WPL 2026 Final: ಫೈನಲ್‌ನಲ್ಲಿ ಡೆಲ್ಲಿ ಮಣಿಸಿ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದ ಆರ್ಸಿಬಿ
RCB Crowned WPL 2026 Champions: 2026ರ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರೋಚಕವಾಗಿ ಸೋಲಿಸಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ 203 ರನ್ ಗಳಿಸಿತು. ಆರ್ಸಿಬಿ ಕೊನೆಯ ಓವರ್‌ನಲ್ಲಿ ಗುರಿ ತಲುಪಿ ಭರ್ಜರಿ ಗೆಲುವು ಸಾಧಿಸಿತು.

ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ 2026 ರ ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ (WPL 2026 Final) ಪಂದ್ಯದಲ್ಲಿ ಕೋಟ್ಯಾಂತರ ಆರ್ಸಿಬಿ ಅಭಿಮಾನಿಗಳು ಯಾವ ಫಲಿತಾಂಶವನ್ನು ನಿರೀಕ್ಷಿಸಿದ್ದರೋ ಅದೇ ಫಲಿತಾಂಶ ಹೊರಬಿದ್ದಿದೆ. ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯವನ್ನು ಕೊನೆಯ ಓವರ್‌ನಲ್ಲಿ ಗೆದ್ದುಕೊಳ್ಳುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇತ್ತ ಸತತ ನಾಲ್ಕನೇ ಬಾರಿಗೆ ಫೈನಲ್‌ನಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅದೇ ನಿರಾಸೆಯೊಂದಿಗೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 203 ರನ್‌ಗಳ ಬೃಹತ್ ರನ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಕೂಡ ಕೆಚ್ಚೆದೆಯ ಪ್ರದರ್ಶನ ನೀಡಿ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತು. ಹಾಗೆಯೇ 203 ರನ್‌ಗಳ ಗುರಿ ಬೆನ್ನಟ್ಟುವ ಮೂಲಕ ಆರ್ಸಿಬಿ ಡಬ್ಲ್ಯುಪಿಎಲ್ ಫೈನಲ್ ಇತಿಹಾಸದಲ್ಲಿ ಅತಿದೊಡ್ಡ ಮೊತ್ತವನ್ನು ಬೆನ್ನಟ್ಟಿದ ತಂಡ ಎಂಬ ದಾಖಲೆನ್ನು ಬರೆಯಿತು.
ಡೆಲ್ಲಿಗೆ ಸ್ಫೋಟಕ ಆರಂಭ
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಸ್ಫೋಟಕ ಆರಂಭ ಸಿಕ್ಕಿತು. ಲಿಜಿಲ್ಲೆ ಲೀ ಮತ್ತು ಶೆಫಾಲಿ ವರ್ಮಾ ಮೊದಲ ವಿಕೆಟ್ಗೆ 49 ರನ್‌ಗಳ ಜೊತೆಯಾಟ ನೀಡಿದರು. ಶಫಾಲಿ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆ ಬಳಿಕ ಬಂದ ನಾಯಕಿ ಜೆಮಿಮಾ ರಾಡ್ರಿಗಸ್ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಆದಾಗ್ಯೂ ಲಿಜಿಲ್ಲೆ ಲೀ 37 ರನ್‌ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಡೆಲ್ಲಿಗೆ ಎರಡನೇ ಆಘಾತ ಎದುರಾಯಿತು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಲಾರಾ ವುಲ್ಫಾರ್ಟ್, ಜೆಮಿಮಾಗೆ ಉತ್ತಮ ಸಾಥ್ ನೀಡಿದರು. ಹೀಗಾಗಿ ಈ ಜೋಡಿ 4ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವನ್ನಾಡಿತು.
ನಾಯಕಿ ಜೆಮಿಮಾ ಅರ್ಧಶತಕ
ಇದೇ ವೇಳೆ ನಾಯಕಿ ಜೆಮಿಮಾ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅಂತಿಮವಾಗಿ ಜೆಮಿಮಾ 37 ಎಸೆತಗಳಲ್ಲಿ 57 ರನ್ ಬಾರಿಸಿದರು. ಇತ್ತ ಲಾರಾ ವುಲ್ಫಾರ್ಟ್ ಕೂಡ 44 ರನ್‌ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಶೆನೆಲ್ಲೆ ಹೆನ್ರಿ 15 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿ ತಂಡವನ್ನು 203 ರನ್‌ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಇತ್ತ ಆರ್ಸಿಬಿ ಪರ ಸಯಾಲಿ ಸತ್ಘರೆ, ಅರುಂಧತಿ ಹಾಗೂ ನಡಿನ್ ಡಿ ಕ್ಲರ್ಕ್ ತಲಾ 1 ವಿಕೆಟ್ ಪಡೆದರು.
