IND vs AUS: ಕಳಪೆ ಆಟಕ್ಕೆ ಸರಣಿ ಸೋಲಿನ ಬೆಲೆ ತೆತ್ತ ಟೀಂ ಇಂಡಿಯಾ
Team India's Australia ODI Disaster: ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ, ಆಸ್ಟ್ರೇಲಿಯಾ ವಿರುದ್ಧ 2-0 ಅಂತರದಲ್ಲಿ ಕಳೆದುಕೊಂಡಿದೆ. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋತಿದ್ದ ಟೀಂ ಇಂಡಿಯಾ, ಅಡಿಲೇಡ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು 2 ವಿಕೆಟ್‌ಗಳಿಂದ ಕಳೆದುಕೊಂಡಿತು. ಹೀಗಾಗಿ ಸರಣಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತದ ಕೈತಪ್ಪಿದೆ.

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಟೀಂ ಇಂಡಿಯಾ (India vs Australia), ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್ಗಳ ಹೀನಾಯ ಸೋಲು ಕಂಡಿದ್ದ ಗಿಲ್ ಪಡೆ, ಇದೀಗ ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು 2 ವಿಕೆಟ್‌ಗಳಿಂದ ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 264 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
ಭಾರತದ ಕಳಪೆ ಪ್ರದರ್ಶನ
ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ, ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡಿಂಗ್ ಮೂರು ವಿಭಾಗಗಳಲ್ಲೂ ಹೀನಾಯ ಪ್ರದರ್ಶನ ನೀಡಿತು. ಇದರ ಲಾಭ ಪಡೆದ ಆಸ್ಟ್ರೇಲಿಯಾ ತವರಿನಲ್ಲಿ ಏಕದಿನ ಸರಣಿಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಅಲ್ಲದೆ ಬರೋಬ್ಬರಿ 17 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಅಡಿಲೇಡ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತವನ್ನು ಸೋಲಿಸಿರುವುದು ಈ ಗೆಲುವಿನ ಮತ್ತೊಂದು ವಿಶೇಷವಾಗಿದೆ.
ಸೊನ್ನೆ ಸುತ್ತಿದ ಕೊಹ್ಲಿ
ಪರ್ತ್‌ನಂತೆಯೇ, ಅಡಿಲೇಡ್‌ನಲ್ಲಿಯೂ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ತಂಡಕ್ಕೆ ಮತ್ತೊಮ್ಮೆ ಕಳಪೆ ಆರಂಭ ಸಿಕ್ಕಿತು. ನಾಯಕ ಶುಭ್ಮನ್ ಗಿಲ್ ಮತ್ತೊಮ್ಮೆ ವಿಫಳರಾಗಿ 9 ರನ್‌ಗಳಿಗೆ ಔಟಾದರು. ಇತ್ತ ವಿರಾಟ್ ಕೊಹ್ಲಿ ಕೂಡ ಸತತ ಎರಡನೇ ಪಂದ್ಯದಲ್ಲಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಈ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸತತ ಎರಡು ಏಕದಿನ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ಬೇಡದ ದಾಖಲೆಯನ್ನು ಕೊಹ್ಲಿ ತಮ್ಮ ಖಾತೆಗೆ ಹಾಕಿಕೊಂಡರು.
ಆದರೆ ಆರಂಭಿಕ ಆಘಾತದ ನಂತರ ಜೊತೆಯಾದ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಶತಕದ ಜೊತೆಯಾಟದೊಂದಿಗೆ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ ರೋಹಿತ್ ಶರ್ಮಾ 73 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 61 ರನ್ ಕಲೆ ಹಾಕಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ 44 ರನ್ ಗಳಿಸುವ ಮೂಲಕ ತಂಡವನ್ನು 264 ರನ್‌ಗಳಿಗೆ ಕೊಂಡೊಯ್ದರು.
‘ಏಕದಿನ ತಂಡದಲ್ಲೂ ರಾಹುಲ್ಗೆ ಅನ್ಯಾಯ’; ಮೂರ್ಖತನದ ನಿರ್ಧಾರ ಎಂದ ಮಾಜಿ ನಾಯಕ
ಜೀವದಾನದ ಲಾಭ ಪಡೆದ ಶಾರ್ಟ್
265 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಮಿಚೆಲ್ ಮಾರ್ಷ್ ರೂಪದಲ್ಲಿ ಮೊದಲ ಆಘಾತ ಎದುರಾಯಿತು. ಇತ್ತ ಟ್ರಾವಿಸ್ ಹೆಡ್ ಕೂಡ 28 ರನ್‌ಗಳಿಸಿ ಔಟಾದರೆ, ಎರಡು ಜೀವದಾನಗಳ ಲಾಭ ಪಡೆದ ಮ್ಯಾಥ್ಯೂ ಶಾರ್ಟ್ 78 ಎಸೆತಗಳಲ್ಲಿ 74 ರನ್ ಗಳಿಸಿ ಆಸ್ಟ್ರೇಲಿಯಾದ ಗೆಲುವನ್ನು ಖಚಿತಪಡಿಸಿದರು. ಆದಾಗ್ಯೂ ಕೊನೆಯಲ್ಲಿ ಗೆಲುವಿಗಾಗಿ ಹೋರಾಡಿದ ಟೀಂ ಇಂಡಿಯಾ, ಮ್ಯಾಥ್ಯೂ ರೆನ್‌ಶಾ (30), ಅಲೆಕ್ಸ್ ಕ್ಯಾರಿ (9) ಅವರ ವಿಕೆಟ್ ಪಡೆಯುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸುತ್ತಿರುವಂತೆ ತೋರಿತು.
ಆದರೆ ಯುವ ಆಟಗಾರ ಕೂಪರ್ ಕಾನೊಲಿ ಅವರ ಅಜೇಯ ಅರ್ಧಶತಕ ಮತ್ತು ಮಿಚೆಲ್ ಓವನ್ ಅವರ 36 ರನ್‌ಗಳ ಇನ್ನಿಂಗ್ಸ್ ಆಸ್ಟ್ರೇಲಿಯಾಕ್ಕೆ ಗೆಲುವು ತಂದುಕೊಟ್ಟಿತು. ಇದೀಗ ಉಭಯ ತಂಡಗಳ ಮೂರನೇ ಏಕದಿನ ಪಂದ್ಯ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿದ್ದು, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದನ್ನು ತಪ್ಪಿಸುವುದು ಈಗ ಟೀಂ ಇಂಡಿಯಾದ ಗುರಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Thu, 23 October 25
