IND vs SA: ಆಫ್ರಿಕಾ ಆಟಗಾರರ ಕೋವಿಡ್ ಟೆಸ್ಟ್ನಲ್ಲಿ ನೆಗೆಟಿವ್: ಫಿರೋಜ್ ಷಾ ಕೋಟ್ಲಾದಲ್ಲಿ ಭರ್ಜರಿ ಅಭ್ಯಾಸ
India vs South Africa T20I Series: ಈಗಾಗಲೇ ಆಫ್ರಿಕಾ ಆಟಗಾರರು ಭಾರತಕ್ಕೆ ಬಂದಿಳಿದಿದ್ದು ಭರ್ಜರಿ ತಯಾರಿಯಲ್ಲಿ ನಿರತರಾಗಿದ್ದಾರೆ. ಆಟಗಾರರು ಅಭ್ಯಾಸ ಶುರು ಮಾಡುವ ಮುನ್ನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಯಿತು.
ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಟಿ20 ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಐದು ಪಂದ್ಯಗಳ ಟಿ20 ಸರಣಿ (T20I Series) ಪೈಕಿ ಜೂನ್ 9 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಈಗಾಗಲೇ ಆಫ್ರಿಕಾ ಆಟಗಾರರು ಭಾರತಕ್ಕೆ ಬಂದಿಳಿದಿದ್ದು ಭರ್ಜರಿ ತಯಾರಿಯಲ್ಲಿ ನಿರತರಾಗಿದ್ದಾರೆ. ಆಟಗಾರರು ಅಭ್ಯಾಸ ಶುರು ಮಾಡುವ ಮುನ್ನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಯಿತು. ಆರ್‌ಟಿ ಪಿಸಿಆರ್ ಟೆಸ್ಟ್‌ಗಳಲ್ಲಿ ಎಲ್ಲರೂ ನೆಗೆಟಿವ್ ಆಗಿದ್ದಾರೆಂದು ತಿಳಿದುಬಂದಿದೆ. ಅನಂತರವೇ ಎಲ್ಲರೂ ಅಭ್ಯಾಸಕ್ಕೆ ಇಳಿದಿದ್ದರು. ಐಪಿಎಲ್‌ನಲ್ಲಿ (IPL 2022) ಗುಜರಾತ್ ಟೈಟಾನ್ಸ್ ತಂಡದ ಪರ ಮಿಂಚಿದ ಡೇವಿಡ್ ಮಿಲ್ಲರ್ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದು, ಸದ್ಯವೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಭಾರತದ ಪಿಚ್‌ಗಳು ಹೆಚ್ಚು ಸ್ಪಿನ್ನರ್‌ಗಳಿಗೆ ಉತ್ತಮ ನೆರವು ನೀಡುವುದರಿಂದ ಸ್ಪಿನ್ ಬೌಲರ್‌ಗಳಾದ ತಬ್ರೇಜ್ ಶಂಸಿ ಮತ್ತು ಕೇಶವ್ ಮಹಾರಾಜ್ ಅವರು ಹೆಚ್ಚು ಹೊತ್ತು ಬೌಲಿಂಗ್ ಅಭ್ಯಾಸ ನಡೆಸಿದರು. ಅವರೊಂದಿಗೆ ಆ್ಯಡನ್ ಮರ್ಕರಂ ಕೂಡ ತಮ್ಮ ಬೌಲಿಂಗ್ ಅಭ್ಯಾಸ ನಡೆಸಿದರು. ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದ ಆಲ್‌ರೌಂಡರ್ ಡ್ವೇನ್ ಪ್ರಿಟೊರಿಯಸ್ ಕೂಡ ನೆಟ್ಸ್‌ನಲ್ಲಿ ಬೆವರು ಹರಿಸಿದರು.
CAUTION ⚠️ #Proteas at work #INDvSA #BePartOfIt pic.twitter.com/gxtcsZFa0Z
— Cricket South Africa (@OfficialCSA) June 3, 2022
ಇನ್ನು 5 ವರ್ಷಗಳ ಬಳಿಕ ತಂಡಕ್ಕೆ ಮರಳಿದ ವೇಯ್ನ ಪಾರ್ನೆಲ್, ವೇಗಿ ಡ್ವೇನ್ ಪ್ರಿಟೋರಿಯಸ್, ರಸ್ಸಿ ವಾನ್ ಡರ್ ಡುಸೆನ್ ಕೂಡ ಕಠಿನ ಅಭ್ಯಾಸ ನಡೆಸಿದರು. ಪ್ರಧಾನ ಕೋಚ್ ಮಾರ್ಕ್ ಬೌಷರ್ ಅಭ್ಯಾಸದ ಉಸ್ತುವಾರಿ ವಹಿಸಿದ್ದರು. ಇವರು ವೇಗಿ ಮಾರ್ಕೊ ಜಾನ್ಸೆನ್‌ಗೆ ಕೆಲವು ಬೌಲಿಂಗ್ ಟಿಪ್ಸ್ ಹೇಳಿಕೊಟ್ಟರು.
Touchdown ??#INDvSA #BePartOfIt pic.twitter.com/kT67xxubwN
— Cricket South Africa (@OfficialCSA) June 2, 2022
ಅಚ್ಚರಿ ಎಂದರೆ ಈ ಹಿಂದೆ ಭಾರತದಲ್ಲಿ ನಡೆದ ಉಭಯ ತಂಡಗಳ ನಡುವಿನ ಟಿ20 ಸರಣಿಯಲ್ಲಿ ಆಫ್ರಿಕಾ ಒಮ್ಮೆಯೂ ಸೋತಿಲ್ಲ. ಹೀಗಾಗಿ, ಈ ಸರಣಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಹಿಂದೆ 2015/16ರಲ್ಲಿ ಇಂಡೋ-ಆಫ್ರಿಕಾ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದ್ದವು. ಇದರಲ್ಲಿ ಹರಿಣಗಳ ತಂಡ 2-0 ಅಂತರದಿಂದ ಗೆಲುವು ದಾಖಲು ಮಾಡಿತ್ತು. ಇದಾದ ಬಳಿಕ 2019-20ರಲ್ಲಿ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲು ಆಫ್ರಿಕಾ ತಂಡ ಭಾರತಕ್ಕೆ ಬಂದಿತ್ತು. ಅಲ್ಲಿ ಸರಣಿ ಸಮಬಲಗೊಂಡಿತ್ತು.
ಜೂನ್ 9 ರಿಂದ ಆರಂಭಗೊಳ್ಳುವ ಮೊದಲ ಟಿ20 ಪಂದ್ಯವು ದೆಹಲಿಯಲ್ಲಿ ನಡೆಯಲಿದ್ದು, ಜೂನ್ 12 ಎರಡನೇ ಟಿ20 ಕಟಕ್, ಜೂನ್ 14 ಮೂರನೇ ಟಿ20 ವಿಶಾಖಪಟ್ಟಣಂ, ಜೂನ್ 17 ನಾಲ್ಕನೇ ಟಿ20 ರಾಜ್‌ಕೋಟ್, ಜೂನ್ 19 ಐದನೇ ಟಿ20 ಬೆಂಗಳೂರಿನಲ್ಲಿ ನಡೆಯಲಿದೆ.
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ/ ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.
ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ಟಬ್ರೈಜ್ ಶಂಸಿ, ಟ್ರಿಸ್ಟನ್ ಸ್ಟಬ್ಸ್, ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:35 am, Sat, 4 June 22