T20 World Cup: ಬದಲಿ ತಂಡವಾಗಿ ಬಂದು ಈ ಆವೃತ್ತಿಯ ಮೊದಲ ದ್ವಿಶತಕ ಬಾರಿಸಿದ ಸ್ಕಾಟ್ಲೆಂಡ್
Scotland T20 World Cup 2026: ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ ಹಿಂದೆ ಸರಿದಿದ್ದರಿಂದ ಅನಿರೀಕ್ಷಿತವಾಗಿ ಅವಕಾಶ ಪಡೆದ ಸ್ಕಾಟ್ಲೆಂಡ್, ಸಿ ಗುಂಪಿನ ಮೊದಲ ಪಂದ್ಯದಲ್ಲಿ ಇಟಲಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಜಾರ್ಜ್ ಮುನ್ಸೆ (84) ಮತ್ತು ಬ್ರಾಂಡನ್ ಮೆಕ್‌ಮುಲ್ಲೆನ್ (ಅಜೇಯ 41) ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಸ್ಕಾಟ್ಲೆಂಡ್ 200ಕ್ಕೂ ಹೆಚ್ಚು ರನ್ ಗಳಿಸಿ, ಈ ಆವೃತ್ತಿಯ ಮೊದಲ 200+ ಸ್ಕೋರ್ ಮಾಡಿದ ತಂಡ ಎಂಬ ದಾಖಲೆ ನಿರ್ಮಿಸಿತು. ಇಟಲಿ ತಂಡವನ್ನು 134 ರನ್‌ಗಳಿಗೆ ಆಲೌಟ್ ಮಾಡಿ, ದೊಡ್ಡ ಅಂತರದಿಂದ ಪಂದ್ಯ ಗೆದ್ದಿತು.

2026 ರ ಟಿ20 ವಿಶ್ವಕಪ್ನ (T20 World Cup 2026) ಮೂರನೇ ದಿನದಾಟದ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ಇಟಲಿ (Scotland vs Italy) ತಂಡಗಳು ಮುಖಾಮುಖಿಯಾಗಿದ್ದವು. ಕ್ರಿಕೆಟ್ ಲೋಕದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಈ ಉಭಯ ತಂಡಗಳ ಕಾಳಗದ ಮೇಲೆ ಅಷ್ಟು ನಿರೀಕ್ಷೆಗಳಿರಲಿಲ್ಲ. ಆದರೆ ಇಟಲಿಗೆ ಹೋಲಿಸಿಕೊಂಡರೆ ಕೊಂಚ ಬಲಿಷ್ಠವಾಗಿ ಕಾಣುತ್ತಿದ್ದ ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ 20 ಓವರ್ಗಳಲ್ಲಿ ಬರೋಬ್ಬರಿ 207 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಟಲಿ 134 ರನ್‌ಗಳಿಗೆ ಆಲೌಟ್ ಆಗುವ ಮೂಲಕ 73 ರನ್ಗಳಿಂದ ಸೋಲೊಪ್ಪಿಕೊಂಡಿತು.
ಬದಲಿ ತಂಡವಾಗಿ ಬಂದ ಸ್ಕಾಟ್ಲೆಂಡ್
ವಾಸ್ತವವಾಗಿ ಈ ಬಾರಿಯ ಟಿ20 ವಿಶ್ವಕಪ್‌ಗೆ ಸ್ಕಾಟ್ಲೆಂಡ್ ತಂಡ ಅರ್ಹತೆ ಪಡೆದಿರಲಿಲ್ಲ. ಆದರೆ ಬಯಸದೆ ಬಂದ ಭಾಗ್ಯದಂತೆ ಬಾಂಗ್ಲಾದೇಶ ಟಿ20 ವಿಶ್ವಕಪ್ನಿಂದ ತನ್ನ ಹೆಸರನ್ನು ಹಿಂಪಡೆದುದರಿಂದ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್ನಲ್ಲಿ ಆಡುವ ಅವಕಾಶ ಸಿಕ್ಕಿತು. ಅದರಂತೆ ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಸ್ಕಾಟ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ಇಟಲಿ ತಂಡವನ್ನು ಎದುರಿಸಿತು.
