ದುಲೀಪ್ ಟ್ರೋಫಿಗೆ ಪಶ್ಚಿಮ ವಲಯ ತಂಡ ಪ್ರಕಟ
Duleep Trophy 2026: ದುಲೀಪ್ ಟ್ರೋಫಿ ಎಂಬುದು ದೇಶೀಯ ವಲಯ ಟೆಸ್ಟ್ ಟೂರ್ನಿ. 1961-62 ರಲ್ಲಿ ಶುರುವಾದ ಈ ಟೂರ್ನಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ 6 ತಂಡಗಳು, ಅಂದರೆ ಕೇಂದ್ರ ವಲಯ, ದಕ್ಷಿಣ ವಲಯ, ಪೂರ್ವ ವಲಯ, ಪಶ್ಚಿಮ ವಲಯ, ಉತ್ತರ ವಲಯ ಮತ್ತು ಈಶಾನ್ಯ ವಲಯ ತಂಡಗಳು ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

ದೇಶೀಯ ಟೆಸ್ಟ್ ಟೂರ್ನಿ ದುಲೀಪ್ ಟ್ರೋಫಿಗಾಗಿ ವೆಸ್ಟ್ ಝೋನ್ (ಪಶ್ಚಿಮ ವಲಯ) ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದು, ಉಪನಾಯಕನಾಗಿ ಮುಂಬೈನ ಎಡಗೈ ಸ್ಪಿನ್ ಆಲ್-ರೌಂಡರ್ ಶಮ್ಸ್ ಮುಲಾನಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ತಂಡದಲ್ಲಿ ಸರ್ಫರಾಝ್, ಪೃಥ್ವಿ ಶಾ, ಶಾರ್ದೂಲ್ ಠಾಕೂರ್ ಸೇರಿದಂತೆ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡಿದೆ.
ಪೃಥ್ವಿ ಶಾ ಕಂಬ್ಯಾಕ್, ಆಯುಷ್ ಔಟ್:
ಕಳೆದ ಸೀಸನ್‌ನಲ್ಲಿ ತಂಡದಿಂದ ಹೊರಗುಳಿದಿದ್ದ ಮುಂಬೈನ ಡ್ಯಾಶಿಂಗ್ ಓಪನರ್ ಪೃಥ್ವಿ ಶಾ, ರಣಜಿ ಟ್ರೋಫಿಯಲ್ಲಿ 537 ರನ್ ಗಳಿಸಿದ ಬಲದೊಂದಿಗೆ ವೆಸ್ಟ್ ಝೋನ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಭರ್ಜರಿ ಫಾರ್ಮ್‌ನಲ್ಲಿದ್ದ 19 ವರ್ಷದ ಯುವ ಪ್ರತಿಭೆ ಆಯುಷ್ ಮ್ಹಾತ್ರೆ ಅವರು ಮಣಿಕಟ್ಟಿನ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ.
ಗಾಯಕ್ವಾಡ್ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ?
ಮೂಲಗಳ ಪ್ರಕಾರ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ದೀರ್ಘಕಾಲೀನ ಗುರಿ ಹೊಂದಿರುವ ನಾಯಕ ರುತುರಾಜ್ ಗಾಯಕ್ವಾಡ್, ಈ ಬಾರಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಬದಲು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಭಾರತ ಟೆಸ್ಟ್ ತಂಡಕ್ಕೆ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಆಯ್ಕೆಯಾಗಲು ಪ್ಲ್ಯಾನ್ ರೂಪಿಸಿದ್ದಾರೆ.
ಇದನ್ನೂ ಓದಿ: ಏನಿದು ದುಲೀಪ್ ಟ್ರೋಫಿ?
ಬೆಂಗಳೂರಿನಲ್ಲಿ ಪಂದ್ಯಗಳು:
ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿಯು ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ಬೆಂಗಳೂರಿನ ಆಲೂರು ಹತ್ತಿರವಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಕ್ರೀಡಾಂಗಣದಲ್ಲಿ ನಡೆಯಲಿದೆ. ಆಗಸ್ಟ್ 23 ರಿಂದ 26 ರವರೆಗೆ ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಝೋನ್ ತಂಡವು ನಾರ್ತ್ ಝೋನ್ (ಉತ್ತರ ವಲಯ) ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ: ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ
ಪಶ್ಚಿಮ ವಲಯ ತಂಡ : ರುತುರಾಜ್ ಗಾಯಕ್‌ವಾಡ್ (ನಾಯಕ), ಶಮ್ಸ್ ಮುಲಾನಿ (ಉಪನಾಯಕ), ಶಾರ್ದೂಲ್ ಠಾಕೂರ್, ಸರ್ಫರಾಝ್ ಖಾನ್, ಮುಶೀರ್ ಖಾನ್, ತುಷಾರ್ ದೇಶಪಾಂಡೆ, ತನುಷ್ ಕೋಟ್ಯಾನ್, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್, ಜಯಮೀತ್ ಪಟೇಲ್, ಉರ್ವಿಲ್ ಪಟೇಲ್, ಸಿದ್ಧಾರ್ಥ್ ದೇಸಾಯಿ, ಅತಿತ್ ಶೇಠ್, ಪೃಥ್ವಿ ಶಾ, ಶಿವಾಲಿಕ್ ಶರ್ಮಾ, ಮುಖೇಶ್ ಚೌಧರಿ.
Published On - 9:54 am, Wed, 22 July 26




