PSL 2026: ‘ಅಲ್ಲಿಗೆ ಹೋಗಲೇಬೇಡಿ’; ಪಾಕಿಸ್ತಾನ ಸೂಪರ್ ಲೀಗ್ ನಡೆಯುವುದು ಅನುಮಾನ
PSL 2026 cancellation: ಪಾಕಿಸ್ತಾನ ಸೂಪರ್ ಲೀಗ್ 2026 ಪಾಕ್-ಅಫ್ಘಾನ್ ಸಂಘರ್ಷದಿಂದ ರದ್ದಾಗುವ ಭೀತಿಯಲ್ಲಿದೆ. ಐಪಿಎಲ್ ವೇಳಾಪಟ್ಟಿ ಘರ್ಷಣೆ, ಪಾಕಿಸ್ತಾನದ ವಾಯುದಾಳಿಗಳಿಂದ ಉದ್ವಿಗ್ನತೆ ಹೆಚ್ಚಾಗಿದೆ. ಆಸ್ಟ್ರೇಲಿಯಾ ಆಟಗಾರರ ಭದ್ರತೆ ಪ್ರಶ್ನಾರ್ಥಕವಾಗಿದೆ. ಪೇಶಾವರ್, ರಾವಲ್ಪಿಂಡಿ ನಗರಗಳು ಅಪಾಯದಲ್ಲಿದ್ದು, ಪಿಎಸ್‌ಎಲ್ ಮುಂದೂಡಿದರೆ ಅಥವಾ ರದ್ದಾದರೆ ಪಿಸಿಬಿಗೆ ಕೋಟಿ ರೂಪಾಯಿ ನಷ್ಟ ಖಚಿತ.

ಭಾರತದಲ್ಲಿ ನಡೆಯುವ ಐಪಿಎಲ್ಗೆ (IPL) ಸೆಡ್ಡು ಹೊಡೆಯುವ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನ ಸೂಪರ್ ಲೀಗ್ (PSL) ಅನ್ನು ಐಪಿಎಲ್ ಆರಂಭವಾಗುವ ಸಮಯದಲ್ಲೇ ನಡೆಸಲು ಮುಂದಾಗಿದೆ. ಅದರಂತೆ 2026 ರ ಐಪಿಎಲ್ ಮಾರ್ಚ್ 28 ರಿಂದ ಆರಂಭವಾದರೆ, ಅದಕ್ಕೂ ಎರಡು ದಿನ ಮೊದಲು ಅಂದರೆ ಮಾರ್ಚ್ 26 ರಂದು ಪಾಕಿಸ್ತಾನ ಸೂಪರ್ ಲೀಗ್ ಆರಂಭಿಸಲು ಪಿಸಿಬಿ ತೀರ್ಮಾನಿಸಿತ್ತು. ಆದರೆ ಈ ಲೀಗ್ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ನಿರಂತರವಾಗಿ ನಡೆಯುತ್ತಿರುವ ಸಂಘರ್ಷ.
ವಾಸ್ತವವಾಗಿ ಮಾರ್ಚ್ 16 ರಂದು ಪಾಕಿಸ್ತಾನ, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವೈಮಾನಿಕ ದಾಳಿ ನಡೆಸಿ 400 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಎಂದು ವರದಿಯಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಈ ದಾಳಿಯು ಎರಡು ದೇಶಗಳ ನಡುವೆ ಯುದ್ಧದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಸರ್ಕಾರ ತನ್ನ ನಾಗರಿಕರು ಮತ್ತು ಆಟಗಾರರಿಗೆ ಪಾಕಿಸ್ತಾನದ ಪ್ರಮುಖ ನಗರಗಳಿಗೆ ಪ್ರಯಾಣಿಸದಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಪಿಎಸ್‌ಎಲ್ ನಡೆಯುವುದು ಅನುಮಾನ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಈ ಸಂಘರ್ಷ, ಪಿಎಸ್‌ಎಲ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಏಕೆಂದರೆ ಪಾಕಿಸ್ತಾನದ ಮೇಲೆ ಅಫ್ಘಾನಿಸ್ತಾನ ಪ್ರತಿಕಾರ ತೀರಿಸಿಕೊಳ್ಳದೆ ಬಿಡದು. ಆದ್ದರಿಂದ ಪಾಕಿಸ್ತಾನ ಸೂಪರ್ ಲೀಗ್ ನಡೆಯುವ ನಗರಗಳ ಮೇಲೆ ಅಫ್ಘಾನಿಸ್ತಾನ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಇದನ್ನು ಮನಗಂಡಿರುವ ಆಸ್ಟ್ರೇಲಿಯಾ ಸರ್ಕಾರ, ಪಿಎಸ್‌ಎಲ್‌ನಲ್ಲಿ ಆಡುವ ಆಸ್ಟ್ರೇಲಿಯಾ ಆಟಗಾರರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡಿದೆಯಾದರೂ, ದಾಳಿ ನಡೆಯಬಹುದಾಂತಹ ಸ್ಥಳಗಳಿಗೆ ಹೋಗದಂತೆ ಎಚ್ಚರಿಕೆ ನೀಡಿದೆ.
