AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ವಿರುದ್ಧದ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಖಡಕ್ ಸಂದೇಶ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಧರ್ಮಶಾಲಾದ ಹೆಚ್​ಪಿಸಿಎ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಪ್ಲೇಆಫ್​ಗೇರುವುದು ಖಚಿತ. ಇನ್ನು ಪ್ಲೇಆಫ್ ರೇಸ್​ನಲ್ಲಿ ಉಳಿಯಬೇಕಿದ್ದರೆ ಪಂಜಾಬ್ ಕಿಂಗ್ಸ್ ತಂಡಕ್ಕೂ ಗೆಲುವು ಅನಿವಾರ್ಯ.

RCB ವಿರುದ್ಧದ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಖಡಕ್ ಸಂದೇಶ!
Shreyas Iyer
ಝಾಹಿರ್ ಯೂಸುಫ್
|

Updated on:May 17, 2026 | 1:39 PM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಪ್ಲೇಆಫ್ ರೇಸ್ ರೋಚಕ ಹಂತ ತಲುಪಿದೆ. ಇಂದು ನಡೆಯಲಿರುವ ಐಪಿಎಲ್​ನ 61ನೇ ಪಂದ್ಯದಲ್ಲಿ ಎರಡು ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧಾರವಾಗಲಿದೆ. ಅಂದರೆ ಇಂದಿನ ಮ್ಯಾಚ್​ನಲ್ಲಿ ಆರ್​ಸಿಬಿ ಗೆದ್ದರೆ 18 ಅಂಕಗಳೊಂದಿಗೆ ಪ್ಲೇಆಫ್​ಗೇರುವುದು ಖಚಿತ. ಮತ್ತೊಂದೆಡೆ ಪ್ಲೇಆಫ್​ ರೇಸ್​ನಲ್ಲಿ ಉಳಿಯಬೇಕಿದ್ದರೆ ಪಂಜಾಬ್ ಕಿಂಗ್ಸ್ (PBKS) ಆರ್​ಸಿಬಿ ವಿರುದ್ಧ ಗೆಲ್ಲಲೇಬೇಕು. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶ್ರೇಯಸ್ ಅಯ್ಯರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ನೇರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋತು ಸತತ ಐದು ಪಂದ್ಯಗಳ ಸೋಲಿನ ಆಘಾತದಲ್ಲಿದ್ದರೂ, ಆರ್‌ಸಿಬಿ ವಿರುದ್ಧದ ಮುಂದಿನ ಪಂದ್ಯಕ್ಕೆ ತಮ್ಮ ತಂಡ ಸಂಪೂರ್ಣ ಸಿದ್ಧವಾಗಿದೆ ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

“ನಾವು ಆರ್‌ಸಿಬಿ ವಿರುದ್ಧ ಆಡಲು ಇನ್ನು ಕಾಯಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಿದ್ಧವಾಗಿಯೇ ಕಣಕ್ಕಿಳಿಯಲಿದ್ದೇವೆ. ಈ ಮ್ಯಾಚ್​ನಲ್ಲಿ ಗೆಲ್ಲಲೇಬೇಕು, ಗೆಲ್ಲುತ್ತೇವೆ” ಎಂದು ಹೇಳುವ ಮೂಲಕ ಶ್ರೇಯಸ್ ಅಯ್ಯರ್ ಪ್ಲೇಆಫ್ ಪ್ರವೇಶಿಸುವ ಅದಮ್ಯ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಅಝ್ಮತುಲ್ಲಾ ಒಮರ್ಜಾಯ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 200 ಪ್ಲಸ್ ರನ್ ಗಳಿಸಿದರೂ, ಬೌಲಿಂಗ್ ವೈಫಲ್ಯದಿಂದಾಗಿ ಮುಂಬೈ ಇಂಡಿಯನ್ಸ್​ ಎದುರು ಸೋಲೊಪ್ಪಿಕೊಂಡಿತು. ಈ ಸೋಲನ್ನು ಅರಗಿಸಿಕೊಳ್ಳುವುದು “ತುಂಬಾ ಕಷ್ಟ” ಎಂದು ಒಪ್ಪಿಕೊಂಡ ಶ್ರೇಯಸ್ ಅಯ್ಯರ್, ತಂಡದ ಮೇಲೆ ಒತ್ತಡ ಇರುವುದು ನಿಜ ಆದರೆ ಒತ್ತಡದ ಸಂದರ್ಭದಲ್ಲೇ ಶ್ರೇಷ್ಠ ಪ್ರದರ್ಶನ ಹೊರಬರಲಿದೆ ಎಂದಿದ್ದಾರೆ.

ಸದ್ಯ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 12 ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿ 4ನೇ ಸ್ಥಾನದಲ್ಲಿದೆ. ಆದರೆ ಸತತ 5 ಸೋಲುಗಳು ತಂಡದ ಆತ್ಮವಿಶ್ವಾಸಕ್ಕೆ ಧಕ್ಕೆ ತಂದಿವೆ.  ಪ್ರಸ್ತುತ ಸನ್ನಿವೇಶದಲ್ಲಿ ಪಂಜಾಬ್ ಕಿಂಗ್ಸ್​ ತಂಡ ನೇರವಾಗಿ ಪ್ಲೇಆಫ್ ತಲುಪಬೇಕಾದರೆ, ಮುಂದಿನ ಎರಡು ಪಂದ್ಯಗಳಲ್ಲಿ (RCB ಮತ್ತು LSG ವಿರುದ್ಧ) ಕಡ್ಡಾಯವಾಗಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ: RCB vs PBKS: ವೇಗಿಗಳದ್ದೇ ಸಾಮ್ರಾಜ್ಯ: ಆದರೂ ರನ್ ಮಳೆ ಗ್ಯಾರಂಟಿ!

ಮತ್ತೊಂದೆಡೆ, ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಪಂದ್ಯಗಳಿಂದ 16 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್ ಅರ್ಹತೆ ಪಡೆಯಲು ಆರ್‌ಸಿಬಿಗೆ ಕೇವಲ ಒಂದು ಜಯದ ಅಗತ್ಯವಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ.

ಸದ್ಯ ಶ್ರೇಯಸ್ ಅಯ್ಯರ್ ಅವರ ಈ ಆಕ್ರಮಣಕಾರಿ ಸಂದೇಶವು ಪಂಜಾಬ್ ತಂಡದಲ್ಲಿ ಇನ್ನೂ ಹೋರಾಟದ ಕಿಚ್ಚು ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ ಫಾರ್ಮ್‌ನಲ್ಲಿರುವ ಆರ್‌ಸಿಬಿಯನ್ನು ಧರ್ಮಶಾಲಾದಲ್ಲಿ ಮಣಿಸುವುದು ಪಂಜಾಬ್‌ ಕಿಂಗ್ಸ್ ತಂಡಕ್ಕೆ ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ಈ ಇಂದಿನ ಮ್ಯಾಚ್​ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು.

Published On - 1:38 pm, Sun, 17 May 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More