ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ಬರೆದ ನಡಿನ್ ಡಿ ಕ್ಲರ್ಕ್
WPL 2026, RCB vs MI: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 154 ರನ್ ಕಲೆಹಾಕಿದರೆ, ಆರ್ಸಿಬಿ 20 ಓವರ್ಗಳಲ್ಲಿ 157 ರನ್ ಬಾರಿಸಿ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ನಡಿನ್ ಡಿ ಕ್ಲರ್ಕ್.
Updated on:Jan 10, 2026 | 7:41 AM

ವುಮೆನ್ಸ್ ಪ್ರೀಮಿಯರ್ ಲೀಗ್‌ನ 4ನೇ ಸೀಸನ್ ಶುರುವಾಗಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಈ ಶಭಾರಂಭದ ಕಾರಣಕರ್ತರು ನಡಿನ್ ಡಿ ಕ್ಲರ್ಕ್ (Nadine de Klerk).

ಈ ಪಂದ್ಯದಲ್ಲಿ 4 ಓವರ್ ಎಸೆದಿದ್ದ ನಡಿನ್ ಡಿ ಕ್ಲರ್ಕ್ ಕೇವಲ 26 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು. ಇದಾದ ಬಳಿಕ ಏಕಾಂಗಿ ಹೋರಾಟದೊಂದಿಗೆ ಆರ್ ಸಿಬಿ ತಂಡಕ್ಕೆ ರೋಚಕ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾದರು.

ಸಂಪೂರ್ಣ ಮುಂಬೈ ಇಂಡಿಯನ್ಸ್ ಪರ ವಾಲಿದ್ದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ನಡಿನ್ 44 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ ಅಜೇಯ 63 ರನ್ ಬಾರಿಸಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ 2 ಸಿಕ್ಸ್ ಹಾಗೂ 2 ಫೋರ್ ಬಾರಿಸುವ ಮೂಲಕ RCB ತಂಡಕ್ಕೆ 3 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು.

ಈ ಗೆಲುವಿನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ತಂಡವೊಂದರ ಪರ ಪಾದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಹಾಗೂ 4 ವಿಕೆಟ್ ಕಬಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಮೂಲಕ ಆರ್ ಸಿಬಿ ಪರ ಕಣಕ್ಕಿಳಿದ ಚೊಚ್ಚಲ ಪಂದ್ಯದಲ್ಲೇ ನಡಿನ್ ಭರ್ಜರಿ ದಾಖಲೆ ಬರೆದಿದ್ದಾರೆ.

ಅಷ್ಟೇ ಅಲ್ಲದೇ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯದ ಕೊನೆಯ ಓವರ್‌ನಲ್ಲಿ ಅತ್ಯಧಿಕ ರನ್ ಬಾರಿಸಿ ಪಂದ್ಯ ಗೆಲ್ಲಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಗ್ರೇಸ್ ಹ್ಯಾರಿಸ್. 2023ರ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ಪರ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ ಕೊನೆಯ ಓವರ್‌ನಲ್ಲಿ 19 ರನ್ ಬಾರಿಸಿ ಪಂದ್ಯ ಗೆಲ್ಲಿಸಿದ್ದರು. ಇದೀಗ ಕೊನೆಯ ಓವರ್‌ನಲ್ಲಿ 18 ರನ್ ಚಚ್ಚುವ ಮೂಲಕ ನಡಿನ್ ಡಿ ಕ್ಲರ್ಕ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
Published On - 7:40 am, Sat, 10 January 26
