AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ; ಇರಾನ್‌ನಲ್ಲಿ ಹರಡುತ್ತಿದೆ ಸುಪ್ರೀಂ ನಾಯಕನ ಸಾವಿನ ವದಂತಿ

ಇರಾನ್‌ನ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸಾವು ಶೀಘ್ರದಲ್ಲೇ ಸಂಭವಿಸಬಹುದು ಎಂಬ ವದಂತಿಗಳು ಇರಾನ್‌ನ ಉನ್ನತ ಮಟ್ಟದ ಸರ್ಕಾರಿ ವಲಯಗಳಲ್ಲಿ ಹರಡುತ್ತಿವೆ ಎಂದು ವರದಿಯಾಗಿದೆ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವಾಯು ದಾಳಿಯಲ್ಲಿ ತಂದೆ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟ ನಂತರ ಮೊಜ್ತಬಾ ಖಮೇನಿ ಇರಾನ್‌ನ ನೂತನ ಸುಪ್ರೀಂ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಅಥವಾ ಯಾವುದೇ ನೇರ ಭಾಷಣ ಮಾಡಿಲ್ಲ. ತಂದೆಯ ಮೇಲಿನ ದಾಳಿಯ ಸಂದರ್ಭದಲ್ಲಿ ಮೊಜ್ತಬಾ ಅವರು ಗಾಯಗೊಂಡಿದ್ದರು ಹಾಗೂ ಅದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.

ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ; ಇರಾನ್‌ನಲ್ಲಿ ಹರಡುತ್ತಿದೆ ಸುಪ್ರೀಂ ನಾಯಕನ ಸಾವಿನ ವದಂತಿ
mojtaba Image Credit source: AP
ಸುಷ್ಮಾ ಚಕ್ರೆ
|

Updated on: Aug 08, 2026 | 7:20 PM

Share

ಟೆಹ್ರಾನ್, ಆಗಸ್ಟ್ 8: ಇರಾನ್‌ನ ಸುಪ್ರೀಂ ನಾಯಕ (Supreme Leader) ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಒಳಗಿನ ಮೂಲಗಳನ್ನು ಉಲ್ಲೇಖಿಸಿ ಜೆರುಸಲೇಮ್ ಪೋಸ್ಟ್ ಮಾಡಿದ ವರದಿಗಳ ಪ್ರಕಾರ, ಖಮೇನಿ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. “ಸದ್ಯದಲ್ಲೇ ಅವರ ಸಾವಿನ ಸುದ್ದಿ ಕೇಳಿಬಂದರೂ ಆಶ್ಚರ್ಯವಿಲ್ಲ” ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಝೇಶ್ಕಿಯನ್ ಅವರ ಆಡಳಿತದ ಮೂಲವೊಂದು ತಿಳಿಸಿದೆ.

ಇರಾನ್​ನ ಸುಪ್ರೀಂ ನಾಯಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಬಹಳ ಸಮಯದಿಂದ ಚರ್ಚೆಗಳು ನಡೆಯುತ್ತಲೇ ಇವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತೂ ಮೊಜ್ತಬಾ ಖಮೇನಿ ಬದುಕಿರುವ ಸಾಧ್ಯತೆಯೇ ಇಲ್ಲ ಎಂದಿದ್ದರು.

ಈ ವರ್ಷ ಫೆಬ್ರವರಿ 28ರಂದು ನಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಮಿಲಿಟರಿ ದಾಳಿಯಲ್ಲಿ ತಂದೆ ಅಲಿ ಖಮೇನಿ ಮೃತಪಟ್ಟ ನಂತರ ಮೊಜ್ತಬಾ ಇರಾನ್‌ನ ಸುಪ್ರೀಂ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಸಾರ್ವಜನಿಕವಾಗಿ ಒಮ್ಮೆಯೂ ಕಾಣಿಸಿಕೊಂಡಿಲ್ಲ. ಅವರು ಕೇವಲ ಲಿಖಿತ ಹೇಳಿಕೆಗಳ ಮೂಲಕವೇ ಸಂದೇಶ ನೀಡುತ್ತಿದ್ದಾರೆ.

