ಫೇಸ್ಬುಕ್ನಲ್ಲಿ ಮಹಾರಾಜಾ ಭೋಗ್ ಥಾಲಿ ಆರ್ಡರ್ ಮಾಡಿದ ಮಹಿಳೆಗೆ ರೂ. 8,46,00 ವಂಚನೆ
Facebook Fraud : ‘ಭೋಗ್ ಥಾಲಿ ಕೇವಲ ರೂ. 200!’ ಜಾಹೀರಾತಿಗೆ ಮರುಳಾದ ಮುಂಬೈನ ಮಹಿಳೆ ಫೇಸ್ಬುಕ್ನ ಮೂಲಕ ಲಿಂಕ್ ಪ್ರವೇಶಿಸಿದ್ದಾರೆ. ನಂತರ ಆಕೆ ಹಂತಹಂತವಾಗಿ ಹೇಗೆ ವಂಚನೆಗೆ ಒಳಗಾಗುತ್ತ ಹೋದರು ಎನ್ನುವುದನ್ನು ಪೂರ್ತಿ ಓದಿ .
Trending : ಹಬ್ಬಹರಿದಿನಗಳು ಬರುತ್ತಿದ್ದಂತೆ ಆನ್ಲೈನ್ ಮಾರಾಟಗಳ ಭರಾಟೆ ಹೆಚ್ಚುತ್ತದೆ. ಉಚಿತ ಮತ್ತು ರಿಯಾಯ್ತಿ ಎಂಬ ಮಾಯೆಯೊಳಗಿನಿಂದ ಗ್ರಾಹಕರನ್ನು ಆಕರ್ಷಿಸಿಕೊಳ್ಳುವುದರತ್ತ ಸಾಕಷ್ಟು ಸಾಮಾಜಿಕ ಜಾಲತಾಣಗಳ ಪುಟಗಳು, ಅಪ್ಲಿಕೇಸನ್, ವೆಬ್ಗಳು ಯಶಸ್ವಿಯೂ ಆಗುತ್ತವೆ. ಸುಲಭದಲ್ಲಿ ಹಬ್ಬದ ದಿನಗಳನ್ನು ಕಳೆಯಲು ಅನುಕೂಲವಾಯಿತೆಂದು ಗ್ರಾಹಕರೂ ಸಂತಸಪಡುತ್ತಾರೆ. ಆದರೆ ಗ್ರಾಹಕರ ಬೇಡಿಕೆ, ಮುಗ್ಧತೆ, ಅರಿವಿನ ಕೊರತೆಯನ್ನೇ ಉಪಯೋಗಿಸಿಕೊಂಡು ಇಂಥ ಅವಕಾಶಗಳನ್ನು ದುರುಪಯೋಗಪಡಿಸಿಕೊಳ್ಳಲು ಕೆಲ ವಂಚಕರು ಹೊಂಚು ಹಾಕುತ್ತಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಂತಿದೆ ಬುಧವಾರ ನಡೆದ ಈ ಮಹಾರಾಜಾ ಭೋಗ್ ಥಾಲಿ ಪ್ರಕರಣ. ಫೇಸ್ಬುಕ್ ಪುಟದ ಮೂಲಕ ಮುಂಬೈ ಮೂಲದ ಮಹಿಳೆಯೊಬ್ಬರು ರೂ. 8,46,000 ವಂಚನೆಗೆ ಒಳಗಾಗಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, 54 ವರ್ಷದ ಮಹಿಳೆಯೊಬ್ಬರು ಫೇಸ್ಬುಕ್ನಲ್ಲಿ ಮಹಾರಾಜಾ ಭೋಗ್ ಥಾಲಿ ಕೇವಲ ರೂ. 200 ಎಂಬ ಜಾಹೀರಾತಿಗೆ ಮರುಳಾಗಿ ಆರ್ಡರ್ ಮಾಡಿದ್ದಾರೆ. ಇದೀಗ ಪ್ರಕರಣ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ವಂಚಕರ ಜಾಲವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ.
