- TV9 Kannada Photo gallery Cricket photos Manav Suthar Joins Warwickshire for County Cricket Debut in England
ಚೊಚ್ಚಲ ಟೆಸ್ಟ್ನಲ್ಲಿ ಮಿಂಚಿ ವಿದೇಶಿ ತಂಡವನ್ನು ಸೇರಿಕೊಂಡ ಮಾನವ್ ಸುತಾರ್
Manav Suthar: ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಅಫ್ಘಾನಿಸ್ತಾನ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಈಗ ಇಂಗ್ಲೆಂಡ್ನ ವಾರ್ವಿಕ್ಷೈರ್ ಕೌಂಟಿ ಕ್ಲಬ್ ಸೇರಲಿದ್ದಾರೆ. 23 ವರ್ಷದ ಈ ಎಡಗೈ ಸ್ಪಿನ್ನರ್ ಕೌಂಟಿ ಚಾಂಪಿಯನ್ಶಿಪ್ನ ಎರಡು ಪ್ರಮುಖ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್ ಪಿಚ್ಗಳಲ್ಲಿ ತಮ್ಮ ಮಾಂತ್ರಿಕ ಬೌಲಿಂಗ್ ಪ್ರದರ್ಶಿಸಲು ಸುತಾರ್ ಉತ್ಸುಕರಾಗಿದ್ದಾರೆ.
Updated on: Jun 10, 2026 | 5:52 PM

ಅಫ್ಘಾನಿಸ್ತಾನ ವಿರುದ್ಧದ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ತಮ್ಮ ಮಾಂತ್ರಿಕ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಈಗ ಇಂಗ್ಲಿಷ್ ಪಿಚ್ಗಳಲ್ಲಿ ತಮ್ಮ ಮ್ಯಾಜಿಕ್ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಈ 23 ವರ್ಷದ ಎಡಗೈ ಸ್ಪಿನ್ನರ್ ಇಂಗ್ಲೆಂಡ್ನ ಪ್ರಸಿದ್ಧ ಕೌಂಟಿ ಕ್ಲಬ್ 'ವಾರ್ವಿಕ್ಷೈರ್' ಪರ ಕೌಂಟಿ ಚಾಂಪಿಯನ್ಶಿಪ್ನ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ (PC-BCCI).

ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುತ್ತಿರುವ ಮಾನವ್ ಸುತಾರ್ ಇತ್ತೀಚೆಗೆ, ನ್ಯೂ ಚಂಡೀಗಢದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 33 ರನ್ ನೀಡಿ 6 ವಿಕೆಟ್ ಪಡೆದಿದ್ದ ಮಾನವ್, ಎರಡನೇ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಉರುಳಿಸಿದ್ದರು (PC-BCCI).

ಈ ಪಂದ್ಯದಲ್ಲಿ ಒಟ್ಟು 72 ರನ್ ನೀಡಿ 7 ವಿಕೆಟ್ಗಳನ್ನು ಪಡೆದಿದ್ದ ಮಾನವ್ ಅವರ ಅದ್ಭುತ ಪ್ರದರ್ಶನದಿಂದಾಗಿ ಟೀಂ ಇಂಡಿಯಾ, ಅಫ್ಘಾನಿಸ್ತಾನದ ವಿರುದ್ಧ ಇನ್ನಿಂಗ್ಸ್ ಮತ್ತು 300 ರನ್ಗಳ ಜಯ ದಾಖಲಿಸಿತು. ಈ ಪ್ರದರ್ಶನಕ್ಕಾಗಿ ಮಾನವ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಇದೀಗ ಮಾನವ್ಗೆ ಕೌಂಟಿ ಕ್ರಿಕೆಟ್ ತಂಡದಿಂದ ಆಹ್ವಾನವೂ ಬಂದಿದೆ (PC-BCCI).

ದೇಶೀಯ ಕ್ರಿಕೆಟ್ನಲ್ಲೂ ಮಿಂಚಿರುವ ಮಾನವ್ ಸುತಾರ್ ಇದುವರೆಗೆ ಆಡಿರುವ 29 ಪ್ರಥಮ ದರ್ಜೆ ಪಂದ್ಯಗಳಲ್ಲಿ 129 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವೂ ಆಗಿರುವ ಮಾನವ್ ಸುತಾರ್, ‘ಮುಂದಿನ ಎರಡು ಕೌಂಟಿ ಚಾಂಪಿಯನ್ಶಿಪ್ ಪಂದ್ಯಗಳಿಗೆ ವಾರ್ವಿಕ್ಷೈರ್ ತಂಡವನ್ನು ಸೇರಲು ನಾನು ತುಂಬಾ ಉತ್ಸುಕನಾಗಿದ್ದೇನೆ. ತಂಡಕ್ಕೆ ನಾನು ಗಮನಾರ್ಹ ಕೊಡುಗೆ ನೀಡಬಹುದೆಂದು ಭಾವಿಸುತ್ತೇನೆ’ ಎಂದಿದ್ದಾರೆ (PC-BCCI).

ವಾರ್ವಿಕ್ಷೈರ್ ಪ್ರಸ್ತುತ ಕೌಂಟಿ ಚಾಂಪಿಯನ್ಶಿಪ್ ಪ್ರಶಸ್ತಿ ರೇಸ್ನಲ್ಲಿ ಮುಂಚೂಣೆಯಲ್ಲಿದೆ. ಇದೀಗ ಈ ತಂಡವನ್ನು ಸೇರಿಕೊಂಡಿರುವ ಸುತಾರ್, ಯಾರ್ಕ್ಷೈರ್ ಮತ್ತು ಸೋಮರ್ಸೆಟ್ ವಿರುದ್ಧದ ಎರಡು ಪಂದ್ಯಗಳಲ್ಲಿ ಆಡುವ ನಿರೀಕ್ಷೆಯಿದೆ. ಯಾರ್ಕ್ಷೈರ್ ವಿರುದ್ಧದ ಪಂದ್ಯವು ಜೂನ್ 12 ರಿಂದ 15 ರವರೆಗೆ ಸ್ಕಾರ್ಬರೋದಲ್ಲಿ ನಡೆಯಲಿದ್ದು, ಸೋಮರ್ಸೆಟ್ ವಿರುದ್ಧದ ಪಂದ್ಯವು ಟೌಂಟನ್ನಲ್ಲಿ ನಡೆಯಲಿದೆ (PC-BCCI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