ಪಿಎಸ್‌ಎಲ್‌ನಲ್ಲಿ ಆಸ್ಟ್ರೇಲಿಯಾದ ಅನೇಕ ಪ್ರಮುಖ ಆಟಗಾರರು ಆಡಲಿದ್ದಾರೆ. ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ರಂತಹ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಗೆ ತರಬೇತಿ ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಹಲವಾರು ಆಸ್ಟ್ರೇಲಿಯಾದ ನಾಗರಿಕರು ಇದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಸರ್ಕಾರದ ಎಚ್ಚರಿಕೆಯನ್ನು ಅನುಸರಿಸಿ ಇವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಹೈದರಾಬಾದ್ ತಂಡಕ್ಕೆ ಮಾರ್ನಸ್ ಲಬುಶೇನ್ ನಾಯಕ
ಪಂದ್ಯಗಳು ನಡೆಯುವ ನಗರಗಳು ಟಾರ್ಗೆಟ್
ಮೇಲೆ ಹೇಳಿದಂತೆ ಪ್ರತೀಕಾರಕ್ಕಾಗಿ ಕಾಯುತ್ತಿರುವ ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಬಹುದು. ಅದರಲ್ಲೂ ಪೇಶಾವರ್ ಮತ್ತು ರಾವಲ್ಪಿಂಡಿ ನಗರಗಳು ಅಫ್ಘಾನಿಸ್ತಾನದ ಟಾರ್ಗೆಟ್ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ರಾವಲ್ಪಿಂಡಿಯಲ್ಲಿ 11 ಪಿಎಸ್‌ಎಲ್ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಹೀಗಾಗಿ ಆಸ್ಟ್ರೇಲಿಯಾದ ಆಟಗಾರರು ಇದ್ದಕ್ಕಿದ್ದಂತೆ ಪಿಎಸ್‌ಎಲ್‌ನಿಂದ ಹಿಂದೆ ಸರಿದರೆ, ಪಿಎಸ್‌ಎಲ್ ಅನ್ನು ಮುಂದೂಡಬಹುದು, ಏಕೆಂದರೆ ಅನೇಕ ತಂಡಗಳು ಪ್ರಮುಖ ಆಸ್ಟ್ರೇಲಿಯಾದ ಆಟಗಾರರನ್ನು ಹೊಂದಿವೆ. ಹಲವಾರು ಆಟಗಾರರು ಈಗಾಗಲೇ ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದಾರೆ. ಐಪಿಎಲ್‌ನಲ್ಲಿ ಆಡಲು ಹಲವಾರು ಆಟಗಾರರು ಪಿಎಸ್‌ಎಲ್ ಅನ್ನು ತೊರೆದಿದ್ದಾರೆ. ಒಂದು ವೇಳೆ ಪಿಎಸ್‌ಎಲ್ ರದ್ದಾದರೆ ಅಥವಾ ಮುಂದೂಡಿದರೆ, ಪಿಸಿಬಿ ಕೋಟ್ಯಾಂತರ ರೂಪಾಯಿಗಳ ನಷ್ಟ ಅನುಭವಿಸುವುದು ಖಚಿತ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Tue, 17 March 26
