Assam Tea: ನೀವು ಚಹಾ ಪ್ರಿಯರಾ?; 1 ಲಕ್ಷ ರೂ.ಗೆ ಮಾರಾಟವಾಯ್ತು ಅಪರೂಪದ ಅಸ್ಸಾಂ ಟೀ!
Pabhojan Gold Tea: ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಪಭೋಜನ್ ಗೋಲ್ಡ್ ಟೀ ಎಂಬ ಅಪರೂಪದ ಸಾವಯವ ಚಹಾ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಸೋಮವಾರ ಜೋರ್ಹತ್‌ನ ಹರಾಜು ಕೇಂದ್ರದಲ್ಲಿ 1 ಕೆಜಿ ಚಹಾ ಪುಡಿಯನ್ನು 1 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ.
ಗುವಾಹಟಿ: ನೀವು ಚಹಾ (Chai) ಪ್ರಿಯರೇ? ಕೆಲವರಿಗೆ ಬೆಳಗ್ಗೆ ಎದ್ದಕೂಡಲೆ ಒಂದು ಕಪ್ ಕಾಫಿ ಕುಡಿಯದಿದ್ದರೆ ದಿನ ಆರಂಭವಾಗುವುದೇ ಇಲ್ಲ. ಇನ್ನು ಕೆಲವರಿಗೆ ದಿನವಿಡೀ ಚಹಾ (Tea) ಕುಡಿದರೂ ಸಮಾಧಾನವಾಗುವುದಿಲ್ಲ. ಬೆಳಗ್ಗೆ ಎದ್ದಕೂಡಲೆ ಒಂದು ಕಪ್ ಚಹಾ ಕುಡಿದರೆ ಆ ದಿನಪೂರ್ತಿ ಉಲ್ಲಾಸದಿಂದ ಇರುತ್ತದೆ ಎಂಬ ನಂಬಿಕೆ ಹಲವರದ್ದು. ನೀವು ಕೂಡ ಆ ಪೈಕಿ ಜನರಲ್ಲಿ ಒಬ್ಬರಾಗಿದ್ದರೆ ನಿಮಗಾಗಿ ಒಂದು ವಿಶೇಷವಾದ ಚಹಾದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
ಸಾಮಾನ್ಯವಾಗಿ ನೀವು ದಿನಾ ಕುಡಿಯುವ ಚಹಾದ ಬೆಲೆ ಎಷ್ಟು? ಒಂದು ಕೆಜಿ ಚಹಾ ಪುಡಿಗೆ 200 ರೂ.? 400 ರೂ.? 800 ರೂ? ಅಥವಾ ನೀವು ದುಬಾರಿ ಟೀ ಪುಡಿಯನ್ನೇ ಬಳಸುವವರಾದರೆ ಬಹುಶಃ ಒಂದು ಕೆಜಿಗೆ 1,000ದಿಂದ 1,200 ರೂ. ಇರಬಹುದು. ಆದರೆ, ಅಸ್ಸಾಂನ ವಿಶೇಷವಾದ ಟೀ ಪುಡಿ ಪ್ರತಿ ಕೆಜಿಗೆ 1 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದೆ ಎಂದರೆ ನೀವು ನಂಬುತ್ತೀರಾ? ಅಂಥದ್ದೇನಿದೆ ಆ ಚಹಾ ಪುಡಿಯಲ್ಲಿ! ಎಂದು ಆಶ್ಚರ್ಯವಾಗುತ್ತಿದೆಯಾ?
ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಪಭೋಜನ್ ಗೋಲ್ಡ್ ಟೀ ಎಂಬ ಅಪರೂಪದ ಸಾವಯವ ಚಹಾ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಸೋಮವಾರ ಜೋರ್ಹತ್‌ನ ಹರಾಜು ಕೇಂದ್ರದಲ್ಲಿ 1 ಕೆಜಿ ಚಹಾ ಪುಡಿಯನ್ನು 1 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ.
