
ಭಾರತ ಟಿ20 ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಈಗ ಅಂತರರಾಷ್ಟ್ರೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಹೆಜ್ಜೆ ಇಟ್ಟಿದ್ದಾರೆ. ವಿಶ್ವದ ಅತ್ಯಂತ ಐಷಾರಾಮಿ ನಗರಗಳಲ್ಲಿ ಒಂದಾದ ದುಬೈನಲ್ಲಿ ಸೂರ್ಯಕುಮಾರ್ ಅವರು ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದು, ಈ ಕುರಿತು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಪತ್ನಿ ದೇವಿಶಾ ಶೆಟ್ಟಿ ಅವರೊಂದಿಗೆ ದುಬೈನ ಪ್ರಾಪರ್ಟಿ ದಾಖಲೆಗಳಿಗೆ ಸಹಿ ಹಾಕುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಅಲ್ಲಿನ ಜೀವನಶೈಲಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಸೂರ್ಯಕುಮಾರ್ ಯಾದವ್ ಖರೀದಿಸಿರುವ ಈ ಅತ್ಯಾಧುನಿಕ ಫ್ಲಾಟ್ ದುಬೈ ಮ್ಯಾರಿಟೈಮ್ ಸಿಟಿಯಲ್ಲಿರುವ ‘ಶಾರುಖ್ಸ್ ರೆಸಿಡೆನ್ಸಸ್ ಬೈ ಡ್ಯಾನ್ಯೂಬ್’ ಪ್ರಾಜೆಕ್ಟ್ನಲ್ಲಿದೆ. ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಹೆಸರಿನೊಂದಿಗೆ ನಂಟು ಹೊಂದಿರುವ ಈ ಐಷಾರಾಮಿ ವಸತಿ ಸಮುಚ್ಚಯವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ದುಬೈನಲ್ಲಿ ಮನೆ ಖರೀದಿಸಲು ಕಾರಣವೇನು ಎಂಬುದನ್ನು ವಿವರಿಸಿದ ಸೂರ್ಯಕುಮಾರ್ ಯಾದವ್, ಅಲ್ಲಿನ ಜೀವನದ ಗುಣಮಟ್ಟ ವಿಭಿನ್ನವಾಗಿದೆ ಎಂದಿದ್ದಾರೆ.
“ನಾನು ಮೊದಲ ಬಾರಿಗೆ 2014 ರ ಐಪಿಎಲ್ ವೇಳೆ ದುಬೈಗೆ ಬಂದಿದ್ದೆ, ಆಮೇಲೆ 2020 ರಲ್ಲೂ ಬಂದಿದ್ದೆ. ಭಾರತದಿಂದ ಹಲವರು ದುಬೈ ಕಡೆಗೆ ಮುಖ ಮಾಡುತ್ತಿದ್ದಾರೆ. ಇಲ್ಲಿನ ಐಷಾರಾಮಿ ಮತ್ತು ಜೀವನಮಟ್ಟ ತೀರಾ ವಿಭಿನ್ನವಾಗಿದೆ. ನಾನು ಮುಂಬೈನಲ್ಲಿ ವಾಸಿಸುವ ಜಾಗದಲ್ಲೂ ಸುರಕ್ಷತೆ ಇದೆ, ಆದರೆ ದುಬೈ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಇಲ್ಲಿಗೆ ಬಂದರೆ ನನಗೆ ತುಂಬಾ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ.”
ಇದನ್ನೂ ಓದಿ: 19 ಫೋರ್, 8 ಸಿಕ್ಸರ್: ‘ಮರಿ ಸೆಹ್ವಾಗ್’ ಸಿಡಿಲಬ್ಬರ, ಬೌಲರ್ಗಳು ತತ್ತರ
ಯುಎಇಯಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಇದು ಮೊದಲ ಆಸ್ತಿ ಖರೀದಿಯಾಗಿದೆ. ಕ್ರಿಕೆಟ್ ಮೈದಾನದಲ್ಲಿ ಮೈದಾನದ ಮೂಲೆ ಮೂಲೆಗೂ ಬೌಂಡರಿ ಸಿಡಿಸುವ ‘360 ಡಿಗ್ರಿ’ ಬ್ಯಾಟರ್, ರಿಯಲ್ ಎಸ್ಟೇಟ್ನಲ್ಲೂ ಹೂಡಿಕೆ ಹೆಚ್ಚಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಮುಂಬೈನ ಚೆಂಬೂರ್ನಲ್ಲಿ ₹7.18 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದರು. ಈಗ ದುಬೈ ಮನೆಯೂ ಅವರ ಆಸ್ತಿಗೆ ಸೇರ್ಪಡೆಯಾಗಿದೆ. ಈ ಖರೀದಿಯ ಅಧಿಕೃತ ವಿಡಿಯೋ ಝಲಕ್ ಮತ್ತು ಹೆಚ್ಚಿನ ಅಪ್ಡೇಟ್ಗಳನ್ನು ಸೂರ್ಯಕುಮಾರ್ ಯಾದವ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ವೀಕ್ಷಿಸಬಹುದಾಗಿದೆ.