Paris Olympics 2024: 12 ವರ್ಷಗಳ ವನವಾಸ; ಕಂಚು ಗೆದ್ದ ಸ್ವಪ್ನಿಲ್ಗೆ ಧೋನಿಯೇ ಸ್ಫೂರ್ತಿ
Paris Olympics 2024: ಕಾಕತಾಳೀಯ ಸಂಗತಿಯೆಂದರೆ ಧೋನಿ ಕೂಡ ರೈಲ್ವೇಯಲ್ಲಿ ಟಿಸಿ ಆಗಿ ತನ್ನ ವೃತ್ತಿ ಜೀವನ ಆರಂಭಿಸಿದ್ದು, ಕುಸಾಲೆ ಕೂಡ ಸೆಂಟ್ರಲ್ ರೈಲ್ವೇಯಲ್ಲಿ ಟಿಸಿ ಆಗಿ ಸೇವೆ ಸಲ್ಲಿಸಿದ್ದಾರೆ. ಆದಾಗ್ಯೂ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ಮನು ಭಾಕರ್ ನನಗೆ ಸ್ಫೂರ್ತಿಯಾದರು ಎಂದು ಕುಸಾಲೆ ಹೇಳಿದ್ದಾರೆ.
ಸ್ವಪ್ನಿಲ್ ಕುಸಾಲೆ…ಈ ಹೆಸರು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. 28 ವರ್ಷದ ಸ್ವಪ್ನಿಲ್ ಕುಸಾಲೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಯಾವ ಭಾರತೀಯನೂ ಮಾಡದ ಸಾಧನೆ ಮಾಡಿದ್ದಾರೆ. ಮಹಾರಾಷ್ಟ್ರದ ಈ ಶೂಟರ್ 50 ಮೀಟರ್ ರೈಫಲ್ ಫೈನಲ್ನಲ್ಲಿ ಒಟ್ಟು 451.4 ಅಂಕಗಳನ್ನು ಸಂಪಾಧಿಸುವ ಮೂಲಕ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಫೈನಲ್ಗೂ ಮುನ್ನ ನಡೆಸ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನದಲ್ಲಿದ್ದ ಸ್ವಪ್ನಿಲ್, 8 ಸ್ಪರ್ಧಿಗಳ ನಡುವೆ ನಡೆದ ಫೈನಲ್ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಇಂದು ಇಡೀ ದೇಶವೇ ಸ್ವಪ್ನಿಲ್ ಕುಸಾಲೆ ಅವರ ಸಾಧನೆಯನ್ನು ಕೊಂಡಾಡುತ್ತಿದೆ. ಆದರೆ ಈ ಯಶಸ್ಸಿನ ಹಿಂದೆ ಸ್ವಪ್ನಿಲ್ ಅವರ 12 ವರ್ಷಗಳ ಶ್ರಮವಿದೆ.
ಸ್ವಪ್ನಿಲ್ ಕುಸಾಲೆ ಹೋರಾಟ
ಇಂದು ಒಲಿಂಪಿಕ್ಸ್ ಪದಕಕ್ಕೆ ಮುತ್ತಿಟ್ಟಿರುವ ಸ್ವಪ್ನಿಲ್ ಕುಸಾಲೆ, ಈ ಮಹಾ ಕ್ರೀಡಾಕೂಡಕ್ಕೆ ಅರ್ಹತೆ ಪಡೆಯಲು ಬರೋಬ್ಬರಿ 12 ವರ್ಷಗಳ ಕಾಲ ಕಾಯಬೇಕಾಯಿತು. 2012 ರಿಂದ ವೃತ್ತಿಪರ ಶೂಟಿಂಗ್ ಆರಂಭಿಸಿದ ಸ್ವಪ್ನಿಲ್, ಕಳೆದ ಎರಡು ಒಲಿಂಪಿಕ್ಸ್ಗಳಲ್ಲಿ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ ತನ್ನ ಹೋರಾಟ ಬಿಡದ ಸ್ವಪ್ನಿಲ್, ತನ್ನ ಪ್ರಯತ್ನವನ್ನು ಮುಂದುವರೆಸಿ ಇದೀಗ ಇತಿಹಾಸ ನಿರ್ಮಿಸಿದ್ದಾರೆ. ಕುಸಾಲೆ ಕಳೆದ 10-12 ವರ್ಷಗಳಿಂದ ಮನೆಯಿಂದ ದೂರವಿದ್ದು, ಶೂಟಿಂಗ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಪ್ನಿಲ್ ಅವರ ತಂದೆ, ತನ್ನ ಮಗ ತನ್ನ ಕುಟುಂಬದಿಂದ ದೂರ ಉಳಿದಿದ್ದು, ಈ ಸಾಧನೆ ಮಾಡಿರುವುದು ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ.