ಇದನ್ನೂ ಓದಿ: ಬಹಿರಂಗವಾಗಿ ಯುದ್ಧದ ಬೆದರಿಕೆ ಹಾಕುತ್ತಿರುವ ಅಮೆರಿಕ ರಹಸ್ಯವಾಗಿ ಸಂಧಾನ ಬಯಸುತ್ತಿದೆ; ಇರಾನ್‌ ಆರೋಪ

ತಂದೆಯ ನಿವಾಸದ ಮೇಲೆ ನಡೆದ ಆರಂಭಿಕ ದಾಳಿಯಲ್ಲೇ ಮೊಜ್ತಬಾ ತೀವ್ರವಾಗಿ ಗಾಯಗೊಂಡಿದ್ದು, ಅವರ ಮುಖ ವಿರೂಪಗೊಂಡಿರುವ ಸಾಧ್ಯತೆಯಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ತಲೆಮರೆಸಿಕೊಂಡಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಮಧ್ಯವರ್ತಿಗಳ ನಿಧಾನಗತಿಯ ನೆಟ್‌ವರ್ಕ್ ಬಳಸುತ್ತಿದ್ದಾರೆ ಎನ್ನಲಾಗಿದೆ. ಅವರ ತಂದೆ ಅಯತೊಲ್ಲಾ ಅಲಿ ಖಮೇನಿಯವರ ಅಂತ್ಯಕ್ರಿಯೆಗೆ ಎಲ್ಲ ದೇಶಗಳ ಪ್ರತಿನಿಧಿಗಳು ಆಗಮಿಸಿದ್ದರೂ ಮೊಜ್ತಬಾ ಖಮೇನಿ ಮಾತ್ರ ಭಾಗಿಯಾಗಿರಲಿಲ್ಲ.

ಈ ನಡುವೆ ಇರಾನ್ ಅಧ್ಯಕ್ಷ ಮಸೌದ್ ಪೆಝೇಶ್ಕಿಯನ್ ಕೂಡ ಸರ್ಕಾರಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ಖಮೇನಿ ಅವರೊಂದಿಗೆ ನೇರ ಸಂಪರ್ಕ ಸಾಧಿಸುವುದು ಪ್ರಸ್ತುತ ಬಹಳ ಕಷ್ಟಕರವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಜುಲೈನಲ್ಲಿ ಸೌದಿ ಮಾಧ್ಯಮ ಸಂಸ್ಥೆ ‘ಅಲ್-ಹದತ್’ ಇಸ್ರೇಲಿ ಭದ್ರತಾ ಮೂಲವನ್ನು ಉಲ್ಲೇಖಿಸಿ ಮೊಜ್ತಬಾ ಖಮೇನಿ ಇರಾನ್‌ನಲ್ಲಿ ಇಲ್ಲ ಎಂದು ವರದಿ ಮಾಡಿತ್ತು. ಅದೇ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಇರಾನ್‌ನ ಉನ್ನತ ಮಿಲಿಟರಿ ನಾಯಕತ್ವವನ್ನು ಅಂತ್ಯಗೊಳಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆಯ ನಂತರ ಖಮೇನಿ ಸಾಯುವ ಹಂತ ತಲುಪಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ‘ಒಪ್ಪಂದ ಮಾಡಿಕೊಳ್ಳಿ ಅಥವಾ ಸಂಪೂರ್ಣ ಶರಣಾಗಿ’; ಇರಾನ್‌ ವಿರುದ್ಧ ಗುಡುಗಿದ ಟ್ರಂಪ್

ಆರಂಭದಲ್ಲಿ ಇರಾನ್‌ನ ಸರ್ಕಾರಿ ಅಧಿಕಾರಿಗಳು ಅವರ ಗಾಯಗಳು ಸಣ್ಣಪುಟ್ಟವು ಎಂದು ಹೇಳಿಕೊಂಡಿದ್ದರು. ಆದರೆ ಅವರು ಸುದೀರ್ಘ ಕಾಲದಿಂದ ನೇರ ಸಾರ್ವಜನಿಕ ಭಾಷಣ ಮಾಡದಿರುವುದು ಅವರ ಆರೋಗ್ಯ ಮತ್ತು ದೇಶದ ನಾಯಕತ್ವದ ಸ್ಥಿರತೆಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅನುಮಾನಗಳನ್ನು ಹುಟ್ಟುಹಾಕಿದೆ. ವಿರೋಧ ಪಕ್ಷಗಳ ಮತ್ತು ವಿರೋಧಿ ದೇಶಗಳ ಗೂಢಚಾರಿ ಮೂಲಗಳು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳುತ್ತಿದ್ದರೆ, ಇರಾನ್ ಅಧಿಕಾರಿಗಳು ಮಾತ್ರ ಅವರು ಇಂದಿಗೂ ದೇಶಕ್ಕೆ ತಾಂತ್ರಿಕ ಮಾರ್ಗದರ್ಶನ ಮತ್ತು ಕಾರ್ಯಾಚರಣೆಯ ನಿರ್ದೇಶನಗಳನ್ನು ನೀಡುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us