ಸ್ಮೃತಿ- ವಾಲ್ ದಾಖಲೆಯ ಜೊತೆಯಾಟ
204 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಗ್ರೇಸ್ ಹ್ಯಾರಿಸ್ ಕೇವಲ 9 ರನ್‌ಗಳಿಗೆ ಔಟಾದರು. ಹೀಗಾಗಿ ಡೆಲ್ಲಿ ಆರಂಭದಲ್ಲೇ ಪಂದ್ಯದಲ್ಲಿ ಮೇಲುಗೈ ಸಾಧಿಸಿತು. ಆದರೆ ಎರಡನೇ ವಿಕೆಟ್ಗೆ ಜೊತೆಯಾದ ನಾಯಕಿ ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವಾಲ್ ಡೆಲ್ಲಿ ತಂಡವನ್ನು ದುಃಸ್ವಪ್ನದಂತೆ ಕಾಡಿದರು. ಇಬ್ಬರೂ ಆಟಗಾರ್ತಿಯರು, ವಿಶೇಷವಾಗಿ ಮಂಧಾನ, ಅದ್ಭುತ ಬ್ಯಾಟಿಂಗ್ ಮಾಡಿ ದೆಹಲಿಯಿಂದ ಪಂದ್ಯವನ್ನು ಕಸಿದುಕೊಂಡರು. ಪವರ್‌ಪ್ಲೇನಲ್ಲಿ ಈ ಜೋಡಿ 59 ರನ್ ಕಲೆಹಾಕಿತು. ಹಾಗೆಯೇ 10 ನೇ ಓವರ್ ಹೊತ್ತಿಗೆ, ತಂಡದ ಸ್ಕೋರ್ ಅನ್ನು 100 ರನ್‌ಗಳಿಗೆ ಕೊಂಡೊಯ್ದರು. ಕೇವಲ 58 ಎಸೆತಗಳಲ್ಲಿ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.
WPL ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕ ಬಾರಿಸಿದ ಸ್ಮೃತಿ ಮಂಧಾನ
ಸ್ಮೃತಿ- ವಾಲ್ ಅರ್ಧಶತಕ
ಈ ವೇಳೆ ಜಾರ್ಜಿಯಾ ವಾಲ್ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಮಂಧಾನಾ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮಂಧಾನಾ ಎರಡು ಸಿಕ್ಸರ್ ಮತ್ತು ಐದು ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ಮಂಧಾನ ಮತ್ತು ವಾಲ್ ಒಟ್ಟಿಗೆ 92 ಎಸೆತಗಳಲ್ಲಿ 165 ರನ್ ಸೇರಿಸಿದರು. ವಾಲ್ 79 ರನ್ ಗಳಿಸಿದ್ದಾಗ ಮಿನ್ನು ಮಣಿ ಬೌಲಿಂಗ್‌ನಲ್ಲಿ ಔಟಾದರು. ಆದಾಗ್ಯೂ, ಅವರು ತಮ್ಮ ಕೆಲಸವನ್ನು ಮಾಡಿ ಆರ್‌ಸಿಬಿಯನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು.
ಕೊನೆಯ ಓವರ್ ರೋಚಕತೆ
19ನೇ ಓವರ್‌ನಲ್ಲಿ ಡೆಲ್ಲಿ, ಆರ್‌ಸಿಬಿಯನ್ನು ಸಂಕಷ್ಟಕ್ಕೆ ಸಿಲುಕಿಸಿತು. ಶೆನೆಲ್ಲೆ ಹೆನ್ರಿ ನಾಲ್ಕನೇ ಎಸೆತದಲ್ಲಿ ಸ್ಮೃತಿ ಮಂಧಾನ ಅವರನ್ನು 87 ರನ್‌ಗಳಿಗೆ ಬೌಲ್ಡ್ ಮಾಡುವ ಮೂಲಕ ಆರ್‌ಸಿಬಿಯನ್ನು ಒತ್ತಡಕ್ಕೆ ಸಿಲುಕಿಸಿದರು. ಮಂಧಾನ ಔಟಾದ ನಂತರ ಕ್ರೀಸ್‌ಗೆ ಬಂದ ರಾಧಾ ಯಾದವ್ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ್ದರು. ಆದರೆ ಡೆಲ್ಲಿ ತಂಡ ಈ ಕ್ಯಾಚ್ ಕೈಚೆಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿತು. ಕೊನೆಯ ಓವರ್‌ನಲ್ಲಿ ಆರ್ಸಿಬಿ ಗೆಲುವಿಗೆ 10 ರನ್ ಬೇಕಿತ್ತು. ಸ್ಟ್ರೈಕ್ನಲ್ಲಿದ್ದ ರಾಧಾ ಎರಡು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:08 pm, Thu, 5 February 26