Exceptional performance by Swapnil Kusale! Congrats to him for winning the Bronze medal in the Men’s 50m Rifle 3 Positions at the #ParisOlympics2024.
His performance is special because he’s shown great resilience and skills. He is also the first Indian athlete to win a medal in… pic.twitter.com/9zvCQBr29y
— Narendra Modi (@narendramodi) August 1, 2024
ಸ್ವಪ್ನಿಲ್ಗೆ ಧೋನಿಯೇ ಸ್ಫೂರ್ತಿ
ವಿಶೇಷವೆಂದರೆ ಸ್ವಪ್ನಿಲ್ ಕುಸಾಲೆ, ಕ್ಯಾಪ್ಟನ್ ಕೂಲ್ ಧೋನಿಯ ದೊಡ್ಡ ಅಭಿಮಾನಿ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕುಸಾಲ್, ಶೂಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಲು ನಾನು ಧೋನಿಯಿಂದ ಸ್ಫೂರ್ತಿ ಪಡೆದಿದ್ದೇನೆ. ಶೂಟಿಂಗ್ನಲ್ಲಿ ನಾನು ಯಾವುದೇ ಆಟಗಾರರನ್ನು ನನ್ನ ಫೆವರೇಟ್ ಎಂದು ಪರಿಗಣಿಸಿಲ್ಲ. ಆದರೆ ಇತರ ಕ್ರೀಡೆಗಳಲ್ಲಿ ಧೋನಿ ನನ್ನ ನೆಚ್ಚಿನ ಆಟಗಾರ. ಶೂಟಿಂಗ್ ವೇಳೆ ಶಾಂತವಾಗಿರುವುದು ಮುಖ್ಯ ಮತ್ತು ಧೋನಿಯ ಈ ಗುಣ ನನಗೆ ತುಂಬಾ ಇಷ್ಟ ಎಂದು ಕುಸಾಲೆ ಹೇಳಿದ್ದಾರೆ.
ಮನು ಬಾಕರ್ ಅವರಿಂದ ಆತ್ಮವಿಶ್ವಾಸ ಹೆಚ್ಚಿತು
ವಾಸ್ತವವಾಗಿ ಇನ್ನೊಂದು ಕಾಕತಾಳೀಯ ಸಂಗತಿಯೆಂದರೆ ಧೋನಿ ಕೂಡ ರೈಲ್ವೇಯಲ್ಲಿ ಟಿಸಿ ಆಗಿ ತನ್ನ ವೃತ್ತಿ ಜೀವನ ಆರಂಭಿಸಿದ್ದು, ಕುಸಾಲೆ ಕೂಡ ಸೆಂಟ್ರಲ್ ರೈಲ್ವೇಯಲ್ಲಿ ಟಿಸಿ ಆಗಿ ಸೇವೆ ಸಲ್ಲಿಸಿದ್ದಾರೆ. ಆದಾಗ್ಯೂ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ಮನು ಭಾಕರ್ ನನಗೆ ಸ್ಫೂರ್ತಿಯಾದರು ಎಂದು ಕುಸಾಲೆ ಹೇಳಿದ್ದಾರೆ. ಮನುಭಾಕರ್ ಅವರನ್ನು ನೋಡಿ ನನ್ನ ಆತ್ಮವಿಶ್ವಾಸ ಹೆಚ್ಚಿತು. ಮನು ಅವರಿಗೆ ಪದಕ ಗೆಲ್ಲಲು ಸಾಧ್ಯವಾದರೆ ನನಗ್ಯಾಕೆ ಸಾಧ್ಯವಿಲ್ಲ ಎಂಬುದನ್ನು ಆಲೋಚಿಸಿದೆ. ಅದರಂತೆ ನಾನು ಕೂಡ ಪದಕ ಗೆಲ್ಲುವಲ್ಲಿ ಯಶಸ್ವಿಯಾದೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Thu, 1 August 24