AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ಮುಜ್​ನಲ್ಲಿ ಅಮೆರಿಕದ ಪೈಲಟ್​ಗಳ ಜೀವ ಉಳಿಸಿದ ಡ್ರೋನ್ ಬೋಟ್; ಇದರ ಹಿಂದಿರುವ ಶಕ್ತಿ ವಿಭವ್ ಅಲ್ಟೇಕರ್

Vibhav Altekar's Drone Boat: ಭಾರತೀಯ ಮೂಲದ ಇಂಜಿನಿಯರ್ ವಿಭವ್ ಅಲ್ಟೇಕರ್ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಪೈಲಟ್‌ಗಳ ರಕ್ಷಣೆಯಲ್ಲಿ ಜಾಗತಿಕ ಗಮನ ಸೆಳೆದಿದ್ದಾರೆ. ಸಾರೋನಿಕ್ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕರಾದ ಇವರು ವಿನ್ಯಾಸಗೊಳಿಸಿದ ಅತ್ಯಾಧುನಿಕ ಡ್ರೋನ್ ಬೋಟ್ (ಕಾರ್ಸ್​ಏರ್), ಸಮುದ್ರಕ್ಕೆ ಬಿದ್ದ ಹೆಲಿಕಾಪ್ಟರ್‌ನ ಪೈಲಟ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿತು. ಈ AI ಆಧಾರಿತ, ಮಾನವರಹಿತ ನೌಕೆಯು (USV) ಅದರ ವಿಶಿಷ್ಟ ವೈಶಿಷ್ಟ್ಯಗಳಿಂದಾಗಿ ಮಿಲಿಟರಿ ರಕ್ಷಣೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಹಾರ್ಮುಜ್​ನಲ್ಲಿ ಅಮೆರಿಕದ ಪೈಲಟ್​ಗಳ ಜೀವ ಉಳಿಸಿದ ಡ್ರೋನ್ ಬೋಟ್; ಇದರ ಹಿಂದಿರುವ ಶಕ್ತಿ ವಿಭವ್ ಅಲ್ಟೇಕರ್
ಹಾರ್ಮುಜ್ ಜಲಸಂಧಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 10, 2026 | 5:35 PM

Share

ವಾಷಿಂಗ್ಟನ್, ಜೂನ್ 10: ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆದ ಅತ್ಯಂತ ರೋಮಾಂಚಕ ರಕ್ಷಣಾ ಕಾರ್ಯಾಚರಣೆಯೊಂದರಲ್ಲಿ ಭಾರತೀಯ ಮೂಲದ ಇಂಜಿನಿಯರ್ ಒಬ್ಬರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಅಪಘಾತಕ್ಕೀಡಾಗಿದ್ದ ಅಮೆರಿಕ ಸೇನೆಯ ಪೈಲಟ್‌ಗಳನ್ನು ರಕ್ಷಿಸಿದ ಡ್ರೋನ್ ಬೋಟ್ ಕಾರ್ಯಾಚರಣೆ ಅನೇಕರ ಗಮನ ಸೆಳೆದಿದೆ. ಈ ವೇಳೆ, ಭಾರತ ಮೂಲದವರಾದ ವಿಭವ್ ಅಲ್ಟೇಕರ್ (Vibhav Altekar) ಅವರ ಹೆಸರು ಮುನ್ನೆಲೆಗೆ ಬಂದಿದೆ. ಅಮೆರಿಕ ವಾಯುಸೇನೆಯ ಅಪಾಚೆ ಹೆಲಿಕಾಪ್ಟರ್ ಸಮುದ್ರಕ್ಕೆ ಬಿದ್ದಾಗ, ಅದರ ಪೈಲಟ್ ಮತ್ತು ಕೋ ಪೈಲಟ್ ಅವರನ್ನು ರಕ್ಷಿಸಲು ಬಳಸಲಾದ ಕಾರ್ಸ್​ಏರ್ ಎನ್ನುವ ಡ್ರೋನ್ ಬೋಟ್ ಅನ್ನು ತಯಾರಿಸಿದ್ದು ಸರೋನಿಕ್ ಟೆಕ್ನಾಲಜೀಸ್ ಎಂಬ ಸಂಸ್ಥೆ. ಇದರ ಸಹ-ಸಂಸ್ಥಾಪಕರಲ್ಲಿ ವಿಭವ್ ಅಲ್ಟೇಕರ್ ಒಬ್ಬರಾಗಿದ್ದಾರೆ.

ಕಾರ್ಯಾಚರಣೆ ನಡೆದಿದ್ದು ಹೇಗೆ?

