ವಿನೇಶ್ ಫೋಗಟ್ ಅನರ್ಹ: ಇದು ದೇಶಕ್ಕೆ ನಷ್ಟ ಎಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ಪುತ್ರ ಕರಣ್ ಭೂಷಣ್
ವಿನೇಶ್ ಫೋಗಟ್ ಅನರ್ಹಗೊಂಡ ನಂತರ ಬ್ರಿಜ್ ಭೂಷಣ್ ಶರಣ್ ಸಿಂಗ್ ಪುತ್ರ ಕರಣ್ ಭೂಷಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ಹೊತ್ತುಕೊಂಡಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮಗ ಈ ಬಗ್ಗೆ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ? ಅವರ ಪ್ರತಿಕ್ರಿಯೆ ಏನಿತ್ತು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಪ್ಯಾರಿಸ್ ಒಲಿಂಪಿಕ್ಸ್ 2024ರ ಕುಸ್ತಿ ಪಂದ್ಯದಲ್ಲಿ ಅನರ್ಹವಾಗಿರುವ ವಿನೇಶ್ ಫೋಗಟ್ ಬಗ್ಗೆ ಕೈಸರ್‌ಗಂಜ್‌ನ ಸಂಸದ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ದೇಶಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ. ಈ ಬಗ್ಗೆ ಫೆಡರೇಶನ್ ಪರಿಗಣನೆಗೆ ತೆಗೆದುಕೊಂಡು ಏನು ಮಾಡಬಹುದು ಎಂಬ ಬಗ್ಗೆ ಚಿಂತನೆ ನಡೆಸುತ್ತದೆ ಎಂದು ಹೇಳಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳಾ ಕುಸ್ತಿ ಪಂದ್ಯದ 50 ಕೆಜಿ ವಿಭಾಗದಲ್ಲಿ ಫೈನಲ್‌ಗೆ ತಲುಪಿದ್ದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸುವು ಭಾರತಕ್ಕೆ ಭಾರಿ ಹಿನ್ನಡೆಯಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಕೂಡ ಮಾತನಾಡಿದ್ದಾರೆ. ಇದು ಆಘಾತಕಾರಿಯಾಗಿದೆ. ನೀವು ನಮ್ಮ ದೇಶದ ಹೆಮ್ಮೆ ಎಂದು ವಿನೇಶ್ ಫೋಗಟ್ ಪರ ನಿಂತಿದ್ದಾರೆ. ಇನ್ನು ಮೋದಿ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರ ಜತೆಗೂ ಮಾತನಾಡಿದ್ದಾರೆ. ಪಿಟಿ ಉಷಾ ಕೂಡ ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ.
ವಿನೇಶ್ ಫೋಗಟ್ ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಈ ಪ್ರಕರಣದಿಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾರೀ ಮುಜುಗರವನ್ನು ತಂದಿತ್ತು. ಆ ನಂತರ ಅವರನ್ನು ಪಕ್ಷದಿಂದ ದೂರು ಇಟ್ಟು, ಅವರ ಮಗನಿಗೆ ಟಿಕೆಟ್ ನೀಡಲಾಗಿತ್ತು ಇದೀಗ ಅವರು ಸಂಸದರಾಗಿದ್ದಾರೆ.
ಇದನ್ನೂ ಓದಿ: ವಿನೇಶ್ ಫೋಗಟ್ ಅನರ್ಹ; ಐಒಎ ಅಧ್ಯಕ್ಷೆ ಪಿಟಿ ಉಷಾ ಮೊದಲ ಪ್ರತಿಕ್ರಿಯೆ
ವಿನೇಶ್ ಫೋಗಟ್ ಅವರು ಅನರ್ಹಗೊಂಡ ನಂತರ ಅವರ ಆರೋಗ್ಯದಲ್ಲಿ ವ್ಯಾತ್ಯಾಸ ಕಂಡು ಬಂದಿದೆ. ಇದೀಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಪಿಟಿ ಉಷಾ ಅವರು ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಇನ್ನು ಮುಂದಿನ ನಿರ್ಧಾರಗಳು ಏನು ಎಂಬ ಬಗ್ಗೆ ಕಾದು ನೋಡಬೇಕಿದೆ ಎಂದು ಹೇಳಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Wed, 7 August 24