ENG vs IND: ರೋಹಿತ್- ಕೊಹ್ಲಿ ನಿವೃತ್ತಿ; ಇಂಗ್ಲೆಂಡ್ ಪ್ರವಾಸಕ್ಕೆ ಹೇಗಿರಲಿದೆ ಭಾರತ ಟೆಸ್ಟ್ ತಂಡ?

India's New Test Squad for England: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆ ಬಿಸಿಸಿಐಗೆ ದೊಡ್ಡ ಸವಾಲಾಗಿದೆ. ಶುಭ್ಮನ್ ಗಿಲ್ ನಾಯಕತ್ವದ ಜವಾಬ್ದಾರಿ ಹೊರಬಹುದು. ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಕೆಎಲ್ ರಾಹುಲ್, ರಿಷಭ್ ಪಂತ್ ಮುಂತಾದ ಆಟಗಾರರನ್ನು ತಂಡದಲ್ಲಿ ಆಯ್ಕೆ ಮಾಡುವ ಸಾಧ್ಯತೆ ಇದೆ. ವೇಗದ ಬೌಲರ್‌ಗಳಾಗಿ ಬುಮ್ರಾ, ಸಿರಾಜ್, ಶಮಿ ಮುಂತಾದವರು ಸ್ಥಾನ ಪಡೆಯಬಹುದು. ಸ್ಪಿನ್ ಮತ್ತು ವೇಗದ ಆಲ್‌ರೌಂಡರ್‌ಗಳ ಆಯ್ಕೆ ಕೂಡ ಮುಖ್ಯವಾಗಿದೆ.

ENG vs IND: ರೋಹಿತ್- ಕೊಹ್ಲಿ ನಿವೃತ್ತಿ; ಇಂಗ್ಲೆಂಡ್ ಪ್ರವಾಸಕ್ಕೆ ಹೇಗಿರಲಿದೆ ಭಾರತ ಟೆಸ್ಟ್ ತಂಡ?
Team India

Updated on: May 12, 2025 | 4:58 PM

ಒಂದೆಡೆ ಅರ್ಧಕ್ಕೆ ನಿಂತಿರುವ ಐಪಿಎಲ್ (IPL 2025) ಅನ್ನು ಪೂರ್ಣಗೊಳಿಸಿವುದು ಹೇಗೆ ಎಂಬ ಯೋಚನೆಯಲ್ಲಿರುವ ಬಿಸಿಸಿಐಗೆ (BCCI) ರೋಹಿತ್, ಕೊಹ್ಲಿ ಇಲ್ಲದ ಬಲಿಷ್ಠ ಭಾರತ ಟೆಸ್ಟ ತಂಡವನ್ನು ಕಟ್ಟುವುದು ಹೇಗೆ ಎಂಬ ಸವಾಲು ಎದುರಾಗಿದೆ. ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಅನ್ನು ಆಳಿದ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ಪ್ರವಾಸಕ್ಕೆ (Team India’s England Tour) ಸಜ್ಜಾಗುತ್ತಿದೆ. ಈ ಬಾರಿ ಭಾರತ ಟೆಸ್ಟ್ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ. ರೋಹಿತ್ ಶರ್ಮಾ ಇರುವುದಿಲ್ಲ, ವಿರಾಟ್ ಕೊಹ್ಲಿ ಇರುವುದಿಲ್ಲ. ಹೊಸ ಆಟಗಾರನಿಗೆ ನಾಯಕತ್ವದ ಜವಾಬ್ದಾರಿಯ ಜೊತೆಗೆ ಅನಾನುಭವಿಗಳನ್ನು ಕಟ್ಟಿಕೊಂಡು ಬಲಿಷ್ಠ ಆಂಗ್ಲರನ್ನು ಅವರ ನೆಲದಲ್ಲಿ ಎದುರಿಸುವ ಸವಾಲು. ಇದೆಲ್ಲದರ ಜೊತೆಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಮಂಡಳಿ ಆಯ್ಕೆ ಮಾಡಬೇಕಿರುವ 15 ಸದಸ್ಯರ ತಂಡದಲ್ಲಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬ ಕುತೂಹಲವೂ ಮೂಡಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಹೇಗಿರಲಿದೆ ತಂಡ?

ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಟೆಸ್ಟ್ ತಂಡದ ಘೋಷಣೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಆಯ್ಕೆದಾರರು ಮೇ 23 ರಂದು ತಂಡವನ್ನು ಆಯ್ಕೆ ಮಾಡಲು ಕುಳಿತುಕೊಳ್ಳಬಹುದು ಎಂದು ವರದಿಯಾಗಿದೆ. ಈಗ ಪ್ರಶ್ನೆ ಏನೆಂದರೆ, ಭಾರತೀಯ ಆಯ್ಕೆ ಸಮಿತಿ ಸಭೆ ಸೇರಿದಾಗ ಯಾವ 15 ಆಟಗಾರರ ಹೆಸರುಗಳನ್ನು ಅಂತಿಮಗೊಳಿಸುತ್ತದೆ ಎಂಬುದರ ಮೇಲೆ ಕ್ರಿಕೆಟ್ ಪ್ರಿಯರ ದೃಷ್ಟಿ ನೆಟ್ಟಿದೆ.