ಮಧ್ಯಪ್ರಾಚ್ಯದ ಅತ್ಯಂತ ಸೂಕ್ಷ್ಮ ಮತ್ತು ಉದ್ವಿಗ್ನ ವಲಯವಾದ ಹಾರ್ಮುಜ್ ಜಲಸಂಧಿಯ ಸಮುದ್ರ ಭಾಗದಲ್ಲಿ ಅಮೆರಿಕದ ಮಿಲಿಟರಿ ವಿಮಾನವೊಂದು ಪತನಗೊಂಡಿತ್ತು. ಇರಾನ್ ದಾಳಿಯಿಂದ ಹೆಲಿಕಾಪ್ಟರ್ ಪತನಗೊಂಡಿದ್ದು ಎಂದು ಕೆಲ ವರದಿಗಳು ಹೇಳಿದರೆ, ಕಾಪ್ಟರ್​ನ ತಾಂತ್ರಿಕ ದೋಷದಿಂದ ಕುಸಿದಿದೆ ಎಂದು ಇನ್ನೂ ಕೆಲ ವರದಿಗಳು ಹೇಳುತ್ತಿದೆ. ಆದರೆ, ಪತನಗೊಂಡ ಈ ಹೆಲಿಕಾಪ್ಟರ್​ನಲ್ಲಿದ್ದ ಪೈಲಟ್‌ಗಳು ತುರ್ತಾಗಿ ಸಮುದ್ರಕ್ಕೆ ಜಿಗಿದಿದ್ದರು.

ಬಹಳ ಅಪಾಯಕಾರಿ ಪರಿಸ್ಥಿತಿ ಇದ್ದ ಹಿನ್ನೆಲೆಯಲ್ಲಿ ಪತನಗೊಂಡ ಹೆಲಿಕಾಪ್ಟರ್​ನ ರಕ್ಷಣೆಗೆ ಮಾನವಚಾಲಿತ ಹಡಗು ಅಥವಾ ಕಾಪ್ಟರ್ ಕಳುಹಿಸುವುದು ಕಷ್ಟಸಾಧ್ಯವಿತ್ತು. ಹೀಗಾಗಿ, ಅಮೆರಿಕದ ನೌಕಾಪಡೆಯಲ್ಲಿದ್ದ ಎಐ ಆಧಾರಿತ ಸ್ವಯಂಚಾಲಿತ ಡ್ರೋನ್ ಬೋಟ್ ಅನ್ನು ಅಖಾಡಕ್ಕೆ ಇಳಿಸಲಾಯಿತು. ದೂರದಿಂದಲೇ ವ್ಯಕ್ತಿಗಳು ಈ ಬೋಟ್ ಅನ್ನು ಆಪರೇಟ್ ಮಾಡಬಹುದು. ಹೆಲಿಕಾಪ್ಟರ್​ನ ಪೈಲಟ್​ಗಳು ಬಿದ್ದಿರುವ ಸ್ಥಳವನ್ನು ಗುರುತಿಸಿ, ಅವರನ್ನು ರಕ್ಷಿಸಲು ಈ ಡ್ರೋನ್ ಬೋಟ್​ನ ಪಾತ್ರ ಬಹಳ ಮಹತ್ವದ್ದು.

ಇದನ್ನೂ ಓದಿ: ಒಮಾನ್-ಭಾರತ ಗ್ಯಾಸ್ ಪೈಪ್​ಲೈನ್ ಪ್ರಾಜೆಕ್ಟ್​ಗೆ ಮರುಜೀವ; ಸಾಧ್ಯತಾ ವರದಿಗೆ ಸರ್ಕಾರ ಆದೇಶ; ಈ ಯೋಜನೆಯಿಂದ ಭಾರತಕ್ಕಿದೆಯಾ ಲಾಭ?

ಯಾರು ಈ ವಿಭವ್ ಅಲ್ಟೇಕರ್?

ಈ ಅತ್ಯಾಧುನಿಕ ರೋಬೋಟಿಕ್ ಮತ್ತು ಸ್ವಯಂಚಾಲಿತ ಡ್ರೋನ್ ಬೋಟ್‌ನ ತಾಂತ್ರಿಕ ವಿನ್ಯಾಸ ಹಾಗೂ ಸಾಫ್ಟ್‌ವೇರ್ ಅಭಿವೃದ್ಧಿಯ ಹಿಂದೆ ಇರುವುದು ಭಾರತೀಯ ಮೂಲದ ಪ್ರತಿಭೆ ವಿಭವ್ ಅಲ್ಟೇಕರ್. ವಿಭವ್ ಅವರು ಭಾರತದಲ್ಲಿ ತಮ್ಮ ಆರಂಭಿಕ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ, ನಂತರ ಅಮೆರಿಕದಲ್ಲಿ ರೋಬೋಟಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಉನ್ನತ ಶಿಕ್ಷಣ ಪಡೆದರು.

