ಭರ್ಜರಿ ಸೆಂಚುರಿ ಸಿಡಿಸಿದ ರುತುರಾಜ್ ಗಾಯಕ್ವಾಡ್
India A vs Sri Lanka A: ಭಾರತ ಎ, ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ್ ಎ ತಂಡಗಳ ನಡುವಿನ ಏಕದಿನ ತ್ರಿಕೋನ ಸರಣಿಯು ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗ ರುತುರಾಜ್ ಗಾಯಕ್ವಾಡ್ ಆರ್ಕಷಕ ಶತಕ ಬಾರಿಸಿ ಮಿಂಚಿದ್ದಾರೆ.

ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ದಾಂಡಿಗ ವೈಭವ್ ಸೂರ್ಯವಂಶಿ 12 ರನ್ಗಳಿಸಿ ಔಟಾದರೆ, ಪ್ರಭ್ಸಿಮ್ರಾನ್ ಸಿಂಗ್ 2 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪ್ರಿಯಾಂಶ್ ಆರ್ಯಾ 32 ರನ್ಗಳ ಕೊಡುಗೆ ನೀಡಿದರು.
ಈ ಹಂತದಲ್ಲಿ ಜೊತೆಗೂಡಿದ ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. 13ನೇ ಓವರ್ನಲ್ಲಿ ಜೊತೆಗೂಡಿದ ಈ ಜೋಡಿಯು 42 ಓವರ್ಗಳ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಇನ್ನು ಕೊನೆಯ 8 ಓವರ್ಗಳಿರುವಾಗ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ರುತುರಾಜ್ ಗಾಯಕ್ವಾಡ್ 112 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಸೆಂಚುರಿ ಬೆನ್ನಲ್ಲೇ ವನುಜಾ ಸಹನ್ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ಔಟಾದರು.
ಔಟಾಗುವ ಮುನ್ನ 114 ಎಸೆತಗಳನ್ನು ಎದುರಿಸಿದ ರುತುರಾಜ್ ಗಾಯಕ್ವಾಡ್ 3 ಭರ್ಜರಿ ಸಿಕ್ಸರ್ ಹಾಗೂ 6 ಫೋರ್ಗಳೊಂದಿಗೆ 101 ರನ್ ಬಾರಿಸಿದ್ದರು. ಇನ್ನು ರುತುರಾಜ್ ನಿರ್ಗಮನದ ಬೆನ್ನಲ್ಲೇ ತಿಲಕ್ ವರ್ಮಾ (60) ಕೂಡ ವಿಕೆಟ್ ಒಪ್ಪಿಸಿದರು.
ಆ ಬಳಿಕ ಬಂದ ಆಯುಷ್ ಬದೋನಿ 24 ರನ್ ಬಾರಿಸಿದರೆ, ಸೂರ್ಯವಂಶಿ ಶೆಡ್ಗೆ 26 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ಎ ತಂಡ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್ ಕಲೆಹಾಕಿದೆ.
ಭಾರತ ‘ಎ’ ಪ್ಲೇಯಿಂಗ್ XI: ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಆಯುಷ್ ಬದೋನಿ, ಅನ್ಕುಲ್ ರಾಯ್, ಸೂರ್ಯಂಶ್ ಶೆಡ್ಗೆ, ಅನ್ಶುಲ್ ಕಂಬೋಜ್, ಅರ್ಷಾದ್ ಖಾನ್, ವಿಪ್ರಾಜ್ ನಿಗಮ್.
ಇದನ್ನೂ ಓದಿ: ಅನ್ಫಿಟ್… ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ?
ಶ್ರೀಲಂಕಾ ‘ಎ’ ಪ್ಲೇಯಿಂಗ್ XI: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಅವಿಷ್ಕ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಸದೀರ ಸಮರವಿಕ್ರಮ, ಸಹನ್ ಅರಾಚಿಂಗೆ (ನಾಯಕ), ಚಾಮಿಕ ಕರುಣಾರತ್ನೆ, ರವಿಂದು ಫೆರ್ನಾಂಡೋ, ವನುಜಾ ಸಹನ್, ವಿಜಯಕಾಂತ್ ವಿಯಾಸ್ಕಾಂತ್, ಮೊಹಮ್ಮದ್ ಶಿರಾಜ್, ಗರುಕ ಸಂಕೇತ್.




