RCB vs PBKS: ವೇಗಿಗಳದ್ದೇ ಸಾಮ್ರಾಜ್ಯ: ಆದರೂ ರನ್ ಮಳೆ ಗ್ಯಾರಂಟಿ!
IPL 2026, Punjab Kings vs Royal Challengers Bengaluru: ಐಪಿಎಲ್ 2025ರ ಫೈನಲಿಸ್ಟ್ಗಳ ಮುಖಾಮುಖಿಗೆ ವೇದಿಕೆ ಸಿದ್ಧವಾಗಿದೆ. ಅದು ಸಹ ದೂರದ ಧರ್ಮಶಾಲಾದಲ್ಲಿ. ಅಂದರೆ ಪಂಜಾಬ್ ಕಿಂಗ್ಸ್ ತಂಡವು ತನ್ನ ತವರು ಮೈದಾನದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

IPL 2026: ಐಪಿಎಲ್ 2026 ರ 61 ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾದ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಮೈದಾನದಲ್ಲಿ ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು.
ಏಕೆಂದರೆ ಈ ಮ್ಯಾಚ್ನಲ್ಲಿ ಗೆದ್ದರೆ ಆರ್ಸಿಬಿ ತಂಡವು ತನ್ನ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲಿದೆ. ಅತ್ತ ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಮ್ಯಾಚ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆಲ್ಲುವುದು ಅನಿವಾರ್ಯ. ಹೀಗಾಗಿ ಈ ಮ್ಯಾಚ್ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಇನ್ನು ಧರ್ಮಶಾಲಾದ ಪಿಚ್ ಯಾರಿಗೆ ಹೆಚ್ಚು ಸಹಕಾರಿಯಾಗಲಿದೆ? ಇಲ್ಲಿನ ಸರಾಸರಿ ಸ್ಕೋರ್ ಎಷ್ಟು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿರಲಿದೆ…
ವೇಗದ ಬೌಲರ್‌ಗಳ ಸ್ವರ್ಗ:
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಮೈದಾನದ ಪಿಚ್ ಸಾಂಪ್ರದಾಯಿಕವಾಗಿ ವೇಗದ ಬೌಲರ್‌ಗಳಿಗೆ ಸ್ವರ್ಗ ಎನಿಸಿಕೊಂಡಿದೆ.
- ಸ್ವಿಂಗ್ ಮತ್ತು ಬೌನ್ಸ್: ಇಲ್ಲಿನ ಪಿಚ್‌ನಲ್ಲಿ ಹೊಸ ಚೆಂಡಿನಲ್ಲಿ ವೇಗಿಗಳಿಗೆ ಅತ್ಯುತ್ತಮ ಸೀಮ್, ಬೌನ್ಸ್ ಮತ್ತು ಸ್ವಿಂಗ್ ಲಭ್ಯವಾಗುತ್ತದೆ.
- ವೇಗಿಗಳ ದರ್ಬಾರ್: ಈ ಸೀಸನ್‌ನಲ್ಲಿ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ (PBKS Vs DC) ಒಂದೂ ಓವರ್ ಸ್ಪಿನ್ ಬೌಲಿಂಗ್ ಮಾಡಲಾಗಿರಲಿಲ್ಲ, ಎಲ್ಲಾ ಓವರ್‌ಗಳನ್ನು ವೇಗಿಗಳೇ ಎಸೆದಿದ್ದರು. ಎರಡನೇ ಪಂದ್ಯದಲ್ಲೂ ವೇಗಿಗಳದ್ದೇ ಮೇಲುಗೈ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಫಾಸ್ಟ್ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ.
ಬ್ಯಾಟರ್‌ಗಳಿಗೆ ಪರಾಕ್ರಮ:
ಇಲ್ಲಿನ ಪಿಚ್ ವೇಗಿಗಳಿಗೆ ಆರಂಭದಲ್ಲಿ ನೆರವು ನೀಡಿದರೂ, ಒಮ್ಮೆ ಕ್ರೀಸ್‌ನಲ್ಲಿ ಸೆಟ್ ಆದ ನಂತರ ಬ್ಯಾಟರ್‌ಗಳು ಇಲ್ಲಿ ಸುಲಭವಾಗಿ ರನ್ ಗಳಿಸಬಹುದು.