ಸ್ಕಾಟ್ಲೆಂಡ್ಗೆ ಭರ್ಜರಿ ಆರಂಭ
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಟಲಿ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಸ್ಕಾಟ್ಲೆಂಡ್ ತಂಡಕ್ಕೆ ಉತ್ತಮ ಜೊತೆಯಾಟ ಸಿಕ್ಕಿತು. ಮೊದಲ ವಿಕೆಟ್ಗೆ ತಂಡ 126 ರನ್ಗಳ ಜೊತೆಯಾಟ ಕಂಡಿತು. ಆರಂಭಿಕರಾದ ಜಾರ್ಜ್ ಮುನ್ಸೆ ಮತ್ತು ಮೈಕೆಲ್ ಜೋನ್ಸ್ 14 ಓವರ್ಗಳ ಒಳಗೆ ತಂಡವನ್ನು 126 ರನ್‌ಗಳಿಗೆ ಕೊಂಡೊಯ್ದರು. ಈ ಹಂತದಲ್ಲಿ ಮುನ್ಸೆ 54 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 84 ರನ್ ಬಾರಿಸಿ ಔಟಾದರು. ಇದರೊಂದಿಗೆ ಇವರಿಬ್ಬರ ಜೊತೆಯಾಟವೂ ಮುರಿದುಬಿತ್ತು.
200 ರನ್ ದಾಟಿದ ಮೊದಲ ತಂಡ
ಆ ಬಳಿಕ ಜೋನ್ಸ್ ಜೊತೆಯಾದ ಬ್ರಾಂಡನ್ ಮೆಕ್‌ಮುಲ್ಲೆನ್ ಉತ್ತಮ ಜೊತೆಯಾಟ ಕಟ್ಟಿದರು. ಜೋನ್ಸ್ 37 ರನ್ ಬಾರಿಸಿ ಔಟಾದರೆ, ಮೆಕ್‌ಮುಲ್ಲೆನ್ ಕೇವಲ 18 ಎಸೆತಗಳಲ್ಲಿ 4 ಸಿಕ್ಸರ್ ಸಹಿತ ಅಜೇಯ 41 ರನ್ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಮೈಕೆಲ್ ಲೀಸ್ಕ್ 22 ರನ್ ಬಾರಿಸಿ ತಂಡವನ್ನು 200 ರನ್ಗಳ ಗಡಿ ದಾಟಿಸಿದರು. 200 ರನ್ಗಳ ಗಡಿ ದಾಟುವುದರೊಂದಿಗೆ ಸ್ಕಾಟ್ಲೆಂಡ್ ತಂಡ ಈ ಆವೃತ್ತಿಯಲ್ಲಿ 200 ಕ್ಕೂ ಅಧಿಕ ರನ್ ಕಲೆಹಾಕಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೆ 7 ಪಂದ್ಯಗಳು ನಡೆದಿದ್ದು, ಈ ಹಿಂದಿನ ಅತ್ಯಧಿಕ ಸ್ಕೋರ್ 184 ರನ್ ಆಗಿತ್ತು. ಅದು ನೇಪಾಳ ವಿರುದ್ಧ ಇಂಗ್ಲೆಂಡ್ ಕಲೆಹಾಕಿದ್ದ ಮೊತ್ತವಾಗಿತ್ತು.
T20 World Cup: ಟಿ20 ವಿಶ್ವಕಪ್ನಿಂದ 7 ಸ್ಟಾರ್ ಆಟಗಾರರು ಔಟ್
134 ರನ್‌ಗಳಿಗೆ ಇಟಲಿ ಆಲೌಟ್
ಇನ್ನು 207 ರನ್ಗಳ ಗುರಿ ಬೆನ್ನಟ್ಟಿದ ಇಟಲಿ ತಂಡದ ಅನಾನುಭವ ಎದ್ದು ಕಾಣಿಸುತ್ತಿತ್ತು. ಮೊದಲ ಎಸೆತದಲ್ಲೇ ತಂಡದ ಮೊದಲ ವಿಕೆಟ್ ಪತನವಾಯಿತು. ತಂಡದ ಪರ ಅರ್ಧಶತಕ ಬಾರಿಸಿ ಹೋರಾಟದ ಇನ್ನಿಂಗ್ಸ್ ಆಡಿದ ಬೆಂಜಮಿನ್ ಮಾನೆಂಟಿ 52 ರನ್ ಬಾರಿಸಿದರೆ, ಹ್ಯಾರಿ ಮಾನೆಂಟಿ 37 ರನ್ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಆಟದಿಂದ ಇಟಲಿ 100 ರನ್ಗಳ ಗಡಿ ದಾಟಿತು. ಅಂತಿಮವಾಗಿ 16.4 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಇಟಲಿ 134 ರನ್‌ಗಳಿಗೆ ಆಲೌಟ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