ಸದರಿ ಮಹಿಳೆ ತನ್ನ ಸಹೋದರನೊಂದಿಗೆ ಮುಂಬೈನಲ್ಲಿ ವಾಸವಾಗಿದ್ದಾರೆ. ಬುಧವಾರ ಮಧ್ಯಾಹ್ನ ಭೋಗ್ ಥಾಲಿ ಜಾಹೀರಾತಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆರ್ಡರ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಮಹಾರಾಜಾ ಭೋಗ್ ಥಾಲಿ ವೆಬ್ಸೈಟ್ನಲ್ಲಿ ಬ್ಯಾಂಕ್ ವಿವರ, ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದಾರೆ. ನಂತರ ವ್ಯಕ್ತಿಯೊಬ್ಬ ಫೋನ್ ಮಾಡಿ ಮತ್ತೊಂದು ಲಿಂಕ್ ಕಳಿಸಿದ್ದಾನೆ. ಅದರಲ್ಲಿ ಡೆಬಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಲು ಕೇಳಿಕೊಂಡಿದ್ದಾನೆ. ಅದೇ ಸಮಯಕ್ಕೆ ಇನ್ನೊಬ್ಬ ವ್ಯಕ್ತಿ ಫೋನ್ ಮಾಡಿ, ಪಾರ್ಸೆಲ್ ತಲುಪಿಸುವ ಮೊದಲು, ಝೋಹೋ ಅಸಿಸ್ಟ್ ಅಪ್ಲಿಕೇಷನ್ ಇನ್ಸ್ಟಾಲ್ ಮಾಡಿಕೊಳ್ಳಲು ತಿಳಿಸಿದ್ದಾನೆ. ಆ ಪ್ರಕಾರ ಆಕೆ ಮುಂದುವರಿದಿದ್ದಾರೆ. ವಂಚಕರಿಗೆ ಇನ್ನು ಅವಳ ಬ್ಯಾಂಕ್ ಖಾತೆಯನ್ನು ಈ ಆ್ಯಪ್ ಮೂಲಕ ಜಾಲಾಡುವುದು ಸುಲಭವಾಗಿದೆ.
ಆನಂತರ ವಂಚಕ 27 ಸಲ ಆಕೆಯ ಆಕೌಂಟ್ನಿಂದ ತನ್ನ ಅಕೌಂಟಿಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಆ ಹಣದ ಒಟ್ಟು ಮೊತ್ತ ರೂ. 8,64,000! ಮರುದಿನ ಈ ಬಗ್ಗೆ ಆಕೆಯ ಗಮನ ಹೋಗಿದೆ. ರೂ. 200 ಆನ್ಲೈನ್ ಆರ್ಡರ್ ಮಾಡಲು ಹೋಗಿ ಏನೆಲ್ಲಾ ಘಟಿಸಿದೆ ಎನ್ನುವುದು ನಿಧಾನವಾಗಿ ಅರಿವಿಗೆ ಬಂದಿದೆ. ತಕ್ಷಣವೇ ವಂಚಕರ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.
ಆನ್ಲೈನ್ ವಂಚಕರಿಂದ ದೂರವಿರಿ
ಯಾವುದೇ ಆನ್ಲೈನ್ ಆ್ಯಪ್, ಸೋಶಿಯಲ್ ಮೀಡಿಯಾದಲ್ಲಿ ಕೊಟ್ಟ ಲಿಂಕ್, ವೆಬ್ ಮೂಲಕ ನೀವು ಏನಾದರೂ ಆರ್ಡರ್ ಮಾಡುವ ಮೊದಲು ಬಹಳ ಎಚ್ಚರಿಕೆ ವಹಿಸಿ. ನಿಮ್ಮ ಬ್ಯಾಂಕ್ ಖಾತೆಯ ವಿವರ, ಡೆಬಿಟ್ ಕಾರ್ಡ್ ವಿವರಗಳನ್ನು ಎಂದೂ ನಮೂದಿಸಬೇಡಿ. ನಿಮ್ಮ ಮೊಬೈಲ್ನಲ್ಲಿ ಅಪ್ಲಿಕೇಷನ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವಾಗ ಹುಷಾರು. ಇನ್ನು ಉಚಿತ, ರಿಯಾಯ್ತಿ ಇತ್ಯಾದಿ ಆಕರ್ಷಣೆಗಳ ಬಗ್ಗೆಯಂತೂ ಬಹಳೇ ಎಚ್ಚರದಿಂದಿರಿ!
ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:28 pm, Fri, 21 October 22