- ತೆಳು ಗಾಳಿಯ ಪ್ರಭಾವ: ಧರ್ಮಶಾಲಾ ಮೈದಾನವು ಸಮುದ್ರ ಮಟ್ಟದಿಂದ ಸುಮಾರು 1,457 ಮೀಟರ್ ಎತ್ತರದಲ್ಲಿದೆ. ಇಲ್ಲಿ ಗಾಳಿಯ ಸಾಂದ್ರತೆ ಕಡಿಮೆ ಇರುವುದರಿಂದ ಚೆಂಡು ಗಾಳಿಯಲ್ಲಿ ವೇಗವಾಗಿ ಚಲಿಸುತ್ತದೆ. ಇದರಿಂದಾಗಿ ಬ್ಯಾಟರ್‌ಗಳಿಗೆ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವುದು ತುಂಬಾ ಸುಲಭವಾಗುತ್ತದೆ.
- ಹೈ-ಸ್ಕೋರಿಂಗ್ ಪಂದ್ಯಗಳು: ಐಪಿಎಲ್ 2026 ರಲ್ಲಿ ಇಲ್ಲಿ ನಡೆದ ಎರಡೂ ಪಂದ್ಯಗಳು ಹೈ-ಸ್ಕೋರಿಂಗ್ ಆಗಿದ್ದು, ತಂಡಗಳು 200+ ರನ್‌ಗಳನ್ನು ಸುಲಭವಾಗಿ ದಾಟಿವೆ. ಈ ಮೈದಾನದಲ್ಲಿ ಸ್ಪರ್ಧಾತ್ಮಕ ಮೊತ್ತವೆಂದರೆ 190 ರಿಂದ 210 ರನ್.
ಇದನ್ನೂ ಓದಿ: ಕೊನೆಯ 10 ಪಂದ್ಯಗಳಲ್ಲಿ 8 ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧಾರ!
ಸ್ಪಿನ್ನರ್‌ಗಳಿಗೆ ಕಠಿಣ ಸವಾಲು:
ಧರ್ಮಶಾಲಾ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಯಾವುದೇ ರೀತಿಯ ಟರ್ನ್ ಅಥವಾ ಹೆಚ್ಚಿನ ನೆರವು ಸಿಗುವುದಿಲ್ಲ. ಸ್ಪಿನ್ನರ್‌ಗಳು ಇಲ್ಲಿ ವಿಕೆಟ್ ಪಡೆಯುವುದಕ್ಕಿಂತ ರನ್ ನಿಯಂತ್ರಿಸುವುದರ ಕಡೆಗೇ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಅವರು ತಮ್ಮ ಲೈನ್, ಲೆಂತ್ ಮತ್ತು ವೇಗದಲ್ಲಿ ವೈವಿಧ್ಯತೆ ತಂದರೆ ಮಾತ್ರ ರನ್ ಹರಿವಿಗೆ ಬ್ರೇಕ್ ಹಾಕಬಹುದು.
ಟಾಸ್ ಮತ್ತು ಚೇಸಿಂಗ್:
- ಮಧ್ಯಾಹ್ನದ ಪಂದ್ಯ: ಇಂದಿನ ಪಂದ್ಯವು ಮಧ್ಯಾಹ್ನ 3:30 ಕ್ಕೆ ಆರಂಭವಾಗುತ್ತಿರುವುದರಿಂದ ಇಬ್ಬನಿಯ ಯಾವುದೇ ಪ್ರಭಾವ ಇರುವುದಿಲ್ಲ.
- ಚೇಸಿಂಗ್ ಸುಲಭ: ಈ ಸೀಸನ್‌ನಲ್ಲಿ ಇಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ತಂಡಗಳೇ ಗೆಲುವು ಸಾಧಿಸಿವೆ.
- ಟಾಸ್ ಆಯ್ಕೆ: ಪಂದ್ಯ ಸಾಗಿದಂತೆ ಪಿಚ್ ಬ್ಯಾಟಿಂಗ್‌ಗೆ ಮತ್ತಷ್ಟು ಉತ್ತಮಗೊಳ್ಳುವುದರಿಂದ, ಟಾಸ್ ಗೆಲ್ಲುವ ನಾಯಕ ಮೊದಲು ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚು.
Published On - 11:47 am, Sun, 17 May 26