ಇದನ್ನೂ ಓದಿ: ನೀವು ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವ ಮುಂಚೆ ಇದನ್ನು ಒಮ್ಮೆ ಓದಿ
ಜೋರ್ಹತ್ ಟೀ ಹರಾಜು ಕೇಂದ್ರದ (ಜೆಟಿಎಸಿ) ಅಧಿಕಾರಿಯೊಬ್ಬರು ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್ ಮಾರಾಟ ಮಾಡಿದ ಚಹಾವನ್ನು ಅಸ್ಸಾಂ ಮೂಲದ ಟೀ ಬ್ರ್ಯಾಂಡ್ ಎಸಾಹ್ ಟೀ ಖರೀದಿಸಿದೆ ಎಂದು ಹೇಳಿದ್ದಾರೆ. ಪಭೋಜನ್ ಗೋಲ್ಡ್ ಟೀ ಅತ್ಯಂತ ವಿಶೇಷವಾಗಿದ್ದು, ಹಳದಿ ಬಣ್ಣದ ಈ ಟೀ ಬಹಳ ಹಿತವಾದ ರುಚಿಯನ್ನು ನೀಡುತ್ತದೆ. ಟೀ ಎಸ್ಟೇಟ್‌ನಿಂದ ಆಯ್ದು, ಕೊಯ್ದು ತಂದ ಎರಡನೇ ಫ್ಲಶ್ ಟಿಪ್ಸ್‌ನಿಂದ ಇದನ್ನು ತಯಾರಿಸಲಾಗುತ್ತದೆ. ಈ ಟೀ ಎಲೆಯನ್ನು ಕುದಿಸುತ್ತಿದ್ದಂತೆ ಚಿನ್ನದ ಬಣ್ಣಕ್ಕೆ ತಿರುಗುತ್ತವೆ. ಇದರಿಂದ ಟೀ ಕೂಡ ಹಳದಿ ಬಣ್ಣವಾಗುತ್ತದೆ.
ಈ ವಿಶೇಷವಾದ ಟೀಯ ಬಣ್ಣ ಮಾತ್ರವಲ್ಲ ಸುವಾಸನೆ ಹಾಗೂ ರುಚಿಯೂ ಅಷ್ಟೇ ವಿಶೇಷವಾಗಿದೆ. ಈ ಚಹಾಕ್ಕೆ ಪ್ರಪಂಚದಾದ್ಯಂತ ಗ್ರಾಹಕರಿದ್ದಾರೆ. ಒಂದು ಬಾರಿ ಈ ಚಹಾ ಕುಡಿದವರು ಇದರ ರುಚಿಗೆ ಅಡಿಕ್ಟ್ ಆಗಿಬಿಡುತ್ತಾರೆ. ಅಸ್ಸಾಂ ಚಹಾ ಉದ್ಯಮವು ಕಳೆದುಕೊಂಡ ಖ್ಯಾತಿಯನ್ನು ಮರಳಿ ಪಡೆಯಲು ಈ ವಿಶೇಷವಾದ ಚಹಾ ಸಹಾಯ ಮಾಡುತ್ತಿದೆ.
ಇದನ್ನೂ ಓದಿ: Success Story: ಇಂಜಿನಿಯರಿಂಗ್ ಕೆಲಸ ಬಿಟ್ಟು ಚಹಾ ಅಂಗಡಿ ತೆರೆದ ಯುವಕ; ತಿಂಗಳ ಆದಾಯ ಕೇಳಿದ್ರೆ ಅಚ್ಚರಿ ಪಡ್ತೀರ!
ಪಭೋಜನ್ ಆರ್ಗ್ಯಾನಿಕ್ ಟೀ ಎಸ್ಟೇಟ್‌ನ ಮಾಲೀಕ ರಾಖಿ ದತ್ತಾ ಸೈಕಿಯಾ ಈ ಬಗ್ಗೆ ಮಾತನಾಡಿದ್ದು, “ನಾವು ಈ ಅಪರೂಪದ ವಿಧದ ಚಹಾವನ್ನು ಕೇವಲ ಒಂದು ಕೆಜಿ ಉತ್ಪಾದಿಸಿದ್ದೇವೆ. ನಮ್ಮ ಚಹಾಗೆ ಇತಿಹಾಸವನ್ನು ಸೃಷ್ಟಿಸಿದ ಈ ದಾಖಲೆಯ ಬೆಲೆ ಸಿಕ್ಕಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಅಸ್ಸಾಂ ಚಹಾ ಉದ್ಯಮವು ಕಳೆದುಕೊಂಡಿದ್ದ ಖ್ಯಾತಿಯನ್ನು ಮರಳಿ ಪಡೆಯಲು ಈ ಟೀ ಪುಡಿ ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