Amul : ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಹಠಾತ್ ಸಾವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಸೆಪ್ಟೆಂಬರ್ 4 ರಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಅವರ ಮರ್ಸಿಡಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಈ ಪ್ರಯುಕ್ತ ‘ಅಮುಲ್’ ಕಂಪೆನಿಯು ಸೋಮವಾರದಂದು ಸಾಮಾಜಿಕ ಜಾಲತಾಣದಲ್ಲಿ ಮಿಸ್ತ್ರಿಯವರಿಗೆ ಗೌರವವನ್ನು ಅರ್ಪಿಸಿದೆ. ಕಪ್ಪುಬಿಳುಪಿನ ಡೂಡಲ್ ಅನ್ನು ಅಮುಲ್ ಇಂಡಿಯಾ ಹಂಚಿಕೊಂಡಿದೆ. ‘ಅವರು ಇನ್ನೂ ಮೈಲುಗಳಷ್ಟು ದೂರ ಪ್ರಯಾಣಿಸಬೇಕಿತ್ತು, 1968-2022’ ಎಂಬ ಶಿರ್ಷಿಕೆಯೊಂದಿಗೆ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ.
ಮಿಸ್ತ್ರಿ ಅವರ ಜೊತೆಗೆ ಜಹಾಂಗೀರ್ ಪಾಂಡೋಲ್, ಅನಾಹಿತಾ ಪಾಂಡೋಲ್ ಮತ್ತು ಡೇರಿಯಸ್ ಪಾಂಡೋಲ್ ಆ ದಿನ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಡೇರಿಯಸ್ ಅವರ ಸಹೋದರ ಜಹಾಂಗೀರ್ ಈ ಅಪಘಾತದಲ್ಲಿ ಸಾವನ್ನಪ್ಪಿದ ಇನ್ನೋರ್ವ ವ್ಯಕ್ತಿ. ಡೇರಿಯಸ್ ಪಾಂಡೋಲ್ ಟಾಟಾ ಸಮೂಹ ಸಂಸ್ಥೆಗಳಲ್ಲಿ ನಿರ್ದೇಶಕರಾಗಿದ್ದರು ಮತ್ತು ಮಿಸ್ತ್ರಿ ಅವರನ್ನು ಕಂಪನಿಯ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸುವ ವಿಷಯಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಮಿಸ್ತ್ರಿ ಟಾಟಾ ಸಮೂಹ ತೊರೆದಾಗ ಡೇರಿಯಸ್ ಕೂಡ ಅವರೊಂದಿಗೆ ಅಲ್ಲಿಂದ ನಿರ್ಗಮಿಸಿದರು.
ಅನಾಹಿತಾ, ಡೇರಿಯಸ್ ಅವರ ಪತ್ನಿ. ಮುಂಬೈನ ಖ್ಯಾತ ಸ್ತ್ರೀರೋಗ ತಜ್ಞೆ. ಅವರೇ ಕಾರು ಚಲಾಯಿಸುತ್ತಿದ್ದರು. ಈ ಸ್ಥಳದಲ್ಲಿದ್ದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾದ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ ಮತ್ತು ವಿಶ್ಲೇಷಿಸುತ್ತಿದ್ದಾರೆ. ಕಾರಿನಲ್ಲಿ ಯಾವುದೇ ಯಾಂತ್ರಿಕ ದೋಷಗಳಿವೆಯೇ ಎಂದೂ ತನಿಖೆ ನಡೆಸುತ್ತಿದ್ದಾರೆ. ವಾಹನದಲ್ಲಿ ಅಳವಡಿಸುವ ಚಿಪ್ ಅನ್ನು ವಶಕ್ಕೆ ಪಡೆದುಕೊಂಡು ಅದರೊಳಗಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:01 pm, Tue, 6 September 22