೆ ಕಣಕ್ಕಿಳಿಯುವುದು ಖಚಿತ. ಆದರೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆಯಿದೆ. ದುಬಾರಿ ತುಷಾರ್ ದೇಶಪಾಂಡೆ ಬದಲಿಗೆ ಆಕಾಶ್ ಮಧ್ವಾಲ್‌ಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
IPL 2025: ತವರಿನಲ್ಲಿ 4ನೇ ಪಂದ್ಯವನ್ನಾಡಲು ಆರ್‌ಸಿಬಿ ಸಜ್ಜು; ಪಂದ್ಯ ಯಾವಾಗ ಆರಂಭ?
ಉಭಯ ತಂಡಗಳು
ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ಶುಭಂ ದುಬೆ, ರಿಯಾನ್ ಪರಾಗ್ (ನಾಯಕ), ನಿತೀಶ್ ರಾಣಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ/ಆಕಾಶ್ ಮಧ್ವಾಲ್.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