ಅವರು ಪ್ರಸ್ತುತ ಅಮೆರಿಕದ ಪ್ರಮುಖ ಕಡಲ ತಂತ್ರಜ್ಞಾನ ಮತ್ತು ರಕ್ಷಣಾ ವಲಯದ ಸ್ಟಾರ್ಟ್‌ಅಪ್ ಸಂಸ್ಥೆಯಾದ ಸಾರೊನಿಕ್ ಟೆಕ್ನಾಲಜೀಸ್​ನಲ್ಲಿ (Saronic Technologies) ಸಿಟಿಒ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಕಂಪನಿಯ ನಾಲ್ವರು ಸಂಸ್ಥಾಪಕರಲ್ಲಿ ಒಬ್ಬರು. ಈ ಕಂಪನಿಯು ನೀರಿನ ಮೇಲೆ ಮತ್ತು ನೀರಿನ ಆಳದಲ್ಲಿ (Submersible) ಎರಡೂ ಕಡೆ ಚಲಿಸಬಲ್ಲ ವಿಶ್ವದ ಮೊದಲ ಸ್ವಯಂಚಾಲಿತ ನೌಕೆಗಳನ್ನು ತಯಾರಿಸಲು ಪ್ರಸಿದ್ಧಿಯಾಗಿದೆ.

ಈ ಡ್ರೋನ್ ಬೋಟ್‌ನ ವಿಶೇಷತೆಗಳೇನು?

ಸಮುದ್ರದ ಮೇಲ್ಮೈನಲ್ಲಿ ಅತ್ಯಂತ ವೇಗವಾಗಿ ಚಲಿಸಬಲ್ಲ ಈ ಮಾನವರಹಿತ ನೌಕೆಯು (Unmanned Surface Vessel – USV) ಹಲವು ವಿಶೇಷತೆಗಳನ್ನು ಹೊಂದಿದೆ:

  • ಇದು ಸೌರಶಕ್ತಿ (Solar Power) ಮತ್ತು ವಾಯು ಶಕ್ತಿಯನ್ನು (Wind Power) ಬಳಸಿ ತಿಂಗಳುಗಟ್ಟಲೆ ಸಮುದ್ರದಲ್ಲೇ ಉಳಿದು ನಿರಂತರವಾಗಿ ನಿಗಾ ಇಡಬಲ್ಲದು.
  • ಶತ್ರುಗಳ ರಾಡಾರ್‌ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಈ ಬೋಟ್ ಕ್ಷಣಾರ್ಧದಲ್ಲಿ ಜಲಗಾಡಿಯಂತೆ ಸಮುದ್ರದ ಆಳಕ್ಕೆ ಮುಳುಗುವ (Submerge) ವಿಶಿಷ್ಟ ವಿನ್ಯಾಸ ಹೊಂದಿದೆ.
  • ಇದರಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸೋನಾರ್, ಎಐ ಕ್ಯಾಮೆರಾಗಳು ಮತ್ತು ಸೆನ್ಸರ್‌ಗಳು ಕತ್ತಲೆಯಲ್ಲೂ ಮೈಲಿಗಳ ದೂರದಲ್ಲಿರುವ ವಸ್ತುವನ್ನು ನಿಖರವಾಗಿ ಗುರುತಿಸಬಲ್ಲವು.

ಇದನ್ನೂ ಓದಿ: ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ

ಮಿಲಿಟರಿ ಇತಿಹಾಸದಲ್ಲೇ ಇಂತಹ ಸಾಗರದಾಳದ ಅತ್ಯಂತ ಅಪಾಯಕಾರಿ ವಲಯದಲ್ಲಿ ಡ್ರೋನ್ ಬೋಟ್ ಬಳಸಿ ಯಶಸ್ವಿಯಾಗಿ ಮಾನವ ಜೀವಗಳನ್ನು ರಕ್ಷಿಸಿರುವುದು ಇದೇ ಮೊದಲು ಎನ್ನಲಾಗಿದೆ. ಈ ಯಶಸ್ಸಿನ ನಂತರ ಯುಎಸ್ ರಕ್ಷಣಾ ಇಲಾಖೆಯು (Pentagon) ವಿಭವ್ ಅಲ್ಟೇಕರ್ ಮತ್ತು ಅವರ ತಂಡದ ತಂತ್ರಜ್ಞಾನವನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ಇದು ಜಾಗತಿಕ ರಕ್ಷಣಾ ತಂತ್ರಜ್ಞಾನ ವಲಯದಲ್ಲಿ ಭಾರತೀಯ ಇಂಜಿನಿಯರ್‌ಗಳ ದಕ್ಷತೆಗೆ ಹಿಡಿದ ಮತ್ತೊಂದು ಕೈಗನ್ನಡಿಯಾಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More