ಶುಭ್​ಮನ್ ಗಿಲ್​ಗೆ ನಾಯಕತ್ವ

ರೋಹಿತ್ ಶರ್ಮಾ ನಿವೃತ್ತಿಯ ನಂತರ, ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಶುಭ್​ಮನ್ ಗಿಲ್ ಹೆಸರು ಕೇಳಿಬರುತ್ತಿದೆ. ಇದರರ್ಥ ಇಂಗ್ಲೆಂಡ್ ಪ್ರವಾಸಕ್ಕೆ ಶುಭ್​ಮನ್ ಗಿಲ್ ತಂಡದಲ್ಲಿ ಇರುವುದು ಖಚಿತವಾಗಿದೆ. ನಾಯಕತ್ವದ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದರ ಜೊತೆಗೆ, ಗಿಲ್ ಇನ್ನಿಂಗ್ಸ್ ಆರಂಭಿಸಬಹುದು ಅಥವಾ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬಹುದು.

ಆರಂಭಿಕರಾಗಿ ಯಾರಿಗೆ ಮಣೆ?

ಗಿಲ್ ಹೊರತುಪಡಿಸಿ, ಯಶಸ್ವಿ ಜೈಸ್ವಾಲ್ ಅವರನ್ನು ಎಂದಿನಂತೆ ಟೆಸ್ಟ್ ತಂಡದಲ್ಲಿ ಆರಂಭಿಕ ಆಟಗಾರನಾಗಿ ಕಾಣಬಹುದು. ತಂಡದಲ್ಲಿ ರೋಹಿತ್ ಶರ್ಮಾ ಬದಲಿಗೆ, ಆಯ್ಕೆದಾರರು ಪ್ರತಿಭಾನ್ವಿತ ಎಡಗೈ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಅವರಿಗೆ ಅವಕಾಶ ನೀಡಬಹುದು.

ಮಧ್ಯಮ ಕ್ರಮಾಂಕ ಹೇಗಿರಲಿದೆ?

ತಂಡದ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಕೆಎಲ್ ರಾಹುಲ್ 4 ನೇ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೆಸ್ಟ್‌ನಲ್ಲಿ ಈ ಬ್ಯಾಟಿಂಗ್ ಸ್ಥಾನದಲ್ಲಿ ಅವರ ಸರಾಸರಿ ಕೂಡ 54 ರಷ್ಟಿದೆ. ಹೀಗಾಗಿ ಕೆಎಲ್ ರಾಹುಲ್ ಅವರನ್ನು ಖಂಡಿತವಾಗಿಯೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಬಹುದು. ಅವರಲ್ಲದೆ ರಿಷಭ್ ಪಂತ್ ಕೂಡ ತಂಡದಲ್ಲಿ ಸ್ಥಾನ ಪಡೆಯಬಹುದು. ಪಂತ್​ರನ್ನು ಟೆಸ್ಟ್ ತಂಡದ ಉಪನಾಯಕನನ್ನಾಗಿ ಮಾಡುವ ಮಾತುಗಳು ಜೋರಾಗುತ್ತಿರುವುದರಿಂದ 15 ಆಟಗಾರರ ಪಟ್ಟಿಯಲ್ಲಿ ಪಂತ್ ಹೆಸರು ಸೇರ್ಪಡೆಯಾಗುವುದು ಖಚಿತವಾಗಿದೆ.

ಆಲ್‌ರೌಂಡರ್‌ಗಳಾಗಿ ಯಾರಿಗೆ ಅವಕಾಶ?

ಇಂಗ್ಲೆಂಡ್ ಪ್ರವಾಸಕ್ಕಾಗಿ ಟೀಂ ಇಂಡಿಯಾದ 15 ಸದಸ್ಯರ ಟೆಸ್ಟ್ ತಂಡದಲ್ಲಿ 3 ಸ್ಪಿನ್ ಆಲ್‌ರೌಂಡರ್‌ಗಳಲ್ಲದೆ, ಇಬ್ಬರು ವೇಗದ ಬೌಲಿಂಗ್ ಆಲ್‌ರೌಂಡರ್‌ಗಳು ಸ್ಥಾನ ಪಡೆಯುವುದನ್ನು ಕಾಣಬಹುದು. ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಸ್ಪಿನ್ ಆಲ್‌ರೌಂಡರ್‌ಗಳಾಗಿ ಹೆಸರಿಸಬಹುದು. ಶಾರ್ದೂಲ್ ಠಾಕೂರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಾಗಿ ಆಯ್ಕೆ ಮಾಡಬಹುದು.

ಐವರು ವೇಗಿಗಳಿಗೆ ತಂಡದಲ್ಲಿ ಸ್ಥಾನ

ಜೂನ್ 20 ರಿಂದ ಆರಂಭವಾಗುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ಐವರು ವೇಗದ ಬೌಲರ್‌ಗಳು ಸ್ಥಾನ ಪಡೆಯುವ ಸಾಧ್ಯತೆ ಇದೆ. ತಂಡದಲ್ಲಿ ಸ್ಥಾನ ಪಡೆಯುವ ಐವರು ವೇಗಿಗಳಲ್ಲಿ ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ್ ಕೃಷ್ಣ ಆಯ್ಕೆಯಾಗುವ ಸಾಧ್ಯತೆಯಿದೆ.

ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗ; ವಿರಾಟ್ ನಿವೃತ್ತಿ ಬಗ್ಗೆ DGMO Lt Gen ರಾಜೀವ್ ಘಾಯ್ ಮಾತು

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಸಂಭಾವ್ಯ 15 ಸದಸ್ಯರ ತಂಡ

ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಕೆಎಲ್ ರಾಹುಲ್, ರಿಷಭ್ ಪಂತ್, ಶಾರ್ದೂಲ್ ಠಾಕೂರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Mon, 12 May 25