
ಕ್ರೈಸ್ಟ್ಚರ್ಚ್ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ಎ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ರೈಸ್ ಮಾರಿಯು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ಮೊದಲ ಇನಿಂಗ್ಸ್ನಲ್ಲಿ ಕಲೆಹಾಕಿದ್ದು 346 ರನ್ಗಳು ಮಾತ್ರ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ಎ 424 ರನ್ ಕಲೆಹಾಕಿತು.
78 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಜೈಸ್ವಾಲ್ ಶತಕ ಪೂರೈಸಿದ್ದು ಕೇವಲ 119 ಎಸೆತಗಳಲ್ಲಿ.
ಶತಕದ ಬಳಿಕವೂ ಆರ್ಭಟ ಮುಂದುವರೆಸಿದ ಜೈಸ್ವಾಲ್, ಕಿವೀಸ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಪರಿಣಾಮವಾಗಿ ಕೇವಲ 154 ಎಸೆತಗಳಲ್ಲಿ ಅವರ ಬ್ಯಾಟ್ನಿಂದ 151 ರನ್ಗಳು ಮೂಡಿಬಂದವು. ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ಗೆ ಉತ್ತಮ ಸಾಥ್ ನೀಡಿದ ಯಶ್ ರಾಥೋಡ್ 122 ಎಸೆತಗಳಲ್ಲಿ 9 ಫೋರ್ಗಳೊಂದಿಗೆ ಅಜೇಯ 100 ರನ್ ಬಾರಿಸಿದರು.
ಇತ್ತ ನಾಲ್ಕನೇ ದಿನದಾಟದ ಅಂತ್ಯದವರೆಗೆ ಬ್ಯಾಟಿಂಗ್ ಕಾಯ್ದುಕೊಂಡ ಯಶಸ್ವಿ ಜೈಸ್ವಾಲ್, 162 ಎಸೆತಗಳಲ್ಲಿ 15 ಫೋರ್ ಹಾಗೂ 5 ಭರ್ಜರಿ ಸಿಕ್ಸರ್ಗಳೊಂದಿಗೆ ಅಜೇಯ 155 ರನ್ ಚಚ್ಚಿದರು. ಇವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ‘ಎ’ ತಂಡ ಕೇವಲ 52.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 282 ರನ್ ಕಲೆಹಾಕಿತು. ಆ ಮೂಲಕ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ.
ಒಟ್ಟಿನಲ್ಲಿ, ಕಳಪೆ ಫಾರ್ಮ್ನಿಂದ ಕಂಗಾಲಾಗಿದ್ದ ಜೈಸ್ವಾಲ್ ಅವರ ಬ್ಯಾಟ್ನಿಂದ ಮೂಡಿಬಂದ ಈ ವಿಸ್ಫೋಟಕ ಸೆಂಚುರಿ, ಕೇವಲ ಇಂಡಿಯಾ ‘ಎ’ ತಂಡಕ್ಕೆ ಮಾತ್ರವಲ್ಲ, ಮುಂಬರುವ ಸರಣಿಗಳಿಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಗೂ ಶುಭಸೂಚನೆಯಾಗಿದೆ. ಕಿವೀಸ್ ನಾಡಿನ ಕಠಿಣ ಪಿಚ್ಗಳಲ್ಲೇ ರನ್ ಮಳೆ ಹರಿಸಿರುವ ಈ ಯುವ ಆಟಗಾರ, ತಾವು ಮುಂಬರುವ ದಿನಗಳಲ್ಲಿ ಎದುರಾಳಿಗಳಿಗೆ ಎಷ್ಟು ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಫಾರ್ಮ್ ಹೀಗೆಯೇ ಮುಂದುವರಿದರೆ ಟೀಮ್ ಇಂಡಿಯಾದ ಆರಂಭಿಕ ಬ್ಯಾಟಿಂಗ್ ವಿಭಾಗಕ್ಕಂತೂ ಆನೆ ಬಲ ಬಂದಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ನ್ಯೂಝಿಲೆಂಡ್ ಎ ಪ್ಲೇಯಿಂಗ್ 11: ರೈಸ್ ಮಾರಿಯು (ನಾಯಕ) , ಕರ್ಟಿಸ್ ಹೀಫಿ , ಟಿಮ್ ರಾಬಿನ್ಸನ್ , ಮ್ಯಾಥ್ಯೂ ಬಾಯ್ಲ್ , ಡೀನ್ ಫಾಕ್ಸ್ಕ್ರಾಫ್ಟ್ , ಮಿಚೆಲ್ ಹೇ (ವಿಕೆಟ್ ಕೀಪರ್ ), ಕ್ರಿಶ್ಚಿಯನ್ ಕ್ಲಾರ್ಕ್ , ಬ್ರೆಟ್ ರಾಂಡೆಲ್ , ಫ್ರೇಸರ್ ಶೀಟ್ , ಜೇಡೆನ್ ಲೆನಾಕ್ಸ್.
ಇದನ್ನೂ ಓದಿ: 6,6,6,6,6,6,6: ರಾಹುಲ್ ಸಿಡಿಲಬ್ಬರ, ಸ್ಫೋಟಕ ಅರ್ಧಶತಕ
ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಸಾಯಿ ಸುದರ್ಶನ್ , ದೇವದತ್ ಪಡಿಕ್ಕಲ್ , ಯಶ್ ರಾಥೋಡ್ , ಧ್ರುವ್ ಜುರೆಲ್ (ನಾಯಕ) , ಸ್ಮರಣ್ ರವಿಚಂದ್ರನ್ , ವಾಷಿಂಗ್ಟನ್ ಸುಂದರ್ , ಮಾನವ್ ಸುತಾರ್ , ಆಕಾಶ್ ದೀಪ್ , ಮೊಹಮ್ಮದ್ ಸಿರಾಜ್ , ಮುಖೇಶ್ ಕುಮಾರ್.